ಖಾಸಗಿ ಆಸ್ಪತ್ರೆಗಳಲ್ಲಿ ಹಳಿ ತಪ್ಪಿದ ನಿತ್ಯ ನಿರ್ವಹಣೆ
ಕಾಸರಗೋಡು: ಸುಪ್ರೀಂಕೋರ್ಟ್ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಇಂಡಿಯನ್ ನರ್ಸಸ್ ಅಸೋಸಿಯೇಶನ್ ನೇತೃತ್ವದಲ್ಲಿ ದಾದಿಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ದೈನಂದಿನ ನಿರ್ವಹಣೆ ಮೇಲೆ ಗಾಢವಾದ ಪರಿಣಾಮ ಬಿದ್ದಿದ್ದು, ಆಸ್ಪತ್ರೆ ಚಟುವಟಿಕೆ ಹಳಿ ತಪ್ಪಿದ ಸ್ಥಿತಿಯಂತಾಗಿದೆ.
ಕಾಸರಗೋಡು ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳ ಮುಂದೆ ದಾದಿಯರು ಕಳೆದ ಹಲವು ದಿನಗಳಿಂದ ಚಪ್ಪರ ನಿರ್ಮಿಸಿ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನಿರತರಾಗಿದ್ದಾರೆ.
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಮಳೆಯನ್ನು ಲೆಕ್ಕಿಸದೆ ರಸ್ತೆ ಬದಿ ತಮ್ಮ ಬೇಡಿಕೆಗಳನ್ನೊಳಗೊಂಡ ಘೋಷಣೆಗಳನ್ನು ಮೊಳಗಿಸುತ್ತಾ ಮುಷ್ಕರ ಮುಂದುವರಿದಿದೆ. ದಾದಿಯರು ಮುಷ್ಕರದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಅಗತ್ಯದ ಕೆಲಸಗಳಿಗೆ ಪರ್ಯಾಯ ನರ್ಸ್‌ಗಳು ಲಭಿಸದೇ ಇರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವುದನ್ನು ಕಡಿಮೆ ಮಾಡಲಾಗಿದೆ. ಇನ್ನು ಕೆಲವು ಆಸ್ಪತ್ರೆಗಳಲ್ಲೂ ಮುಷ್ಕರದಲ್ಲಿ ನಿರತರಾದ ದಾದಿಯರಿಗೆ ಆಸ್ಪತ್ರೆಯ ಹಾಸ್ಟೆಲ್ ವಾಸ್ತವ್ಯವನ್ನು ಮೆನೇಜ್‌ಮೆಂಟ್ ನಿರಾಕರಿಸಿದ ಬಗ್ಗೆಯೂ ದೂರುಗಳಿವೆ.
ಹಲವು ಆಸ್ಪತ್ರೆಗಳಲ್ಲಿ ಮೇಜರ್ ಆಪರೇಶನ್‌ಗಳನ್ನು ನಿಲುಗಡೆಗೊಳಿಸಲಾಗಿದೆ. ಇದರಿಂದಾಗಿ ರೋಗಿಗಳು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯದ ಚಿಕಿತ್ಸೆ ಲಭಿಸದೇ ಗಂಭೀರ ರೋಗ ತಗಲಿದವರು ಚಿಕಿಕ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳನ್ನು ಆಶ್ರಯಿಸುತ್ತಿದ್ದಾರೆ. ಕೇರಳದಲ್ಲಿ ದಾದಿಯರು ಮುಷ್ಕರದಲ್ಲಿ ತೊಡಗಿರುವುದರಿಂದಾಗಿ ಮಂಗಳೂರಿನ ಕೆಲವು ಆಸ್ಪತ್ರೆಗಳಿಗೆ ಸುಗ್ಗಿಯಂತಾಗಿದೆ.
ಮುಷ್ಕರ ಹೀಗೆ ಮುಂದುವರಿದರೆ ಮುಂದಿನ ಸೋಮವಾರದಿಂದ ಖಾಸಗಿ ಆಸ್ಪತ್ರೆಗಳ ಸೇವೆಗಳನ್ನು ಪರಿಮಿತಗೊಳಿಸಲಾಗುವುದೆಂದು ರಾಜ್ಯ ಖಾಸಗಿ ಆಸ್ಪತ್ರೆಗಳ ಆಡಳಿತ ಸಂಘಟನೆಗಳ ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಮಾತ್ರವೇ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಡಯಾಲಿಸಿಸ್ ಮತ್ತು ಹೆರಿಗೆ ವಾರ್ಡ್‌ಗಳು ಕಾರ್ಯವೆಸಗಲಿವೆ. ತೀವ್ರ ನಿಗಾ ಘಟಕಗಳಲ್ಲಿ ರೋಗಿಗಳನ್ನು ದಾಖಲಿಸುವುದನ್ನು ನಿಲ್ಲಿಸಲಾಗುವುದು. ಹೊರ ರೋಗಿ ಸೇವೆಗೆ ಮಿತಿ ಹೇರಲಾಗುವುದು. ಹೃದ್ರೋಗ ಸೌಕರ್ಯಗಳನ್ನು ಕಡಿಮೆ ಮಾಡಲಾಗುವುದು. ಹೀಗೆ ಹಲವು ತೀರ್ಮಾನಗಳಿಗೆ ಖಾಸಗಿ ಆಸ್ಪತ್ರೆ ಮೆನೇಜ್‌ಮೆಂಟ್ ಸಂಘಟನೆಗಳು ಬಂದಿವೆ.
ರಾಜ್ಯ ಸರಕಾರ ನಿಗದಿಪಡಿಸಿದಂತೆ ಖಾಸಗಿ ಆಸ್ಪತ್ರೆಗಳ ದಾದಿಯರಿಗೆ ಕನಿಷ್ಠ 17,200 ರೂ. ನೀಡಬೇಕು. ಆದರೆ ಅದು ಸಾಲದು. ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ವರದಿಯಲ್ಲಿನ ಶಿಫಾರಸಿನಂತೆ 20 ಸಾವಿರ ರೂಪಾಯಿ ಕನಿಷ್ಠ ವೇತನ ನೀಡಬೇಕೆಂದು ನರ್ಸ್ ಸಂಘಟನೆಗಳು ತಿಳಿಸಿವೆ. ಜು. 17ರಿಂದ ದಾದಿಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವರು. ಜು. 21ರಿಂದ ಸೆಕ್ರೆಟರಿಯೇಟ್ ಮುಂದೆ ಚಳವಳಿ ನಡೆಸಲು ತೀರ್ಮಾನಿಸಿದೆ.