Advertisement
ಎರಡು ವರ್ಷಗಳ ಹಿಂದೆ ಸುಳ್ಯದಲ್ಲಿ ರೋಗ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಆಗಿನ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮತ್ತು ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸಭೆ ಕರೆದು ಸರ್ವೇಗೆ ಆದೇಶಿಸಿದ್ದರು. ಅದರಂತೆ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಗಳು ಹಾಗೂ ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್)ಗಳು ಸಂಯುಕ್ತವಾಗಿ ಸುಳ್ಯದ 10 ಗ್ರಾಮಗಳಲ್ಲಿ ಅಧ್ಯಯನ ನಡೆಸಿದ್ದು, 1,217 ಹೆಕ್ಟೇರ್ ಪ್ರದೇಶದಲ್ಲಿ ರೋಗ ಬಂದಿರುವುದನ್ನು ಪತ್ತೆಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸಿದ್ದವು. ಇದರನ್ವಯ 2020- 21ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 25 ಕೋಟಿ ರೂ.ಗಳನ್ನು ರೋಗದ ಬಗ್ಗೆ ಸಂಶೋಧನೆ ಮತ್ತು ಪರ್ಯಾಯ ಬೆಳೆಗಾಗಿ ಕಾದಿರಿಸಿದ್ದರು. ಬಳಿಕ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳೂ ಸಮಿತಿಯಲ್ಲಿದ್ದಾರೆ. ಸಮಿತಿಯು 2-3 ಸಭೆಗಳನ್ನು ನಡೆಸಿದ್ದು, ಆ ಬಳಿಕ ಯಾವುದೇ ಪ್ರಗತಿ ಆಗಿಲ್ಲ.
Related Articles
Advertisement
ರೋಗ ಮೊದಲ ಬಾರಿಗೆ 100 ವರ್ಷಗಳ ಹಿಂದೆ ಕೇರಳದಲ್ಲಿ ಕಾಣಿಸಿತ್ತು. ದ.ಕ.ದಲ್ಲಿ ಮೊದಲ ಬಾರಿಗೆ 1963ರಲ್ಲಿ ಸುಳ್ಯದ ಅರಂತೋಡಿನಲ್ಲಿ ಕಾಣಿಸಿಕೊಂಡಿತ್ತು. ಈಗ ಸುಳ್ಯ ಹಾಗೂ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹೆಚ್ಚು ಕಾಣಿಸುತ್ತಿದೆ. ಸಮರ್ಪಕ ಔಷಧ ಇಲ್ಲ. ನೀರು ನಿಲ್ಲುವ ಜಾಗದಲ್ಲಿ, ನೀರು ಬಸಿದು ಹೋಗದ ತೋಟದಲ್ಲಿ ಈ ರೋಗ ಹೆಚ್ಚು ಕಾಣಿಸುತ್ತಿದೆ.– ಕೇಶವ ಭಟ್, ವಿಜ್ಞಾನಿ, ಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ
ಸುಳ್ಯ ಪರಿಸರದಲ್ಲಿ ಶೇ. 50ರಷ್ಟು ಬೆಳೆ ಹಾನಿಯಾಗಿದೆ. ಮಡಿಕೇರಿ, ಕೊಪ್ಪ, ಶೃಂಗೇರಿಗಳಿಲ್ಲಿಯೂ ಹಾನಿಯಾಗಿದೆ. ಅಧಿಕ ನಷ್ಟ ಅನುಭವಿಸಿದವರಿಗೆ ಅವರ ಸಹಕಾರಿ ಸಾಲ ಮನ್ನಾ ಮಾಡ ಬೇಕು ಹಾಗೂ ಹೊಸ ಬೆಳೆ ಬೆಳೆಯಲು ಹೊಸ ಸಾಲ ನೀಡ ಬೇಕು. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.– ಕಿರಣ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ
ಇದುವರೆಗಿನ ಸರಕಾರದ ನಿರ್ಣಯದಂತೆ ಬಜೆಟ್ ಅನುದಾನದಲ್ಲಿ ಪರ್ಯಾಯ ಬೆಳೆಗೆ ಮಾತ್ರ ಅವಕಾಶ. ನಷ್ಟ ಪರಿಹಾರಕ್ಕೆ ಅವಕಾಶವಿಲ್ಲ. ಆದರೆ ಅಡಿಕೆ ಬೆಳೆಗಾರರು ನಷ್ಟ ಪರಿಹಾರ ಕೊಡಿ ಎಂಬ ಬೇಡಿಕೆ ಮಂಡಿಸುತ್ತಿದ್ದಾರೆ.– ದರ್ಶನ್, ತೋಟಗಾರಿಕೆ ಇಲಾಖೆ ಅಧಿಕಾರಿ
– ಹಿಲರಿ ಕ್ರಾಸ್ತಾ