Advertisement

ಬಹುರೂಪಿ “ಹಾಳೆ’ 

12:30 AM Jan 18, 2019 | |

ಕಳೆದ ವಾರ ಜರುಗಿದ ನನ್ನ ಅತ್ತೆಯ ಮಗನ ಮದುವೆಯಲ್ಲಿ ಊಟದ ನಂತರ ಎಲ್ಲರಿಗೂ ಐಸ್‌ಕ್ರೀಮ್‌ ಇತ್ತು. ತಿನ್ನಲು ಹೋದ ನನಗೆ ಒಂದು ಆಶ್ಚರ್ಯ ಕಾದಿತ್ತು. ಒಬ್ಬ ಯುವಕ ಎಲ್ಲರಿಗೂ ಪ್ಲಾಸ್ಟಿಕ್‌ ಕಪ್‌ನ ಬದಲಾಗಿ ಅಡಿಕೆ ಹಾಳೆಯಿಂದ ತಯಾರಿಸಲಾದ ಕಪ್‌ನಲ್ಲಿ ಐಸ್‌ಕ್ರೀಮ್‌ ಹಾಕಿ ಕೊಡುತ್ತಿದ್ದ ! ಅಡಿಕೆ ಹಾಳೆಯಿಂದ ಐಸ್‌ಕ್ರೀಮ್‌ ಕಪ್ಪನ್ನೂ ತಯಾರಿಸಬಹುದು ಎಂದು ನನಗೆ ಆಗಲೇ ಗೊತ್ತಾದದ್ದು. ದೋಣಿಯಾಕಾರದ ಆ ಕಪ್‌ ನೋಡಲು ಆಕರ್ಷಕವಾಗಿತ್ತು. ಕೈಯಲ್ಲಿ ಹಿಡಿಯಲೂ ಹಿತಕರವಾಗಿತ್ತು. ಐಸ್‌ಕ್ರೀಮ್‌ ತಿನ್ನುತ್ತಿರುವ ಎಲ್ಲರೂ ಈ ಕಪ್ಪನ್ನು ಹೊಗಳುವವರೇ. ಅಡಿಕೆ ಹಾಳೆಯ ಬೌಲನ್ನು ಐಸ್‌ಕ್ರೀಮ್‌ ಕಪ್‌ಆಗಿ ಬಳಸುತ್ತಿರುವುದು ಒಂದು ಹೊಸ ಪ್ರಯೋಗ. ಸಂತೆ, ಮದುವೆ, ಸಮ್ಮೇಳನ ಇತ್ಯಾದಿ ಜನ ಸೇರುವ ಜಾಗಗಳಲ್ಲಿ ಐಸ್‌ಕ್ರೀಮ್‌ ಮಾರಾಟ ಮಾಡುವವರು ಇದ್ದೇ ಇರುತ್ತಾರೆ. ಮಾರಾಟಗಾರರು ಸಾಮಾನ್ಯವಾಗಿ ಪ್ಲಾಸ್ಟಿಕ್‌ ಕಪ್‌ಗ್ಳಲ್ಲಿ ಐಸ್‌ಕ್ರೀಮನ್ನು ಮಾರುತ್ತಾರೆ. ತಿಂದು ಎಸೆದ ಐಸ್‌ಕ್ರೀಮ್‌ ಕಪ್‌ಗ್ಳು ರಸ್ತೆ ಬದಿಯಲ್ಲಿ, ಅಂಗಡಿಗಳ ಮುಂದೆ, ಮದುವೆ ಛತ್ರದ ಅಂಗಳದಲ್ಲಿ ಹೀಗೆ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಕೊನೆಗೆ ಅವು ತೋಡಿಗೆ, ಹೊಳೆಗೆ, ಸಮುದ್ರಕ್ಕೆ ಸೇರುತ್ತವೆ. ಸಾಗರ ಸೇರುತ್ತಿರುವ ಪ್ಲಾಸ್ಟಿಕ್‌ಗಳು ಸಾಗರ ಜೀವಿಗಳಿಗೆ ಮಾರಕವಾಗುತ್ತಿದೆ. ಹಾಳೆ ಬಳಸಿ ಬಿಸಾಡುವ ವಸ್ತುವೇ ಆದರೂ ಇದು ಮಣ್ಣಿಗೆ, ಹರಿಯುವ ನೀರಿಗೆ, ಜಲಚರಗಳಿಗೆ ಅಪಾಯ ತರುವುದಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಐಸ್‌ಕ್ರೀಮ್‌ ವಿತರಿಸುವವರು ಪ್ಲಾಸ್ಟಿಕ್‌ ಕಪ್‌ನ ಬದಲಾಗಿ ಅಡಿಕೆ ಹಾಳೆ ಕಪ್ಪನ್ನು ಉಪಯೋಗಿಸಿದರೆ ಪರಿಸರ ಉಳಿಸಲು ನಮ್ಮ ಕಿಂಚಿತ್‌ ಕೊಡುಗೆ ಸಲ್ಲಿಸಿದಂತಾಗುತ್ತದೆ. ಮಾತ್ರವಲ್ಲ, ರೈತನ ಕಿಸೆಗೆ ಪುಡಿಗಾಸು ಸೇರುತ್ತದೆ. ತೋಟದಲ್ಲಿ ಕಸವಾಗಿ ಹೋಗುವ ಹಾಳೆಗೆ ಮಾನ ಬಂದಂತೆಯೂ ಆಗುತ್ತದೆ. ಪಂಚತಾರಾ ಹೊಟೇಲಿನವರೂ ಈ ಬಗ್ಗೆ ಗಮನಹರಿಸಿದರೆ ಎಷ್ಟು ಒಳ್ಳೆಯದು? ಹಾಳೆ ಕಪ್‌ನಲ್ಲಿ ಐಸ್‌ಕ್ರೀಮ್‌ ತಿನ್ನುತ್ತಿರುವಾಗ ನನ್ನ ಮನ ನೆನಪಿನ ಹಾಳೆಯನ್ನು ತಿರುವತೊಡಗಿತು.

Advertisement

    ಅಂದು ಕರಾವಳಿ, ಮಲೆನಾಡಿನ ಕೃಷಿಕರ ಮನೆಮನೆಗಳಲ್ಲಿ ಹಾಳೆ ಅವಿಭಾಜ್ಯ ಅಂಗವಾಗಿತ್ತು. “ದೇವನೊಬ್ಬ ನಾಮ ಹಲವು’ ಎಂಬಂತೆ ಹಿಂದಿನ ತಲೆಮಾರಿನವರು ತಮ್ಮ ಬಳಕೆಗೆ ಬೇಕಾದಂತೆ ಹಾಳೆಗೆ ವಿವಿಧ ರೂಪ ಕೊಟ್ಟು ಅದನ್ನು ವಿವಿಧ ಹೆಸರಿನಿಂದ ಕರೆಯುತ್ತಿದ್ದರು. ನನ್ನ ಅಜ್ಜಿ, ಅಮ್ಮ, ಅತ್ತೆ ದೋಸೆ ಹೊಯ್ಯುವ ಮೊದಲು ಕಾವಲಿಗೆ ಎಣ್ಣೆ ಹಚ್ಚಲು ಹಾಳೆ ತುಂಡನ್ನು ಬಳಸುತ್ತಾರೆ. ಅಂಗೈ ಅಗಲಕ್ಕಿಂತ ಸ್ವಲ್ಪ$ ಸಣ್ಣ ಗಾತ್ರದ ಈ ತುಂಡಿಗೆ ನಾವು “ಹಾಳೆಕಡೆ’ ಎಂದು ಕರೆಯುತ್ತೇವೆ. ನಾನೂ ಅದನ್ನೇ ಮುಂದುವರಿಸಿದ್ದೇನೆ. ಒಮ್ಮೆ ಮುಂಬೈಯಲ್ಲಿರುವ ಯುವ ಗೆಳತಿಯೊಬ್ಬಳು ನಮ್ಮ ಮನೆಗೆ ಬಂದಿದ್ದಳು. ಬೆಳಗ್ಗಿನ ತಿಂಡಿಗೆ ದೋಸೆ ಮಾಡಿದ್ದೆ. ಅವಳಿಗೆ ನಾನು ಹಾಳೆ ತುಂಡಿನಲ್ಲಿ ದೋಸೆ ಕಾವಲಿಗೆ ಎಣ್ಣೆ ಹಚ್ಚುವುದನ್ನು ನೋಡಿ ಆಶ್ಚರ್ಯ. ಅವಳೂರಿನಲ್ಲಿ ಕಾವಲಿಗೆ ಎಣ್ಣೆ ಹಚ್ಚಲು ಪ್ಲಾಸ್ಟಿಕ್‌ ಬ್ರಶ್‌ ಬಳಸುತ್ತಾರಂತೆ. ಆ ಬ್ರಶ್‌ ಕಾವಲಿ ಬಿಸಿಗೆ ಕರಗುವುದಿಲ್ಲವಂತೆ! ಅದು ಅಲ್ಲಿನ ಮಾಲ್‌ಗ‌ಳಲ್ಲಿ ಸಿಗುತ್ತದಂತೆ. ಅದಕ್ಕಿಂತ ಇದೇ ಚೆನ್ನ ಎಂದು ಅವಳಿಗೆ ಅನಿಸಿ ನನ್ನನ್ನು ಕೇಳಿ ಒಂದು ವರ್ಷಕ್ಕಾಗುವಷ್ಟು ಹಾಳೆಕಡೆಯನ್ನು ಪಡೆದುಕೊಂಡಿದ್ದಳು. ಮಳೆಗಾಲದಲ್ಲಿ ಹಾಳೆ ಬೀಳುವುದಿಲ್ಲ. ಬಿದ್ದರೂ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಮಳೆಗಾಲಕ್ಕೆ ಬೇಕಾದ ಹಾಳೆಯನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ.

    ನಮ್ಮ ಹಿರಿಯರು ಬಚ್ಚಲುಮನೆ ನೀರು ಕಾಯಿಸಲು ಉಪಯೋಗಿಸುತ್ತಿದ್ದ ವಸ್ತುಗಳಲ್ಲಿ ಹಾಳೆಯೂ ಒಂದು. ನನ್ನನ್ನೂ ಸೇರಿಸಿ ಕರಾವಳಿಯ ಕೃಷಿಕ ಮಹಿಳೆಯರು ಹಲಸಿನಕಾಯಿ ಕತ್ತರಿಸುವಾಗ ಅಥವಾ ಯಾವುದೇ ತರಕಾರಿ ಕತ್ತರಿಸುವಾಗ ಮೆಟ್ಟುಕತ್ತಿಯ ಅಡಿಗೆ ಅಡಿಕೆ ಹಾಳೆ ಇಡುತ್ತೇವೆ. ನನ್ನ ತಂದೆ ಬೇಸಿಗೆಯಲ್ಲಿ ಹಾಳೆಯನ್ನು ತುಂಡು ಮಾಡಿ ಒಣಗಿಸಿ ಇಟ್ಟುಕೊಂಡು ಜೋರು ಮಳೆ ಬರುವ ಹೊತ್ತಲ್ಲಿ ಹಸುಗಳಿಗೆ ತಿನ್ನಲು ಕೊಡುತ್ತಾರೆ. ಆಗ ಅವುಗಳು ಜೊಲ್ಲು ಸುರಿಸುತ್ತ ಹಾಳೆಯನ್ನು “ಕಟುಂ ಕುಟುಂ’ ಎಂದು ಹಲಸಿನ ಬೀಜದ “ಸಾಂತಾಣಿ’ ತಿನ್ನುವಂತೆ ತಿನ್ನುವುದನ್ನು ನೋಡಬೇಕು! ಇದನ್ನು ತಿನ್ನುವುದರಿಂದ ಮಳೆಗಾಲದ ಥಂಡಿ ಹವಾಮಾನಕ್ಕೆ ಅವುಗಳ ಶರೀರವೂ ಬೆಚ್ಚಗಾಗುತ್ತದೆ.

    ನಾನು, ನನ್ನ ಮಕ್ಕಳು, ಶಿಶುಗಳಾಗಿರುವ ಹಾಳೆಯ ಮೇಲೆ ಮಲಗಿಯೇ ದೊಡ್ಡವರಾದದ್ದು. ಹಿಂದೆ ಹಳ್ಳಿಯಲ್ಲಿ ಮಗುವಿನ ಮೈಗೆ ಎಣ್ಣೆ ಹಚ್ಚಿದ ಮೇಲೆ ಹಾಳೆಯಲ್ಲಿ ಮಲಗಿಸಿ ನಂತರ ಸ್ನಾನ ಮಾಡಿಸುತ್ತಿದ್ದರು. ತೊಟ್ಟಿಲಲ್ಲಿ ಮಗುವನ್ನು ಮಲಗಿಸುವಾಗಲೂ ಮೊದಲು ಹಾಳೆ ಇಟ್ಟು ಅದರ ಮೇಲೆೆ ಹಳೆ ಸೀರೆಯನ್ನೋ, ಲುಂಗಿಯನ್ನೋ ಹಾಕಿ ಅದರಲ್ಲಿ ಮಲಗಿಸುತ್ತಿದ್ದರು. ಮಗು ಅತ್ತರೆ ಹಾಳೆಯ ಬೆನ್ನನ್ನು ಉಗುರಿನಿಂದ ಉಜ್ಜಿದರೆ ಸಾಕು, ಉಂಟಾಗುವ ಕರಕರ ಸದ್ದಿಗೆ ಸುಮ್ಮನಾಗುತ್ತಿತ್ತು. ಮಗುವಿನ ಹೇಲು ಬಾಚುತ್ತಿದ್ದದ್ದೂ ಹಾಳೆಯಲ್ಲಿಯೇ.  

    ನನ್ನ ಬಾಲ್ಯ ನೆನಪಾಗುತ್ತದೆ. ಆಗ ನನ್ನ ಅಜ್ಜನ ಮನೆಯಲ್ಲಿ ಊಟಕ್ಕೆ ಬಟ್ಟಲು ದೊಡ್ಡ ಮಾವನಿಗೆ ಮಾತ್ರ ಇತ್ತು. ಉಳಿದ ಎಲ್ಲರಿಗೂ ಹಾಳೆಯೇ. ಅಜ್ಜ ತೋಟದಿಂದ ಬರುವಾಗ ಖಾಲಿ ಕೈಯಲ್ಲಿ ಬರುವುದೆಂದೇ ಇಲ್ಲ. ಹಾಳೆಯ ದೊಡ್ಡ ಕಟ್ಟ ಅವರ ಬಗಲಲ್ಲಿರುತ್ತಿತ್ತು. ಅವರು ಮುಸ್ಸಂಜೆ ಹೊತ್ತಲ್ಲಿ ಅಥವಾ ಮಧ್ಯಾಹ್ನ ಊಟದ ನಂತರ ಕಾಲು ನೀಡಿ ಕುಳಿತು ಹಾಳೆಯನ್ನು ಎರಡು ತೊಡೆಗಳ ನಡುವೆ ಸಿಕ್ಕಿಸಿ ಚೂರಿಯಿಂದ ಅದರ ಎರಡೂ ಬದಿಯನ್ನು ಕೊçದು ಕೊನೆಗೆ ಬೆನ್ನಿನ ಭಾಗದಲ್ಲಿರುವ ನಾರನ್ನು ಹಾಳೆ ಹರಿಯದಂತೆ ಜಾಗರೂಕತೆಯಿಂದ ತೆಗೆಯುತ್ತಿದ್ದರು. ಇಷ್ಟು ಮಾಡಿದರೆ ಹಾಳೆ ಊಟ ಮಾಡಲು ತಯಾರು ಆದಂತೆ. ಇದನ್ನು ಒಣಗಿಸಿ ಅಟ್ಟದಲ್ಲಿ ಇಟ್ಟರೆ ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ. ಅಜ್ಜ ಬೇಸಿಗೆಯಲ್ಲಿ ಒಂದು ಸಾವಿರದಷ್ಟು ಹಾಳೆಯನ್ನು ಸಂಗ್ರಹಿಸಿಡುತ್ತಿದ್ದರೆಂದರೆ ನೀವು ನಂಬಬೇಕು! ಮನೆ ಅಳಿಯ ಬಂದರೂ ಅಜ್ಜನ ಮನೆಯಲ್ಲಿ ಆಗ ಊಟಕ್ಕೆ ಬಳಸುತ್ತಿದ್ದದ್ದು ಈ ಹಾಳೆಯನ್ನೇ. ಪೂಜೆ, ಮದುವೆ ಇತ್ಯಾದಿ ಸಮಾರಂಭಗಳಿದ್ದಾಗ ಮಾತ್ರ ಬಾಳೆಲೆ ಬಳಸುತ್ತಿದ್ದರು. ಅಜ್ಜನಿಗೆ ಬಟ್ಟಲು ಖರೀದಿಸುವ ಶಕ್ತಿ ಇರಲಿಲ್ಲವೆಂದಲ್ಲ. ಹಾಳೆಯೇ ಬೇಕಾದಷ್ಟು ಇರುವಾಗ ಬಟ್ಟಲಿನ ಹಂಗ್ಯಾಕೆ? ಸಾಲದ್ದಕ್ಕೆ ಮನೆ ಹೆಂಗಸರಿಗೆ ಬಟ್ಟಲು ತೊಳೆಯುವ ಕಷ್ಟ ಯಾಕೆ? ನೀರಿನ ಉಳಿತಾಯವೂ ಆಗುತ್ತದಲ್ಲ ಎಂಬುದು ಅಜ್ಜನ ಲೆಕ್ಕಾಚಾರ. ಈಗ ಅಜ್ಜನ ಜೊತೆ ಹಾಳೆಯೂಟವೂ ಹೋಯಿತೆನ್ನಿ. ಆದರೆ, ಅದರ ಸುಧಾರಿತ ರೂಪ ಯಂತ್ರದಿಂದ ತಯಾರಿಸುವ ಹಾಳೆ ಬಟ್ಟಲು ಇಂದು ಮನೆಯ ನಿತ್ಯದ ಊಟಕ್ಕೆ ಅಲ್ಲವಾದರೂ ಸಮಾರಂಭಗಳಲ್ಲಿ ಸಣ್ಣ ಮಟ್ಟದಲ್ಲಾದರೂ ಸ್ಥಾನ ಪಡೆಯುತ್ತಿರುವುದು ಸಂತಸದ ವಿಚಾರ. 

Advertisement

ಅಡಿಕೆ ಹಾಳೆಯ ಬೀಸಣಿಗೆ
    ನನ್ನ ಅಜ್ಜಿ ಎಲ್ಲಿ ಹೋಗುತ್ತಿದ್ದರೂ ಅವರ ಕೈಯಲ್ಲೊಂದು ಹಾಳೆಯ ಬೀಸಣಿಕೆಯೊಂದು ಇರುತ್ತಿತ್ತು. ಅದು ಸೆಕೆ ಆದಾಗ ಗಾಳಿ ಹಾಕಲು, ಬಿಸಿಲು ಮತ್ತು ಮಳೆ ಇದ್ದಾಗ ತಲೆಗೆ ಅಡ್ಡ ಹಿಡಿಯಲು ಅವರಿಗೆ ಉಪಯೋಗಕ್ಕೆ ಬರುತ್ತಿತ್ತು. ಹಾಳೆ ಬೀಸಣಿಕೆಗೆ “ಬೀಸಾಳೆ’ ಎಂದು ಹೆಸರು. ಅವರು ಸುಡು ಬೇಸಿಗೆಯ ದಿನಗಳಲ್ಲಿ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಬೀಸಾಳೆ ಹಿಡಿದು ಗಾಳಿ ಬೀಸಲು ಕುಳಿತರೆ ಸಾಕು, ಅಲ್ಲೇ ಪಕ್ಕದಲ್ಲಿ ಸೆಕೆಯಿಂದ ಅಳುತ್ತಿರುವ ಮಗುವಿನ ತಾಯಿ, “ನನಗೊಮ್ಮೆ ಕೊಡಿ. ಮಗುವಿಗೆ ಸ್ವಲ್ಪ$ಗಾಳಿ ಹಾಕುತ್ತೇನೆ’ ಎಂದು ತೆಗೆದುಕೊಳ್ಳುವಳು. ಅವಳ‌ ಕೈಯಿಂದ ಇನ್ಯಾರೋ ತೆಗೆದುಕೊಳ್ಳುವರು. ಮತ್ತೆ ಅದು ಅಜ್ಜಿಗೆ ಸಿಗುವುದೆಂದು ಇಲ್ಲ. ಇದು ಪ್ರತಿ ಬಾರಿ ನಡೆಯುವಂಥಾದ್ದು. “ನಿಮಗೆ ಮತ್ತೆ ಸಿಗುವುದಿಲ್ಲವೆಂದು ಗೊತ್ತಿದ್ದೂ ನೀವ್ಯಾಕೆ ಬೇರೆಯವರಿಗೆ ಬೀಸಾಳೆ ಕೊಡುತ್ತೀರಿ?’ ಎಂದು ನಾನು ಅಜ್ಜಿಯಲ್ಲಿ ಕೇಳಿದರೆ, “ನಾನೇನು ಅದನ್ನು ದುಡ್ಡು ಕೊಟ್ಟು ಪಡೆದುಕೊಂಡದ್ದಾ? ಹೋದರೆ ಹೋಗಲಿ. ಇನ್ನೊಂದು ಮಾಡಿದರಾಯಿತು’ ಎಂದು ಬೊಚ್ಚು ಬಾಯಗಲಿಸಿ ನಗುತ್ತಾರೆ. ಹಾಳೆಗೆ ಸಂಬಂಧಿಸಿದಂತೆ ಅಜ್ಜಿಯ ಬಗ್ಗೆ ಇನ್ನೊಂದು ಮಾತು ಹೇಳಬೇಕು. ಅಜ್ಜಿ ಹಲಸಿನ ಋತುವಿನ ಸಮಯದಲ್ಲಿ ಹಲಸಿನ ಹಣ್ಣನ್ನು ಬಾಣಲೆಯಲ್ಲಿ ಹಾಕಿ ಗಂಟೆಗಟ್ಟಲೆ ಕಾಯಿಸಿ ಬೆರಟಿ ಎಂಬ ಕಲ್ಲುಗುಂಡಿನಂತಹ ಸಿಹಿಪಾಕವನ್ನು ತಯಾರಿಸುತ್ತಿದ್ದರು. ಅದನ್ನು ನಾರು ತೆಗೆದ ಒಣಗಿಸಿದ ಹಾಳೆಯಲ್ಲಿ ಕಟ್ಟಿಟ್ಟರೆ ವರ್ಷಕ್ಕೆ ಕೆಡುತ್ತಿರಲಿಲ್ಲ. ನೆಂಟರು ಬಂದಾಗ ಅದರಿಂದ ಸ್ವಲ್ಪ$ತೆಗೆದು ತೆಂಗಿನ ಹಾಲು ಸೇರಿಸಿ ಬೆರಟಿ ಪಾಯಸ ಮಾಡಿದರೆಂದರೆ ಅದಕ್ಕಿರುವ ರುಚಿ ಇಂದಿನ ಯಾವ ಪಾಯಸಕ್ಕೂ ಇಲ್ಲ.

    ನಾನು ತುಂಬ ಚಿಕ್ಕವಳಿರುವಾಗ ನಮ್ಮ ಮನೆಗೆ ಶ್ಯಾಮ ಶಾಸಿŒ ಎಂಬುವರು ಪೂಜೆ, ಶ್ರಾದ್ಧ ಇತ್ಯಾದಿಗಳನ್ನು ಮಾಡಲು ಬರುತ್ತಿದ್ದರು. ಅವರು ಹಾಳೆಯ ಮೆಟ್ಟನ್ನು ಧರಿಸುತ್ತಿದ್ದರು. ಎಲ್ಲಿಯಾದರೂ ಆ ಮೆಟ್ಟು ತುಂಡು ಆದರೆ ಇನ್ನೊಂದು ಜೋಡಿ ಅವರ ಜೋಳಿಗೆಯಲ್ಲಿ ರೆಡಿ ಇರುತ್ತಿತ್ತು. ಹಾಳೆ ಚಪ್ಪಲಿಯನ್ನು 10 ಮೈಲು ದೂರದವರೆಗೆ ನಡೆಯಲು ಬಳಸಬಹುದಂತೆ. ಅವರು ಹೋಗುವಾಗ ನಮ್ಮ ಮನೆಯಿಂದ ಮಜ್ಜಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅದರಲ್ಲೇನು ವಿಶೇಷ ಅಂತೀರಾ? ಆಗ ಈಗಿನಂತೆ ಪ್ಲಾಸ್ಟಿಕ್‌ ತೊಟ್ಟೆ, ಡಬ್ಬ ಇರಲಿಲ್ಲ. ಅವರು ಹಾಳೆಯನ್ನು ಕಲಾತ್ಮಕವಾಗಿ ತೊಟ್ಟೆಯಾಕಾರದಲ್ಲಿ ಮಡಚಿ ಅದರ ಎರಡೂ ಬದಿಯನ್ನು ಬಳ್ಳಿಯಲ್ಲಿ ಬಿಗಿದು ಅದರಲ್ಲಿ ಮಜ್ಜಿಗೆ ಸುರಿದು ಅದನ್ನು ಬೈರಾಸಿನಲ್ಲಿ ಕಟ್ಟಿ ಹೆಗಲಲ್ಲಿ ನೇತಾಡಿಸಿಕೊಂಡು ಭಗವದ್ಗೀತೆಯನ್ನು ಪಠಿಸುತ್ತ ಹೋಗುತ್ತಿದ್ದರು. ಒಂದು ಹನಿ ಮಜ್ಜಿಗೆ ಹೊರಚೆಲ್ಲುತ್ತಿರಲಿಲ್ಲ. 

    ನಾನು ಮತ್ತು ತಮ್ಮ ಶಾಲೆಗೆ ಹೋಗುವ ಕಾಲದಲ್ಲಿ ನಮ್ಮ ನೆರೆಮನೆಗಳಲ್ಲಿ ದೀಪಾವಳಿಗೆ ಪಟಾಕಿ ಬಹಳ ಜೋರಾಗಿ ಇರುತ್ತಿತ್ತು. ನಮಗೂ ಸಿಡಿಸಲು ಆಸೆ. ಆದರೆ, ತಂದೆ ಪಟಾಕಿ ತಂದು ಕೊಡುವುದು ಬಿಡಿ, ಪಟಾಕಿ ಹೆಸರು ಕೇಳಿದರೆ ಉರಿದು ಬೀಳುತ್ತಿದ್ದರು. ಅದಕ್ಕೆ ಏನು ಮಾಡುತ್ತಿದ್ದೇವೆಂದರೆ ನರೆಮನೆಯಲ್ಲಿ “ಢಮಾರ್‌’ ಎಂದು ಪಟಾಕಿ ಶಬ್ದ ಕೇಳುವಾಗ ನಾವು ಬಟ್ಟೆಯನ್ನು ಕಲ್ಲಿಗೆ ಹಾಕಿ ಹೊಡೆಯುವಂತೆ ಹಾಳೆಯನ್ನು ಮಡಚಿ ಚಿಟ್ಟೆಗೆ ಬಡಿಯುತ್ತಿದ್ದೆವು. ಅದು “ಪಟಾಪಟಾ’ ಎಂಬ ದೊಡ್ಡ ಶಬ್ದ ಹೊರಡಿಸುತ್ತಿತ್ತು. ನಾವು ಆ ಹಾಳೆ ಪಟಾಕಿಗಷ್ಟೇ ತೃಪ್ತರಾಗದೆ ಬೇರೆ ವಿಧಿ ಇರಲಿಲ್ಲ. ಈಗ ಪಟಾಕಿಯ ಹೊಗೆ ನೋಡುವಾಗ ನಾವು ಬಾಲ್ಯದಲ್ಲಿ ಬಳಸುತ್ತಿದ್ದ ಪರಿಸರಸ್ನೇಹಿ ಹಾಳೆ ಪಟಾಕಿಯೇ ಚೆನ್ನ ಎಂದು ಅನಿಸುತ್ತದೆ.

ಹಿಂದೆ ಬೋರ್‌ವೆಲ್‌ ಇಲ್ಲದುದರಿಂದ ತೋಟಕ್ಕೆ ಈಗಿನಂತೆ ಸ್ಪ್ರಿಂಕ್ಲ‌ರ್‌, ಡ್ರಿಪ್‌ ವ್ಯವಸ್ಥೆ ಇರಲಿಲ್ಲ. ಆಗ ಕಣಿಯಲ್ಲಿ ನೀರು ನಿಲ್ಲುವಂತೆ ಮಾಡಿ ಹಾಳೆಯ ತುದಿಗಳನ್ನು ಬಳ್ಳಿಯಲ್ಲಿ ಕಟ್ಟಿ “ಚಿಳ್ಳಿ’ ಮಾಡಿ ಅದರಿಂದ ಅಡಕೆ ಮರದ ಬುಡಕ್ಕೆ ನೀರು “ಚೇಪು’ತ್ತಿದ್ದರು. ಅಂದು ಸಾಸಿವೆ ಕಾಳು ಇಲ್ಲದ ಮನೆ ಇದ್ದೀತು, ಹಾಳೆಯಿಂದ ಮಾಡುವ “ಪಡಿಗೆ’ ಎಂಬ ಸಾಧನ ಇಲ್ಲದ ಮನೆಯೇ ಇರಲಿಲ್ಲ. ಪಡಿಗೆ ಎಂದರೆ ಪಾತ್ರೆಯಾಕಾರದಲ್ಲಿ ಹಾಳೆಯನ್ನು ಮಡಚಿ ಸಜ್ಜುಗೊಳಿಸಿರುವಂಥ‌ದ್ದು. ಚಿಳ್ಳಿ ಸಪೂರ ತಳ ಹೊಂದಿದ್ದರೆ ಪಡಿಗೆ ಅಗಲ ತಳ ಹೊಂದಿರುತ್ತದೆ. ಈ ಪಡಿಗೆಯನ್ನು ಅಡಿಕೆ ಹೆಕ್ಕಲು, ಗೇರು ಬೀಜ ಹೆಕ್ಕಲು, ಸಾಮಾನುಗಳನ್ನು ತುಂಬಿಸಿಡುವುದಕ್ಕೂ ಉಪಯೋಗಿಸುತ್ತಿದ್ದರು. ತಲೆಯಲ್ಲಿ ಹುಲ್ಲು, ತೆಂಗಿನಕಾಯಿ ತುಂಬಿದ ಬುಟ್ಟಿ ಇತ್ಯಾದಿ ಹೊರೆ ಹೊರಬೇಕಾದ ಸಂದರ್ಭದಲ್ಲಿ ತಲೆಯಡಿಗೆ “ಮುಟ್ಟಾಳೆ’ ಎಂಬ ಹಾಳೆ ಟೊಪ್ಪಿಯನ್ನು ಧರಿಸುತ್ತಿದ್ದರು. ಇಂದು ಮುಟ್ಟಾಳೆ ಬೇಕೆಂದರೂ ಮಾಡುವವರೇ ಇಲ್ಲ. ಹಟ್ಟಿ ಗೊಬ್ಬರ ಹೊರಲು “ಕೊಟ್ಟಂಪಾಳೆ’ ಎಂಬ ವಿಶೇಷ ರೀತಿಯ ಮುಂಭಾಗ ಉದ್ದ ಇರುವ ಟೊಪ್ಪಿಯನ್ನು ಧರಿಸುತ್ತಿದ್ದರು. ಸೆಗಣಿ ನೀರು ಮುಖಕ್ಕೆ ಬೀಳದಂತೆ ಅದರ ರಚನೆ ಇತ್ತು. ತೆಂಗು, ಅಡಿಕೆ ತುಂಬಿಸಿದ ಗೋಣಿಯ ಬಾಯಿಯನ್ನು ಕಟ್ಟಬೇಕಾದರೆ ಹಸಿ ಹಾಳೆಯನ್ನು ಉದ್ದಕ್ಕೆ ಸೀಳಿ ಬಳ್ಳಿ ಮಾಡಿ ಕಟ್ಟುತ್ತಿದ್ದರು. ಪ್ಲಾಸ್ಟಿಕ್‌ ಬಳ್ಳಿಯ ಅಗತ್ಯವೇ ಹಿಂದಿನವರಿಗೆ ಇರಲಿಲ್ಲ. 

    ಹಳ್ಳಿಗಳಲ್ಲಿ ಅಡಿಕೆ, ತೆಂಗಿನ ಮರ ಹತ್ತುವವರು ತಮ್ಮ ತೊಡೆ ನಡುವಿನ ಭಾಗಕ್ಕೆ ಪೆಟ್ಟಾಗದಂತಿರಲು ಮತ್ತು ಹಾಕಿದ ಬಟ್ಟೆಯೂ ಬಾಳಿಕೆ ಬರಲು ಹನುಮಾನ್‌ ಚಡ್ಡಿಯಂತೆ ಹಾಳೆಯನ್ನು ಬಟ್ಟೆಯ ಮೇಲೆ ಕಟ್ಟುತ್ತಿದ್ದರು. ಮಣ್ಣಿನ ಕೆಲಸ ಮಾಡುವವರು ಮೊಣಗಂಟಿಗೆ ಗುದ್ದಲಿ, ಪಿಕಾಸಿಯಿಂದ ಏಟು ಬೀಳದಂತಿರಲು ಹಾಳೆಯನ್ನು ಲೆಗ್‌ ಪ್ಯಾಡ್‌ನ‌ಂತೆ ಕಾಲಿಗೆ ಬಿಗಿಯುತ್ತಿದ್ದರು. ಈಗಲೂ ಕೆಲವೆಡೆಗಳಲ್ಲಿ ಇದು ಬಳಕೆಯಲ್ಲಿದೆ.

    ನಾವು ಮಕ್ಕಳೆಲ್ಲ ಸೇರಿ ಹಾಳೆಬಂಡಿ ಆಟ ಆಡುವುದನ್ನು ನೆನೆಸಿದರೆ ಈಗ ನಗು ಬರುತ್ತದೆ. ಹಾಳೆಯ ತುದಿ ಭಾಗದ ಸೋಗೆ ಗರಿಯನ್ನೆಲ್ಲ ತೆಗೆದು ದಂಡು ಇಟ್ಟು ಹಾಳೆಯಲ್ಲಿ ಒಬ್ಬರು ಕೂತು ಇನ್ನೊಬ್ಬರು ದಂಡನ್ನು ಹಿಡಿದು ಎಳೆಯುತ್ತ ಹೋಗುವುದು! ಎಲ್ಲಿಯವರೆಗೆ ಎಳೆಯುತ್ತಿದ್ದೇವೆಂದರೆ ಹಾಳೆ ಹರಿದು ಕೂತವರ ಚಡ್ಡಿಯೂ ಹರಿದು ಹೋಗುತ್ತಿತ್ತು. 

ರೈತರು ತಮ್ಮ ತರಕಾರಿ, ಹಣ್ಣುಗಳನ್ನು ಪ್ರಾಣಿ, ಪಕ್ಷಿಗಳಿಂದ ರ‌ಕ್ಷಿಸಲೂ ಹಾಳೆ ಬಳಸುತ್ತಿದ್ದರು. ನನ್ನ ತಂದೆ ಅನಾನಸು ಮಿಡಿ ಬಿಟ್ಟಿತೆಂದರೆ ಸಾಕು ಅದನ್ನು ಕಾಗೆ ತಿನ್ನದಂತೆ ಅದರ ಸುತ್ತಲೂ ಹಾಳೆಗಳನ್ನು ಒಟ್ಟು ಸೇರಿಸಿ ಕಟ್ಟುತ್ತಿದ್ದರು. ಮುಳ್ಳುಸೌತೆ, ಸೋರೆಕಾಯಿಯನ್ನು ನರಿ ತಿನ್ನದಂತೆ ಹಾಳೆಯನ್ನು ಚೀಲದಂತೆ ಮಾಡಿ (ಮೂಡೆ) ತರಕಾರಿಗೆ ಹೊಗಿಸಿ ಇಡುತ್ತಿದ್ದರು.

ನಾನು ಮದುವೆಯಾಗಿ ಬಂದಾಗ ನಮ್ಮದು ಮಣ್ಣಿನ ನೆಲದ ಮನೆಯಾಗಿತ್ತು. ಆದರೆ, ಬಹಳ ದೊಡ್ಡದು. ನಾನು ಸೀರೆಯನ್ನು ಮೇಲಕ್ಕೆತ್ತಿ ಕಟ್ಟಿ ಸೆರಗನ್ನು ಸೊಂಟದಲ್ಲಿ ಸಿಕ್ಕಿಸಿ ಬಗ್ಗಿ ಇಡೀ ಮನೆಯನ್ನು ಹಾಳೆಯಿಂದ ಸೆಗಣಿ ಸಾರಿಸುತ್ತಿದ್ದೆ. ಹೊಸಕಾಲದ ಹುಡುಗಿಯರಿಗೆ ಇದನ್ನು ಹೇಳಿದರೆ ಅರ್ಥವಾಗುತ್ತದೋ ಇಲ್ಲವೋ !

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next