Advertisement
ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗೆಜ್ಜೆಯೆಂದರೆ ಅದಕ್ಕೆ ಅದರದ್ದೇ ರೀತಿಯ ಒಂದು ಸ್ಥಾನಮಾನವಿದೆ. ಆ ಗೆಜ್ಜೆಯ ಶಬ್ದಕ್ಕೆ ಇಡೀ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಗೆಜ್ಜೆಯಲ್ಲೂ ಈಗ ನಾನಾ ತರದ ಗೆಜ್ಜೆಗಳು ಇವೆ. ಕೆಲವು ಹೆಣ್ಣುಮಕ್ಕಳು ಶಬ್ದವನ್ನು ಇಷ್ಟಪಡುವುದಿಲ್ಲ. ಬದಲಾಗಿ ಝಲ್ ಝಲ್ ಎನ್ನದ ಗೆಜ್ಜೆಯನ್ನು ತೊಡುತ್ತಾರೆ. ಕೆಲವರು ಗೆಜ್ಜೆಯ ಶಬ್ದ ನಮಗೆ ಇಷ್ಟವಿಲ್ಲ ಎಂದು ಅದರಲ್ಲಿ ಇರುವ ಶಬ್ದ ಮಾಡುವ ಗೆಜ್ಜೆಯನ್ನು ತೆಗೆದು ಬರೀ ಚೈನ್ ತೊಟ್ಟುಕೊಂಡು ಸುಮ್ಮನಾಗುತ್ತಾರೆ.
Related Articles
ಮಕ್ಕಳು ತೊಡುವಂತಹ ಗೆಜ್ಜೆಗಳಲ್ಲಿಯೂ ಹೆಚ್ಚಿನ ಆಯ್ಕೆ ಇದೆ. ಸರಳವಾದ ಗೆಜ್ಜೆಯಿಂದ ಹಿಡಿದು ಹೆಚ್ಚು ಝಲ್ ಝಲ್ ಎನ್ನುವ, ಹಾಗೆಯೇ ಕಡಿಮೆ ಶಬ್ಬ ಬರುವ, ಜೊತೆಗೆ ಶಬ್ದ ಬಾರದ ವಿಶಿಷ್ಟವಾದ ವಿನ್ಯಾಸಗಳಲ್ಲೂ ಹೊಸ ಹೊಸ ಬಗೆಗಳಲ್ಲಿ ದೊರಕುತ್ತವೆ. ಆದರೆ ಯಾವುದೇ ಗೆಜ್ಜೆ ಆದರೂ ಶಬ್ದವನ್ನು ಉದ್ಭವಿಸದಿದ್ದರೆ ಅದರ ವೈಶಿಷ್ಟ್ಯವನ್ನೇ ಅದು ಕಳೆದುಕೊಂಡು ಬಿಡುತ್ತದೆ.
Advertisement
ಹಿಂದೆ ಮಹಿಳೆಯರು ಮೈತುಂಬಾ ಆಭರಣವನ್ನು ತೊಡುತ್ತಿದ್ದರು. ಹೆಣ್ಣಿನ ಕಾಲ್ಗೆಜ್ಜೆಯ ನಾದ ಝಲ್ ಝಲ್‌ಎಂದು ಇಡೀ ಮನೆಯನ್ನು ಆವರಿಸುತ್ತಿತ್ತು. ಅದರಲ್ಲಿ ಬೆಳ್ಳಿ ಗೆಜ್ಜೆಗೆ ಹೆಚ್ಚಿನ ಮಹತ್ವವಿತ್ತು.
ಈಗ ಮೊದಲಿನಂತೆ ಹೆಣ್ಣುಮಕ್ಕಳು ಮನೆಯಲ್ಲೇ ಇರುವುದಿಲ್ಲ. ಓದು, ಉದ್ಯೋಗ ಅಂತ ಹೊರಗೆ ಹೋಗುತ್ತಾರೆ. ಅಲ್ಲದೆ ಹೆಚ್ಚು ಹೆಚ್ಚು ಓದಿ, ವಿದ್ಯಾಭ್ಯಾಸ ಪಡೆದು ನೌಕರಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ ಅವರು ಉದ್ಯೋಗ ಸ್ಥಳದ ವಾತಾವರಣಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಮೈತುಂಬಾ ಆಭರಣಗಳನ್ನು ತೊಟ್ಟುಕೊಳ್ಳಲಾಗುವುದಿಲ್ಲ. ಸೀರೆಯ ಬದಲು ಆಧುನಿಕ ಉಡುಗೆಗಳನ್ನು ಧರಿಸಬೇಕಾಗುತ್ತದೆ. ಆದರೂ ಹೆಚ್ಚಿನ ಹೆಣ್ಣುಮಕ್ಕಳು ಕೈತುಂಬಾ ಬಳೆ ಅಲ್ಲದಿದ್ದರೂ ಕೈಗೊಂದು ಬಳೆ, ಸಿಂಧೂರದ ಬದಲು ನವನವೀನ ಬಿಂದಿ, ಸರಳವಾದ ಹೊಸ ಫ್ಯಾಷನ್ನಿನ ಕಾಲ್ಗೆಜ್ಜೆಗಳನ್ನು ತೊಟ್ಟು ಆನಂದಿಸುತ್ತಾರೆ. ಅಂತೆಯೇ ಹಬ್ಬ-ಹರಿದಿನಗಳಲ್ಲಿ, ಮದುವೆಯಂತಹ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಸೀರೆ, ಕೈತುಂಬಾ ಬಣ್ಣಬಣ್ಣದ ಬಳೆ, ಕಾಲಿಗೆ ಗೆಜ್ಜೆ ತೊಟ್ಟು ಖುಷಿ ಪಡುತ್ತಾರೆ.
ಜ್ಯೋತಿ, ತೃತೀಯ ಪತ್ರಿಕೋದ್ಯಮ ಎಸ್‌ಡಿಎಂಕಾಲೇಜು, ಉಜಿರೆ