ಕೊಚ್ಚಿ : ಕ್ರೈಸ್ತ ಸೈನ್ಯಾಸಿನಿ (ನನ್) ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿದ್ದ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರ್ಯಾಂಕೋ ಮುಲಕ್ಕಳ್ ಅವರಿಗೆ ಕೇರಳ ಹೈಕೋರ್ಟ್ ಇಂದು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ಮಾಡಿದ ಜಸ್ಟಿಸ್ ರಾಜಾ ವಿಜಯರಾಘವನ್ ಅವರು ಈ ಕೆಳಗಿನ ಶರತ್ತುಗಳು ವಿಧಿಸಿದರು : 1. ಬಿಷಪ್ ಅವರು ಪಾಸ್ ಪೋರ್ಟ್ ಒಪ್ಪಿಸತಕ್ಕದ್ದು; 2. ತನಿಖಾಧಿಕಾರಿ ಮುಂದೆ ಎರಡು ವಾರಗಳಲ್ಲಿ ಒಂದು ಬಾರಿ ಶನಿವಾರದಂದು ಹಾಜರಾಗುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಕೇರಳ ರಾಜ್ಯವನ್ನು ಪ್ರವೇಶಿಸಕೂಡದು; 3. ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಲ್ಪಡುವ ತನಕವೂ ಈ ಶರತ್ತುಗಳು ಅನ್ವಯವಾಗುತ್ತವೆ.
ಆರೋಪಿ ಬಿಷಪ್‌ಗೆ ಜಾಮೀನು ಮಂಜೂರಾದಲ್ಲಿ ಸಮಾಜದಲ್ಲಿ ಅತ್ತಂತ ಪ್ರಭಾವೀ ಸ್ಥಾನದಲ್ಲಿರುವ ಅವರು ಪ್ರಕರಣದ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ; ಆದುದರಿಂದ ಅವರಿಗೆ ಜಾಮೀನು ನೀಡಕೂಡದು ಎಂದು ಪ್ರಾಸಿಕ್ಯೂಶನ್ ವಾದಿಸಿದ ನೆಲೆಯಲ್ಲಿ ಕಳೆದ ಅ.3ರಂದು ಹೈಕೋರ್ಟ್ 54ರ ಹರೆಯದ ಬಿಷಪ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿತ್ತು.
ಪ್ರಕೃತ ಆರೋಪಿ ಬಿಷಪ್ ಅವರನ್ನು ಕೋಟ್ಟಯಂ ಜಿಲ್ಲೆಯ ಉಪ ಬಂಧೀಖಾನೆಯಲ್ಲಿ ಇರಿಸಲಾಗಿದೆ.ಇವರ ನ್ಯಾಯಾಂಗ ರಿಮಾಂಡನ್ನು ಮ್ಯಾಜಿಸ್ಟ್ರೇಟರು ವಿಸ್ತರಿಸಿದ ಒಡನೆಯೇ ಅವರು ಜಾಮೀನು ಬಿಡುಗಡೆ ಕೋರಿ ಪುನಃ ಅರ್ಜಿ ಸಲ್ಲಿಸಿದ್ದರು.
ಕಳೆದ ಜೂನ್‌ನಲ್ಲಿ ಸಂತ್ರಸ್ತ ನನ್ ಕೋಟ್ಟಯಂ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಆರೋಪಿ ಬಿಷಪ್ ಮುಲಕ್ಕಳ್ ಅವರು 2014ರ ಮೇ ತಿಂಗಳಲ್ಲಿ ಕುರವಿಲಂಗಡ ಗೆಸ್ಟ್ ಹೌಸ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದುದಾಗಿ ಮತ್ತು ಅನಂತರದಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಹೇಳಿದ್ದರು.