Advertisement

ಹಾಸ್ಟೆಲ್‌ಗೆ ಭದ್ರತೆ ಕಲ್ಪಿಸಲು ನರ್ಸಿಂಗ್‌ ವಿದ್ಯಾರ್ಥಿಗಳ ಆಗ್ರಹ

12:28 PM Jul 25, 2018 | Team Udayavani |

ಮೈಸೂರು: ನಗರದ ಕೆ.ಆರ್‌.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್‌ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಆಗುಂತು ನುಗ್ಗಿ ದಾಂಧಲೆ ನಡೆಸಿದ್ದನ್ನು ಖಂಡಿಸಿ ಹಾಗೂ ವಿದ್ಯಾರ್ಥಿನಿಲಯಕ್ಕೆ ಹೆಚ್ಚಿನ ಭದ್ರತೆ ನೀಡಬೇಕೆಂದು ಆಗ್ರಹಿಸಿ ನರ್ಸಿಂಗ್‌ ವಿದ್ಯಾರ್ಥಿನಿಯರು ಮಂಗಳವಾರ ಪ್ರತಿಭಟನೆ ನಡೆಸಿದರು. 

Advertisement

ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಾಸ್ಟೆಲ್‌ ವಿದ್ಯಾರ್ಥಿನಿಯರು, ಕೆ.ಆರ್‌.ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್‌ ವಿದ್ಯಾರ್ಥಿನಿಲಯಕ್ಕೆ ಆಗಂತುಕನೊಬ್ಬ ನುಗ್ಗಿ ದಾಂಧಲೆ ನಡೆಸಿರುವುದು ಅಲ್ಲಿನ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ.

ಅಪರಿಚಿತ ವ್ಯಕ್ತಿಯ ವರ್ತನೆಯಿಂದ ಹಾಸ್ಟೆಲ್‌ನಲ್ಲಿರುವ 150 ವಿದ್ಯಾರ್ಥಿನಿಯರಲ್ಲಿ ಭಯ ಆವರಿಸಿದೆ. ಹೀಗಾಗಿ ವಿದ್ಯಾರ್ಥಿನಿಲಯಕ್ಕೆ ಎತ್ತರದ ಕಾಂಪೌಂಡ್‌ ನಿರ್ಮಿಸುವ ಜತೆಗೆ ಸೂಕ್ತ ಭದ್ರತೆ ಒದಗಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಥಿನಿಲಯದಲ್ಲಿರುವ ವಿದ್ಯಾರ್ಥಿನಿಯರೆಲ್ಲಾ ದೂರದ ಊರುಗಳಿಂದ ನರ್ಸಿಂಗ್‌ ವಿದ್ಯಾಭ್ಯಾಸ ಮಾಡಲು ಬಂದಿದ್ದು, ಈ ರೀತಿಯ ಘಟನೆಗಳು ನಡೆದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ.

ಆದ್ದರಿಂದ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ಭದ್ರತೆ ಕಲ್ಪಿಸುವ ಮೂಲಕ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ಸೃಷ್ಟಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಸಂಧ್ಯಾ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 

Advertisement

ಹಾಸ್ಟೆಲ್‌ನಲ್ಲಿರಲು ಹಿಂದೇಟು: ಕೆ.ಆರ್‌.ಆಸ್ಪತ್ರೆಯ ನರ್ಸಿಂಗ್‌ ಕಾಲೇಜಿನ ಹಾಸ್ಟೆಲ್‌ಗೆ ನುಗ್ಗಿದ ವಿಕೃತಕಾಮಿ ವರ್ತನೆಯಿಂದ ಬಹುತೇಕ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿರಲು ಹಿಂದೇಟು ಹಾಕುತ್ತಿದ್ದಾರೆ.

ಇತ್ತೀಚೆಗೆ ಹಾಸ್ಟೆಲ್‌ನಲ್ಲಿ ನಡೆದಿರುವ ಈ ಘಟನೆಯ ಬೆನ್ನಲ್ಲೆ ಆಗುಂತಕನೊಬ್ಬ ಹಾಸ್ಟೆಲ್‌ಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಹೊಡೆದು ವಿದ್ಯಾರ್ಥಿನಿಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಆದ್ದರಿಂದ ಹಾಸ್ಟೆಲ್‌ನಲ್ಲಿರುವ ಹಲವು ವಿದ್ಯಾರ್ಥಿನಿಯರು ರಕ್ಷಣೆ ಇಲ್ಲದ ಸ್ಥಳದಲ್ಲಿರುವುದಕ್ಕಿಂತ ಮನೆಗೆ ಹೋಗುವುದೇ ಉತ್ತಮವೆಂದು ಪಟ್ಟು ಹಿಡಿದಿದ್ದು, ಇನ್ನೂ ಕೆಲವರು ತಮ್ಮ ಪೋಷಕರೊಂದಿಗೆ ಈಗಾಗಲೇ ಮನೆಗೆ ಹಿಂದಿರುಗುತ್ತಿದ್ದಾರೆ. ಇನ್ನೆರಡು ವಾರದಲ್ಲಿ ಪರೀಕ್ಷೆ ಎದುರಾಗಲಿದ್ದು ಇದರ ಬೆನ್ನಲ್ಲೆ ಇಂತಹ ಘಟನೆ ನಡೆದಿರುವುದು ವಿದ್ಯಾರ್ಥಿನಿಯರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. 

Advertisement

Udayavani is now on Telegram. Click here to join our channel and stay updated with the latest news.

Next