Advertisement

ಶಾಲೆ ಶತಮಾನೋತ್ಸವ ನೆನಪಿಗೆ ಅಡಿಕೆ ತೋಟ

10:10 AM Sep 09, 2018 | Team Udayavani |

ಸುಳ್ಯ: ಶಾಲೆಯ ಶತಮಾನೋತ್ಸವದ ಆಚರಣೆಯನ್ನು ಸ್ಮರಣೀಯವಾಗಿಸಲು ಹಾಗೂ ಶಾಲೆಗೊಂದು ನಿಶ್ಚಿತ ಆದಾಯ ಮೂಲ ಒದಗಿಸಿಕೊಡಲು ಗ್ರಾಮಸ್ಥರು ಅಡಿಕೆ ತೋಟ ನಿರ್ಮಿಸಿಕೊಟ್ಟಿದ್ದಾರೆ! ಸುಳ್ಯ ತಾಲೂಕಿನ ಕನಕಮಜಲು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಇಂತಹ ಪ್ರಯತ್ನವೊಂದು ಯಶಸ್ವಿಯಾಗಿದೆ. ಭವಿಷ್ಯಕ್ಕೆ ಈ ಸರಕಾರಿ ಶಾಲೆಯನ್ನು ಉಳಿಸುವುದಕ್ಕಾಗಿ ಹಾಗೂ ಶಾಲೆಯ ಆರ್ಥಿಕ ಮಟ್ಟ ಹೆಚ್ಚಿಸುವುದಕ್ಕಾಗಿ ಇಂತಹ ವಿನೂತನ ಪ್ರಯತ್ನಕ್ಕೆ ಎಸ್‌ ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಮುಂದಾಗಿರುವುದು ವಿಶೇಷ.

Advertisement

ಊರಿನವರೆಲ್ಲ ಸೇರಿ ಅಡಿಕೆ ತೋಟ ನಿರ್ಮಿಸುವ ಹೆಜ್ಜೆ ಇರಿಸಿದ್ದು, ಈ ವಿನೂತನ ಪ್ರಯತ್ನ ಮಾದರಿಯಾಗಿದೆ. ಕನಕಮಜಲು ಶ್ರೀ ನರಿಯೂರು ರಾಮಣ್ಣ ಗೌಡ ಕಿರಿಯ ಪ್ರಾಥಮಿಕ ಶಾಲೆ ಗ್ರಾಮದ ವಿದ್ಯಾ ದೇಗುಲವಾಗಿ ಮಕ್ಕಳಿಗೆ ಜ್ಞಾನ ಒದಗಿಸುತ್ತಿದೆ. ಆ ಶಾಲೆ ಶತಮಾನದಷ್ಟು ಹಿಂದೆ ಸ್ಥಾಪನೆಗೊಂಡಿದೆ. ಶಿಕ್ಷಣ ಪ್ರೇಮಿ ನರಿಯೂರಿನ ರಾಮಣ್ಣ ಗೌಡ ಶಾಲೆಗೆ ಸ್ಥಳದಾನ ಮಾಡಿದ್ದರು. ಬಳಿಕ ಅವರ ಪುತ್ರ ನರಿಯೂರು ಕೇಶವಾನಂದ ಅವರೂ ಶಾಲೆಗೆ ನೆರವು ನೀಡುತ್ತ ಬಂದಿದ್ದಾರೆ. ಈ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಶಾಲೆ 101ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಶಾಲೆಯ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಬದಲು ಅಡಿಕೆ ತೋಟ ನಿರ್ಮಾಣವಾಗುತ್ತಿದೆ.

1.80 ಎಕ್ರೆಯಲ್ಲಿ ನಿರ್ಮಾಣ
ಇದು ಗ್ರಾಮಸ್ಥರದೇ ಚಿಂತನೆ. ಶಾಲೆಗೆ 2.80 ಎಕ್ರೆ ಜಾಗವಿದೆ. ಈ ಪೈಕಿ ಮೀಸಲಿಟ್ಟ 1.80 ಎಕ್ರೆ ಜಾಗದಲ್ಲಿ ಅಡಿಕೆ ತೋಟ ನಿರ್ಮಿಸಲಾಗಿದೆ. ಆ. 29ರಂದು ಅದರ ಉದ್ಘಾಟನೆಯೂ ಆಗಿದೆ. ಭೂಮಿ ಹದಗೊಳಿಸಿ 276 ಅಡಿಕೆ ಸಸಿ ಹಾಗೂ 8 ತೆಂಗಿನ ಗಿಡಗಳನ್ನು ನೆಟ್ಟಿದ್ದಾರೆ. ಎಸ್‌ಡಿಎಂಸಿ ಸಮಿತಿಯವರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಪ್ರೇಮಿಗಳ ಸಹಿತ ನೂರು ಮಂದಿ ಶ್ರಮ ಸೇವೆ ಮೂಲಕ ಸಸಿಗಳನ್ನು ನೆಟ್ಟಿದ್ದಾರೆ.

ನಿರ್ವಹಣೆಗೆ ಸಮಿತಿ
ಅಡಿಕೆ ತೋಟ ನಿರ್ವಹಣೆಗೆ ರಕ್ಷಣಾ ಸಮಿತಿ ರಚಿಸಲು ಎಸ್‌ಡಿಎಂಸಿ ನಿರ್ಧರಿಸಿದೆ. ಈಗ ಸಮಿತಿ ಸದಸ್ಯರು, ದಾನಿಗಳು ಹಣ ಭರಿಸಿದ್ದಾರೆ. ಶಾಲೆಯ ಕೊಳವೆ ಬಾವಿ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗಿದೆ. ಮುಂದಕ್ಕೆ ನೀರಾವರಿ ಯಂತ್ರಗಳನ್ನು ಶಾಲೆಯ ತೋಟದಲ್ಲೇ ಅಳವಡಿಸಿ ಕೃಷಿ ಚಟುವಟಿಕೆಗೆ ಅಗತ್ಯ ಸಾಮಗ್ರಿ ಖರೀದಿಸುವುದು ನಿರ್ವಹಣ ಸಮಿತಿಯ ಉದ್ದೇಶ.

ಕೃಷಿ, ಪರಿಸರದ ಪಾಠ
ಗ್ರಾಮದಲ್ಲಿ 440 ಮನೆಗಳಿದ್ದು, ಎಲ್ಲ ಮನೆಯವರೂ ಕೃಷಿ ಚಟುವಟಿಕೆಗೆ ಕೈಜೋಡಿಸಿದ್ದಾರೆ. ವಿದ್ಯಾ ದೇಗುಲವನ್ನು ಸ್ವಾವಲಂಬಿಯಾಗಿಸಲು ಮುಂದಾಗಿದ್ದಾರೆ. ಕಳೆದ ವರ್ಷ 94 ಮಕ್ಕಳಿದ್ದ ಈ ಶಾಲೆಯಲ್ಲಿ ಈ ವರ್ಷ 101 ವಿದ್ಯಾರ್ಥಿಗಳಿದ್ದಾರೆ. ಅಡಿಕೆ ತೋಟ ನಿರ್ಮಿಸುವ ಕಾರ್ಯದಲ್ಲಿ ಅವರದೂ ಅಳಿಲು ಸೇವೆ ಇದೆ. ಅಲ್ಲದೆ, ಪಾಠದೊಂದಿಗೆ ಅವರಿಗೆ ಕೃಷಿ ಹಾಗೂ ಪರಿಸರದ ಪ್ರೀತಿಯ ಪಾಠವೂ ಸಿಗುತ್ತಿದೆ.

Advertisement

ಸಾಮೂಹಿಕ ಪ್ರಯತ್ನ 
ಸರಕಾರಿ ಶಾಲೆ ಉಳಿವಿಗೆ ಪುಟ್ಟ ಪ್ರಯತ್ನವಿದು. ಊರಿನ ಹತ್ತು ಸಮಾನ ಮನಸ್ಕರು ಸೇರಿ ಇಂತಹದ್ದೊಂದು ಅಡಿಕೆ ತೋಟವನ್ನು ಶಾಲೆಗಾಗಿ ನಿರ್ಮಿಸಲು ಮುಂದಾಗಿದ್ದೇವೆ. ಇದು ಆರಂಭ.ಮುಂದೆ ಬೇಕಿರುವ ಎಲ್ಲ ವ್ಯವಸ್ಥೆಗಳನ್ನು ಸಾಮೂಹಿಕವಾಗಿ ಯಾವುದೇ ಜಾತಿ, ಮತ, ಪಕ್ಷ ಭೇದವಿಲ್ಲದೆ ಮಾಡುತ್ತೇವೆ. ಸ್ಥಳದಾನಿಗಳ ಸಹಕಾರ ದೊಡ್ಡದಿದೆ.
– ವಾಸುದೇವ ಪೆರಂಬಾರು
  ಎಸ್‌ಡಿಎಂಸಿ ಅಧ್ಯಕ್ಷ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next