ಚಿತ್ರದುರ್ಗ: ಸತತ ಬರ, ಅಂತರ್ಜಲ ಕುಸಿತ, ಪ್ರಕೃತಿ ವಿಕೋಪದಿಂದ ಕೋಟ್ಯಂತರ ರೂ. ಮೌಲ್ಯದ ಅಡಿಕೆ ಮತ್ತು ತೆಂಗಿನ ಮರಗಳು ಒಣಗಿ ಹೋಗಿವೆ. ಬೆಳೆ ಹಾನಿ ಪರಿಹಾರ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂಟು ತಿಂಗಳು ಕಳೆದರೂ ಪರಿಹಾರ ಮಾತ್ರ ಬಿಡುಗಡೆಯಾಗಿಲ್ಲ.
ಜಿಲ್ಲೆಯ 57, 110 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು ರಾಜ್ಯದಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. 20 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಪ್ರದೇಶದಲ್ಲಿನ ತೆಂಗು ಮತ್ತು ಅಡಿಕೆ ಮರಗಳು ಒಣಗಿ ಹೋಗಿವೆ. 10,103.30 ಹೆಕ್ಟೇರ್ ಪ್ರದೇಶದ 3,26,617 ಸಂಖ್ಯೆಯ ತೆಂಗಿನ ಮರಗಳಿಗೆ 288.89 ಕೋಟಿ ರೂ. ಹಾಗೂ 10042.20 ಹೆಕ್ಟೇರ್ ಪ್ರದೇಶದಲ್ಲಿನ 30,74, 975 ಅಡಿಕೆ ಮರಗಳಿಗೆ 626.98 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು.
ಒಟ್ಟು 20145.50 ಹೆಕ್ಟೇರ್ ಪ್ರದೇಶದಲ್ಲಿನ 34,01,592 ಅಡಿಕೆ ಮತ್ತು ತೆಂಗಿನ ಮರಗಳ ಹಾನಿಯಿಂದಾಗಿ 915.88 ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾನದಂಡದ ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾ ಧಿಕಾರಿಗಳು ಕಳೆದ ವರ್ಷ ಜುಲೈ 4 ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಜಿಲ್ಲೆಯ ರೈತರು ಹರಸಾಹಸ ಮಾಡಿ ಟ್ಯಾಂಕರ್ ಮೂಲಕ ನೀರುಣಿಸಿ ಅಡಿಕೆ ಮತ್ತು ತೆಂಗಿನ ತೋಟ ಉಳಿಸಿಕೊಳ್ಳಲು ಮಾಡಿದ ಭಗೀರಥ ಪ್ರಯತ್ನವೂ ಫಲ ನೀಡಲಿಲ್ಲ. ಅಡಿಕೆ ಮತ್ತು ತೆಂಗಿನ ಮರಗಳು ಒಣಗಿಹೋಗಿ ಕೋಟ್ಯಂತರ ರೂ. ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಸಾವಿರಾರು ಕೊಳವೆಬಾವಿಗಳನ್ನು ಕೊರೆಸಿದರೂ ಯಾವುದರಲ್ಲೂ ನೀರು ಸಿಗಲಿಲ್ಲ. ಕೊನೆಗೆ ಟ್ಯಾಂಕರ್ ಮೂಲಕ ನೀರು ಹಾಕಲಾಯಿತು. ಕೊಳವೆಬಾವಿ, ಟ್ಯಾಂಕರ್ ಮತ್ತು ನೀರಿಗಾಗಿ ರೈತರು ಲಕ್ಷಾಂತರ ರೂ. ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಂಗಳವಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಅಡಿಕೆ, ತೆಂಗು ಬೆಳೆಗಾರರೊಂದಿಗೆ ಸಂವಾದ ನಡೆಸಿದ ಶಾ, ಜಿಲ್ಲೆಯ ಬೆಳೆಗಾರರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ನಿಗದಿಯಾಗಿಲ್ಲ. ಇದು ಜಿಲ್ಲೆಯ ಕೃಷಿಕರಲ್ಲಿ ಸೋಜಿಗ ಮೂಡಿಸಿದೆ.
ಒಣಗಿದ ಪ್ರತಿ ತೆಂಗಿನ ಮರಕ್ಕೆ 20 ಸಾವಿರ ರೂ., ಅಡಿಕೆ ಮರಕ್ಕೆ 10 ಸಾವಿರ ರೂ. ಪರಿಹಾರ ನೀಡಲು ಆಗ್ರಹಿಸಿ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಅಲ್ಲದೆ 2017ನೇ ಸಾಲಿನಲ್ಲಿ ಬೆಳೆ ವಿಮೆ ವಿತರಣೆ ಆಗಿಲ್ಲ. ಈ ಬಗ್ಗೆಯೂ ಅವರ ಗಮನಕ್ಕೆ ತರಲಾಗುವುದು.
ಕೆ.ಪಿ. ಭೂತಯ್ಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ.
ಒಣಗಿ ನಿಂತ ತೆಂಗು ಮತ್ತು ಅಡಿಕೆ ತೋಟಗಳಿಗೆ ಪರಿಹಾರ ನೀಡಿ ಎಂದು ಅಮಿತ್ ಶಾ ಅವರಲ್ಲಿ ಒತ್ತಾಯ ಮಾಡುವುದಿಲ್ಲ. ಆದರೆ ಜಿಲ್ಲೆಯ ರೈತರ ಸ್ಥಿತಿಗತಿ, ಅಡಿಕೆ, ತೆಂಗು ಹಾನಿ ಕುರಿತು ಅವರಿಗೆ ಮನವರಿಕೆ ಮಾಡುತ್ತೇವೆ.
ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ
ಹರಿಯಬ್ಬೆ ಹೆಂಜಾರಪ್ಪ