Advertisement

ಒಂದಂಕಿಗೆ ಕುಸಿದ ಸೋಂಕಿತರ ಸಂಖ್ಯೆ

12:32 PM May 06, 2020 | mahesh |

ಮೈಸೂರು: ಕೋವಿಡ್ ಹಾಟ್‌ಸ್ಪಾಟ್‌ ಆಗಿದ್ದ ಮೈಸೂರು ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಒಂದಕಿಗೆ ಕುಸಿದಿದ್ದು, ಮಂಗಳವಾರ ಮತ್ತೆ ಮೂವರು ಗುಣಮುಖವಾಗಿ
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಗಳವಾರ ಜ್ಯುಬಿಲಿಯಂಟ್‌ ಕಾರ್ಖಾನೆಗೆ ಸಂಬಂಧಿಸಿದ ಪಿ 272, ಪಿ 384, ಪಿ 387 ಸೋಂಕಿತರು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದು ವರೆಗೆ 82 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಪ್ರಸ್ತುತ ಎಂಟು ಮಂದಿ ಸಕ್ರಿಯ ಸೋಂಕಿತರು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಮೈಸೂರಿನಲ್ಲೇ ಹೆಚ್ಚು ಸೋಂಕಿತರು ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. 150ಕ್ಕೂ ಹೆಚ್ಚು ಪ್ರಕರಣಗಳಿರುವ ಬೆಂಗಳೂರಿನ್ನು ಮೈಸೂರು ಹಿಂದಿಕ್ಕಿದ್ದು, ಸೋಂಕಿತರು ಶೀಘ್ರವಾಗಿ ಗುಣಮುಖರಾಗುತ್ತಿರುವುದು ಜನರಲ್ಲಿ ತುಸು ನೆಮ್ಮದಿ ತರಿಸಿದೆ.

Advertisement

ಹಸಿರು ವಲಯದತ್ತ ಜಿಲ್ಲೆ: ಬುಧವಾರ ಸಕ್ರಿಯ ಸೋಂಕಿತರ ಎರಡನೇ ಪರೀಕ್ಷೆ ನಡೆಯಲಿದ್ದು, ಮತ್ತೆ ಐದು ಮಂದಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇರುವ ಎಂಟು ಮಂದಿಯಲ್ಲಿ ಮತ್ತೆ ಐದು ಮಂದಿ ಬಿಡುಗಡೆಯಾದರೆ ಸಕ್ರಿಯ ಸೋಂಕಿತರ ಸಂಖ್ಯೆ 3ಕ್ಕೆ ಇಳಿಯಲಿದ್ದು, ಜಿಲ್ಲೆ ಹಸಿರು ವಲಯಕ್ಕೆ ಜಾರುವ ಲಕ್ಷಣಗಳು ಗೋಚರಿಸಿದೆ.

ಕ್ವಾರಂಟೈನ್‌ಗಳ ಸಂಖ್ಯೆ ಇಳಿಕೆ: ಕೇವಲ ಸೋಂಕಿತರು ಮಾತ್ರವಲ್ಲದೆ ಕ್ವಾರಂಟೈನ್‌ಗಳ ಸಂಖ್ಯೆಯೂ ಇಳಿಕೆಯಾಗಿದ್ದು, 26 ಮಂದಿ ಮಾತ್ರ ಕ್ವಾರಂಟೈನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 4762 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದ್ದು, 4728 ಮಂದಿ ಕ್ವಾರಂಟೈನ್‌ ಅವಧಿ ಮುಗಿಸಿದ್ದಾರೆ. ಮೇ 5ರವರೆಗೆ 4678 ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು, 4588 ನೆಗೆಟಿವ್‌ ಬಂದಿದೆ. 90 ಪಾಸಿಟಿವ್‌ ಆಗಿದ್ದು, 82 ಮಂದಿ ಗುಣಮುಖವಾಗಿದ್ದಾರೆ.

ಕೆ.ಆರ್‌.ನಗರ, ಕೋಟೆಯಲ್ಲಿ ಸೋಂಕಿಲ್ಲ:
ಕೇರಳದ ವಯನಾಡಿನಲ್ಲಿ ಪಾಸಿಟಿವ್‌ ಆಗಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಹೆಚ್‌ .ಡಿ.ಕೋಟೆಯ ಹತ್ತು ಮಂದಿ ಹಾಗೂ ಕೆ.ಆರ್‌.ನಗರ ಆರು ಮಂದಿಯನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆ ಮಾಡಿದ್ದು, ನೆಗೆಟಿವ್‌ ಬಂದಿದೆ. ಹೀಗಾಗಿ ಈ ಎರಡೂ ತಾಲೂಕುಗಳಲ್ಲಿ ಸೋಂಕು ಹರಡಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಡೀಸಿ ಅಭಿರಾಂ.ಜಿ.ಶಂಕರ್‌ ತಿಳಿಸಿದ್ದಾರೆ.

ಆರೋಗ್ಯ ಸಿಬ್ಬಂದಿಗೆ ಹೂ ಮಳೆ 
ಮೈಸೂರು: ಕೋವಿಡ್ ವೈರಾಣು ಹರಡುವ ಭೀತಿಯ ನಡುವೆಯೂ ಸಾರ್ವಜನಿಕರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ನರ್ಸ್‌ಗಳಿಗೆ ಮೈಸೂರು ಕೋವಿಡ್‌ ಕೇರ್‌ ಟೀಂ ವತಿಯಿಂದ ಶಾಸಕ ಎಸ್‌.ಎ.ರಾಮದಾಸ್‌ ಅವರು ಅಭಿನಂದನಾ ಪತ್ರ ನೀಡಿ, ಹೂ ಮಳೆ ಸುರಿಸಿ ಅಭಿನಂದಿಸಿದರು. ನಗರದ ರಾಮಾನುಜ ರಸ್ತೆಯ ಸೆಂಟ್‌ ಮೇರಿಸ್‌ ಶಾಲೆಯ ಹತ್ತಿರದಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವೈದ್ಯರು ಮತ್ತು ನರ್ಸ್‌ಗಳನ್ನು ಸನ್ಮಾನಿಸಲಾಯಿತು. ಜ್ವರ ತಪಾಸಣೆ ಕೇಂದ್ರ ಮತ್ತು ಪ್ರತಿ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್‌ಗಳ ಪ್ರಾಮಾಣಿಕ ಸೇವೆಗೆ ಶಾಸಕ ಎಸ್‌.ಎ. ರಾಮದಾಸ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಸೇಫ್ ವ್ಹೀಲ್‌ ಮಾಲೀಕ ಬಿ.ಎಸ್‌. ಪ್ರಶಾಂತ್‌, ಕೆ.ಆರ್‌. ಠಾಣೆಯ ಇನ್ಸ್‌ಪೆಕ್ಟರ್‌ ಎಲ್‌. ಶ್ರೀನಿವಾಸ್‌ ಸೇರಿದಂತೆ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next