ಹೊಸಪೇಟೆ: ಸುಡ ಬಿಸಿಲನ್ನು ಲೆಕ್ಕಿಸದೇ ದೇಶ-ವಿದೇಶಿ ಪ್ರವಾಸಿಗರು ಹಂಪಿ ಕಡೆ ಮುಖ ಮಾಡಿದ್ದು, ಕಳೆದ ಜನೆವರಿ ಮತ್ತು ಪೆಬ್ರವರಿ ತಿಂಗಳಿಗಿಂತಲೂ ಮಾರ್ಚ್ ಹಾಗೂ ಏಪ್ರೀಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡಿದ್ದಾರೆ.
ಹೌದು! ಕಳೆದ ಬಾರಿಗಿಂತಲೂ ಈ ವರ್ಷ ಬಿಸಿಲು ತಾಪಕ್ಕೆ ಜನರು, ಹೈರಾಣವಾಗುತ್ತಿದ್ದಾರೆ. ಅದರಲ್ಲಿ ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಬಿಸಿಲನ ಪ್ರಖರತೆ ದಿನೆ, ದಿನೆ, ಹೆಚ್ಚಾಗುತ್ತಿದೆ. ಇದರ ನಡುವೆಯೂ ಪ್ರವಾಸಿಗರು ಹಂಪಿ ಕಡೆ ಮುಖ ಮಾಡುತ್ತಿದ್ದಾರೆ.
ಕಾಲ್ನಡಿಗೆಯಲ್ಲಿ ಹಂಪಿ
ಹಂಪಿ ಶಿಲ್ಪಕಲಾ ವೈಭವನ್ನು ನೋಡುವುದೇ ಒಂದು ಹಬ್ಬ. ಹಂಪಿ ಎಂದರೆ ದೇಶ-ವಿದೇಶಿ ಪ್ರವಾಸಿಗರಿಗೆ ಅಚ್ಚು-ಮೆಚ್ಚು. ಪ್ರಸಿದ್ಧ ಸ್ಮಾರಕಗಳು, ಸುಂದರ ಕಲ್ಲುಗುಂಡು, ಹೊಲ-ಗದ್ದೆ ಹಸಿರು ಹಾಸಿಗೆ ನಡುವೆ ಹಾದು ಹೋಗಿರುವ ತುಂಗಭದ್ರಾ ನದಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
Related Articles
ನಸುಕಿನಲ್ಲಿ ಹಂಪಿ
ಬೇಸಿಗೆಯಲ್ಲಿ ಹಂಪಿಯನ್ನು ಬೆಳಗಿನ ಹೊತ್ತು ನೋಡುವುದೇ ಚೆಂದ. ಅದರಲ್ಲಿ ಬೆಳಗ್ಗೆ 6ರಿಂದ 10 ವರೆಗೆ ವಿಜಯವಿಠಲ ದೇಗುಲ, ಪುರಂದರ ಮಂಟಪ, ತುಂಗಭದ್ರಾ ನದಿ ತೀರ, ಸುತ್ತುವರೆದ ಬೆಟ್ಟಗುಡ್ಡಗಳು. ಈ ಪರಿಸರದಲ್ಲಿ ಬೀಡು ಬಿಟ್ಟಿರುವ ನಾನಾ ಜಾತಿಯ ಪಕ್ಷಿ ಸಂಕುಲಗಳು ಪ್ರವಾಸಿಗರನ್ನು ಸೆಳೆಯಲಿವೆ. ಸಂಜೆ ಹೊತ್ತಿನಲ್ಲಿ ಹೇಮಕೂಟ, ಕಮಲ ಮಹಲ್, ಗಜಶಾಲೆ, ಮಹಾನವಮಿ ದಿಬ್ಬಗಳನ್ನು ಕಣ್ತುಂಬಿಕೊಂಡು, ಸಂಜೆ ಹೊತ್ತಿನ ಹಂಪಿಯ ಸೊಬಗನ್ನು ಸವಿಯಬಹುದು.
ರೂಮ್ ರದ್ದು
ಈಗಾಗಲೇ ಹಂಪಿ ಪ್ರವಾಸಕ್ಕೆ ದಿನಾಂಕ ನಿಗದಿಗೊಳಿಸಿ ಆನ್‌ಲೈನ್ ಮೂಲಕ ಲಾಡ್ಜ್ ಗಳಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ ಕೆಲ ಪ್ರವಾಸಿಗರು, ರದ್ದು ಮಾಡಿಕೊಂಡಿದ್ದಾರೆ. ಹೊಸಪೇಟೆ, ಕಮಲಾಪುರ, ಹೊಸ ಮಲಪನಗುಡಿ, ಹಂಪಿ ಕೆಲ ಭಾಗಗಳಲ್ಲಿ ಹೋಟೆಲ್, ಲಾಡ್ಜ್, ರೆಸ್ಟಾರ್ಟ್ ಗಳಲ್ಲಿ ಬುಕ್ ಮಾಡಿಕೊಂಡಿದ್ದ ರೂಮ್‌ಗಳನ್ನು ರದ್ದು ಮಾಡಿದ್ದಾರೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಮಕ್ಕಳ ರಜೆ ದಿನಗಳಲ್ಲಿ ಹಂಪಿಗೆ ಭೇಟಿ ನೀಡಿ, ಕುಟುಂಬದೊಂದಿಗೆ ಹಂಪಿ ಶಿಲ್ಪಕಲಾ ವೈಭವ ಕಣ್ತುಂಬಿಕೊಳ್ಳಬಹುದು ಅಂದುಕೊಂಡಿದ್ದ ಪ್ರವಾಸಿಗರ ಆಸೆಗೆ ಬಿಸಿಲು ತಣ್ಣೀರೆರಚಿದೆ.
ಬಿಸಿಲಿಗೂ ಮುನ್ನ ಬ್ಯಾಟರಿ ವಾಹನ ಒಡಿಸಿ
ಬಿಸಿಲು ಏರುವ ಮುನ್ನ ವಿಜಯವಿಠಲ ದೇಗುಲ ಮುಂತಾದ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಬೇಗ ಪ್ರವಾಸ ಮುಗಿಸಬೇಕು ಎಂದು ಪ್ಲಾನ್ ಮಾಡಿಕೊಂಡು ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಬೆಳಗ್ಗೆ 6ಕ್ಕೆ ಬ್ಯಾಟರಿ ವಾಹನಗಳ ಓಡಾಟ ಇರುವುದಿಲ್ಲ. ಅನಿವಾರ್ಯವಾಗಿ ಗೆಜ್ಜಲ ಮಂಟಪದ ಹತ್ತಿರದಿಂದ ಮಹಿಳೆ, ಮಕ್ಕಳು ಹಾಗೂ ವೃದ್ಧರು, ಕಾಲ್ನಡಿಗೆಯಲ್ಲಿ ವಿಠಲ ದೇಗುಲದತ್ತ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಬೆಳಗ್ಗೆ 6 ರಿಂದ ಬ್ಯಾಟರಿ ವಾಹನಗಳು ಕಾರ್ಯನಿರ್ವಹಿಸಬೇಕು ಎಂಬುದು ಪ್ರವಾಸಿಗರ ಒತ್ತಾಸೆ.
ಕಳೆದ ಜನೆವರಿ, ಪೆಬ್ರವರಿ ತಿಂಗಳುಗಿಂತಲೂ ಮಾರ್ಚ್, ಏಪ್ರೀಲ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮೇ ತಿಂಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪ್ರವಾಸಿ ಮಾರ್ಗದರ್ಶಕರು ತಿಳಿಸಿದ್ದಾರೆ. – ಅಂಬಿ ವಾಲ್ಮೀಕಿ, ಹಂಪಿ.
ಬೇಸಿಗೆಯಲ್ಲಿ ನಸುಕಿನಲ್ಲಿ ಹಂಪಿ ನೋಡುವುದೇ ಒಂದು ಕಣ್ಣಿಗೆ ಹಬ್ಬ. ಬೆಳಿಗಿನ ಹೊತ್ತಿನಲ್ಲಿ ವಿಜಯವಿಠಲ ದೇವಾಲಯ ಹಾಗೂ ಸಂಜೆ ಹೊತ್ತಿನಲ್ಲಿ ಕಮಲ ಮಹಲ್, ಗಜಶಾಲೆ, ಹಜಾರ ರಾಮ ದೇವಾಲಯಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊಳ್ಳಬಹುದು. – ಮಂಜುನಾಥ ಗೌಡ, ಹಂಪಿ ಗೈಡ್.
-ಪಿ.ಸತ್ಯನಾರಾಯಣ