Advertisement

ಅಡಿಕೆ ಸೇವನೆ ಹಾನಿಕಾರಕವಲ್ಲ; ಸಂಶೋಧನಾ ವರದಿಯಲ್ಲಿ ಉಲ್ಲೇಖ

12:01 AM Feb 15, 2023 | Team Udayavani |

ವಿಧಾನ ಪರಿಷತ್‌: ರಾಜ್ಯದ ಅಡಿಕೆ ಬೆಳೆಗಾರರು ಖುಷಿ ಪಡುವ ಸಂಗತಿಯೊಂದನ್ನು ಸರ್ಕಾರ ಘೋಷಣೆ ಮಾಡಿದೆ. ಬೆಂಗಳೂರಿನ ಎಸ್‌.ಎಸ್‌.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅಡಿಕೆಯಲ್ಲಿ ಕ್ಯಾನ್ಸರ್‌ ನಿವಾರಕ ಅಂಶ ಇದೆ ಎಂಬ ಸಂಗತಿ ಹೊರಬಿದ್ದಿದೆ.

Advertisement

ಇದರೊಂದಿಗೆ ರಾಜ್ಯದ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಇದು ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ವಿಷಯ ಮಲೆನಾಡು ಸೇರಿದಂತೆ ರಾಜ್ಯದ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ನೂಕಿತ್ತು.

ಕೊಯ್ಲು ವೇಳೆ ಆಗಾಗ್ಗೆ ಕೇಳಿಬರುತ್ತಿದ್ದ ಈ ಮಾತುಗಳು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಳಿತಕ್ಕೂ ಕಾರಣವಾಗುತ್ತಿತ್ತು. 2011ರಲ್ಲಿ ಯುಪಿಎ ಸರಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರಿಂಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನೆ ಎನ್‌ಡಿಎ ಸರಕಾರ ಕೂಡ ಪುನರುಚ್ಚರಿಸಿತ್ತು. ಆ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ಬಗ್ಗೆ ನಾಡಿನ ಅಡಿಕೆ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿತ್ತು. ಈ ವರದಿಯಿಂದ ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿದೆ.

ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ್‌ ಅವರು, ರಾಜ್ಯದಲ್ಲಿ ಕಂಡುಬಂದಿರುವ ಎಲೆಚುಕ್ಕೆ ರೋಗದ ಉಲ್ಬಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಶೋಧನಾ ವರದಿಯನ್ನು ಉಲ್ಲೇಖೀಸಿ ಅಡಿಕೆ ಬೆಳೆಗಾರರು ಆತಂಕ ಪಡುವ ಅಗ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಅಡಿಕೆ ಸೇವನೆಯಿಂದ ಕ್ಯಾನ್ಸರ್‌ ಸೇರಿದಂತೆ ಮತ್ತಿತರ ಮಾರಕ ರೋಗಗಳು ಬರುತ್ತವೆ ಎಂಬ ವಿಚಾರ ಬೆಳೆಗಾರನ್ನು ಚಿಂತೆಗೆ ದೂಡಿತ್ತು. ಆ ಹಿನ್ನೆಲೆಯಲ್ಲಿ ಅಡಿಕೆ ಉತ್ಪನ್ನ ಆರೋಗ್ಯಕ್ಕೆ ಪೂರಕ ಎಂಬುವುದನ್ನು ಸಾಬೀತು ಪಡಿಸಲು ಎಂ.ಎಸ್‌.ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿತ್ತು. ಇದರ ವರದಿ ಮಂಗಳವಾರ ಕೈ ಸೇರಿದ್ದು ಅಡಿಕೆಯಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇಲ್ಲ. ಜತೆದೆ ಕ್ಯಾನ್ಸರ್‌ನಂತ ರೋಗವನ್ನು ತಡೆಗಟ್ಟುವ ಶಕ್ತಿ ಇದರಲ್ಲಿದೆ ಎಂಬ ಸತ್ಯ ಹೊರಬಿದ್ದಿದೆ ಎಂದರು.

Advertisement

ಈ ಹಿಂದೆ ಕೇಂದ್ರ ಸರ್ಕಾರ ಅಡಿಕೆ ಸೇವನೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿತ್ತು. ಈ ಹೊಸ ಸಂಶೋಧನೆಯಿಂದ ಹೊರಬಿದ್ದಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಹಾಗೆಯೇ ಕೆನಡಾ ದೇಶದ ವಿಜ್ಞಾನಿ ಕೂಡ ಸಂಶೋಧನೆ ನಡೆಸಿದ್ದು ಅಡಿಕೆಯಿಂದ ಮಿಲಿಟರಿ ಪಡೆಗೆ ಜಾಕೆಟ್‌ ಕೂಡ ಮಾಡಬಹುದಾಗಿದೆ ಎಂದು ಹೇಳಿದ್ದಾರೆ. ಪೇಂಟ್‌ ಮತ್ತು ವೈನ್‌ ತಯಾರಿಕೆಗೂ ಅಡಿಕೆ ಉತ್ಪನ್ನವನ್ನು ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮೇಲೆ ಒತ್ತಡ
ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗವನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಕೋವಿಡ್‌ ನಂತಹ ಮಾರಕ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯಲಾಗಿದೆ. ಅದೇ ರೀತಿಯಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬಂದಿರುವ ಎಲೆಚುಕ್ಕೆ ರೋಗಕ್ಕೂ ಔಷಧಿ ಕಂಡು ಹಿಡಿಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ರೋಗ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರಿಗೂ ಕೂಡ ತರಬೇತಿ ನೀಡಲಾಗುತ್ತಿದೆ.ಅಡಿಕೆ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗ ಸೇರಿ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಶೃಂಗೇರಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿ ವ್ಯಾಪ್ತಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಂಶೋಧನೆ ಪ್ರಗತಿಯಲ್ಲಿದೆ. ಕೇಂದ್ರ ನೇಮಿಸಿರುವ ವೈಜ್ಞಾನಿಕ ತಂಡ ಈಗಾಗಲೇ ಶಿವಮೊಗ್ಗ, ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದೆ ಎಂದು ಮಾಹಿತಿ ನೀಡಿದರು.

ಬಾಧಿತ ಅಡಿಕೆ ತೋಟಗಳಲ್ಲಿ ಪುನಶ್ಚೇತನ ಕಾರ್ಯಗಳನ್ನು ಕೊಳ್ಳಲು ಇತರೆ ವಾಣಿಜ್ಯ ಬೆಳೆಗಳಾದ ಕೋಕೋ, ಕಾಳುಮೇಣಸು, ತಾಳೆ, ಕಾಫಿ, ಜಾಯಿಕಾಯಿ ಸೇರಿದಂತೆ ಮತ್ತಿತರ ಬೆಳೆಗಳನ್ನು ಬೆಳೆಯಲು ಪ್ರತಿ ಹೇಕ್ಟರ್‌ಗೆ 15 ಸಾವಿರ ರೂ.ಗಳಂತೆ 2 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುತ್ತಿದೆ.ಅಡಿಕೆಗೆ ಪರ್ಯಾಯ ಉತ್ಪನ್ನಗಳನ್ನು ಉತ್ತೇಜಿಸಿ ಪ್ರಚಾರ ಪಡಿಸುವ ಕೆಲಸವನ್ನು ತೋಟಗಾರಿಕೆ ಮತ್ತು ಕೃಷಿ ವಿವಿಯ ಮೂಲಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next