Advertisement

ಅಗಲಿದ ಕವಿಗೆ ಮಿಡಿದ ಅನಿವಾಸಿ ಮನ

07:22 PM Apr 06, 2021 | Suhan S |

ಗೀತೆಗಳ ಮೂಲಕವೇ ಕನ್ನಡಿಗರ ಮನೆ ಮನಸ್ಸುಗಳಿಗೆ ಹತ್ತಿರವಾಗಿದ್ದ  ಕವಿ ಲಕ್ಷ್ಮೀ ನಾರಾಯಣ ಭಟ್ಟರಿಗಾಗಿ ಕನ್ನಡ ಸಾಹಿತ್ಯರಂಗದಿಂದ “ನುಡಿ- ಗೀತ’ ನಮನ ವರ್ಚುವಲ್‌ ಕಾರ್ಯಕ್ರಮವನ್ನು ಆಯೋಜಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಅವರ ಕುರಿತಾದ ನೆನಪುಗಳ ಜತೆಗೆ ಅವರೇ  ರಚಿಸಿದ ಭಾವಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಲಾಯಿತು.

ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿದ್ದ  ಲೇಖಕಿ ತ್ರಿವೇಣಿ ರಾವ್‌ ಅವರು ಲಕ್ಷ್ಮೀನಾರಾಯಣ ಭಟ್ಟರ ಕಿರುಪರಿಚಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಿವಮೊಗ್ಗದಲ್ಲಿದ್ದ ತಮ್ಮ ಸೋದರ ಮಾವನಿಗೆ ಸ್ನೇಹಿತ ಭಟ್ಟರು ತಮ್ಮ ಹಸ್ತಾಕ್ಷರದೊಂದಿಗೆ ನೀಡಿದ್ದ ವೃತ್ತ ಕವನ ಸಂಕಲನದ ಮೂಲಕ ಭಟ್ಟರ ಬಗ್ಗೆ ಮೊದಲ ಬಾರಿಗೆ ತಿಳಿದಿದ್ದು  ತ್ರಿವೇಣಿಯವರ ನೆನಪು.

ಟೆಕ್ಸಾಸ್‌ ಕನ್ನಡತಿಯಾಗಿರುವ ಅಪರ್ಣಾ ನರೇಂದ್ರ ಅವರು ಪ್ರಾರ್ಥನೆಯಾಗಿ, ತಾಯೇ ನಿನ್ನ ಮಡಿಲಲಿ ಕಣ್ಣು ತೆರೆದ ಕ್ಷಣದಲಿ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಆಮೇಲೆ  ಸುರಿದಿದ್ದೆಲ್ಲ ನೆನಪುಗಳ ಸುರಿಮಳೆಯೇ. ನಳಿನಿ ಮಯ್ಯ ಅವರು ಭಟ್ಟರ ನೆನಪಿನಲ್ಲಿ ಬರೆದ ತಮ್ಮ ಕವನದಲ್ಲಿ ಭಟ್ಟರ ನೇರ, ನಿಷ್ಠುರ ವ್ಯಕ್ತಿತ್ವವನ್ನು ಬಿಂಬಿಸಿದ್ದು, ಭಾವಪೂರ್ಣವಾಗಿ ವಾಚಿಸಿದರು.

ಬಾಸ್ಟನ್‌ ಕನ್ನಡತಿ ಬೃಂದಾ ಕೋಣಾಪುರ್‌ ಅವರು  ಎಲ್ಲಿ ಜಾರಿತೋ  ಮನವು ಎಲ್ಲೆ ಮೀರಿತೋ.. ಹಾಡು  ಹಾಡುತ್ತಿದ್ದಂತೆ, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ ಮೈಸೂರು ನಟರಾಜ್‌ ಅವರು ಭಟ್ಟರೊಂದಿಗಿನ ತಮ್ಮ ನೆನಪುಗಳಿಗೆ ಜಾರಿದರು.

Advertisement

ನಟರಾಜ್‌ ಅವರ  “ನಾನು ಅಮೆರಿಕನ್‌ ಆಗಿಬಿಟ್ಟೆ’ ಕವನ ಸಂಕಲನಕ್ಕೆ ಭಟ್ಟರು ಬರೆದುಕೊಟ್ಟ ಮುನ್ನುಡಿಯ ಸಂಬಂಧವಾಗಿ ನಡೆದ ಮಾತುಕತೆಯಲ್ಲಿ  ಊಟ-ತಿಂಡಿಗಳಲ್ಲಿ ಭಟ್ಟರಿಗಿದ್ದ ಅಭಿರುಚಿಗಳ ಬಗ್ಗೆ ಸ್ವಾರಸ್ಯಕರವಾಗಿ ಅವರು ವಿವರಿಸಿದರು.

ಭಟ್ಟರು ಹಿರಿಯರಿಗಾಗಿ ಮಾತ್ರವೇ ಬರೆಯದೆ, ಕನ್ನಡ ಮಕ್ಕಳು ಹಾಡಿ, ನಲಿಯುವಂತಹ  ಶಿಶುಗೀತೆಗಳನ್ನು ಬರೆದು ಕೊಟ್ಟಿರುವುದು ಅವರ  ಗಮನಾರ್ಹ ಕೊಡುಗೆ ಯೆನ್ನಬಹುದು. ಟೆಕ್ಸಾಸ್‌ನ ಪುಟ್ಟ ಹುಡುಗಿ ಅನಘಾ ಪ್ರಸಾದ್‌, ಬಾಳ ಒಳ್ಳೇವ್ರು ನಮ್‌ ಮಿಸ್‌ ಶಿಶುಗೀತೆಯನ್ನು ಬಹಳ ಮು¨ªಾಗಿ ಹಾಡಿದಳು. ಕನ್ನಡ ಸಾಹಿತ್ಯ ರಂಗದ ಚೇರ್‌ಮೆನ್‌ರಾದ  ನಾಗ ಐತಾಳ ಅವರು ಭಟ್ಟರು ಕನ್ನಡಕ್ಕೆ ಸಂಪಾದಿಸಿಕೊಟ್ಟಿರುವ ಶಿಶುನಾಳ ಶರೀಫ‌ರ ಕೃತಿಗಳ ಬಗ್ಗೆ ವಿವರಿಸಿದರು. ಕನ್ನಡ ಸಾಹಿತ್ಯ ರಂಗದ ಕಾರ್ಯದರ್ಶಿಗಳಾದ ಶ್ರೀಕಾಂತ ಬಾಬು ಅವರು ಭಟ್ಟರ ಆತ್ಮೀಯ ಗೆಳೆಯರು. ಅವರೊಂದಿಗೆ ಬಹಳ ಕಾಲದ ನಂಟು ಹೊಂದಿದ್ದ ಅವರು, ತಮ್ಮ ಮಾತಿನಲ್ಲಿ  ಭಟ್ಟರ ಸ್ನೇಹಪರ ವ್ಯಕ್ತಿತ್ವವನ್ನು ವಿವರಿಸಿ, ಅವರ ಇಡೀ ಬದುಕನ್ನು ಕಣ್ಮುಂದೆ ತಂದು ನಿಲ್ಲಿಸಿದರು.

ನಾರ್ತ್‌ ಕೆರೊಲಿನಾದ ಸವಿತಾ ರವಿಶಂಕರ್‌ ಅವರು ಭಟ್ಟರು ತಮಗೆ ಬರೆದಿದ್ದ ಆತ್ಮೀಯ ಪತ್ರದ ಆಯ್ದ ಭಾಗವನ್ನು ಓದಿ, ಭಟ್ಟರ ಮತ್ತೂಂದು ಪ್ರಸಿದ್ಧ ಶಿಶುಗೀತೆ ನಾನೇ ಟೀಚರ್‌ ಆಗಿದ್ರೆ ಹಾಡಿದರು. ಲೇಖಕ ಡಾಕ್ಟರ್‌ ಗುರುಪ್ರಸಾದ್‌ ಕಾಗಿನೆಲೆಯವರು ಮಾತನಾಡಿ, ಭಟ್ಟರ ಬಾರೆ ನನ್ನ ದೀಪಿಕಾ ಕವನದ ಸಾಲು ಸಮ ಯಾವುದೇ ಚೆನ್ನೆ ನಿನ್ನ ಜಡೆ ಹರಡಿದ ಬೆನ್ನಿಗೆ ಸಾಲನ್ನು ಬಳಸಿಕೊಂಡು ಬರೆದ  ತಮ್ಮ ಪ್ರೇಮಪತ್ರ ಪ್ರಸಂಗ, ಅಮೆರಿಕದಲ್ಲಿ ಭಟ್ಟರು ಅಪಘಾತಕ್ಕೊಳಗಾದಾಗ,  ವೈದ್ಯರಾಗಿ ಅವರಿಗೆ  ಸಲಹೆ ನೀಡಿದ ಅನುಭವ ಹಂಚಿಕೊಂಡರು.

ಲಲಿತಾ ಪ್ರಸಾದ್‌ ಅವರು “ಬಾ ಒಲವೇ ಬಂಜೆ ಎದೆಯಲ್ಲಿ ಬೆಳೆ’ ಕವನವನ್ನು ಹಾಡಿದರು.  ವಿಮಲಾ ರಾಜಗೋಪಾಲ್, ಶಂಕರ್‌ ಹೆಗಡೆಯವರ ಅನಿಸಿಕೆಗಳ ಅನಂತರ ಡಾ|ಲೀಲಾ ಹೆಗಡೆ ಅವರು “ಶಾಂತವಾಗಿದೆ ಕಡಲು’ ಭಾವಗೀತೆಯನ್ನು ಹಾಡಿದರು.  ನ್ಯೂಜೆರ್ಸಿಯ ಮೀರಾ ರಾಜಗೋಪಾಲ್‌ ಅವರು “ಯಾಕೆ ಅರ್ಥ ಬಾಳಿಗೆ? ಯಾಕೆ ಅರ್ಥ ನಾಳೆಗೆ? ಕವನ ಹಾಡಿ, ಭಟ್ಟರ ಭಾವಗೀತೆಯ ಪ್ರಕಾರದ ಬಗೆಗೆ ಮಾತನಾಡಿದರು.

ಬಾಸ್ಟನ್‌ ಕನ್ನಡತಿ ವೈಶಾಲಿ ಹೆಗಡೆ ಭಟ್ಟರ ಬಹಳ ಜನಪ್ರಿಯವಾದ ಭಾವಗೀತೆಯಾದ “ನೀ ಸಿಗದೆ ಬಾಳೊಂದು ಬಾಳೇ’ ಗೀತೆಯನ್ನು ಬಹಳ ಸುಂದರವಾಗಿ ವಿಶ್ಲೇಷಿಸಿದರು.

ಲಕ್ಷ್ಮೀ ನಾರಾಯಣ ಭಟ್ಟರ ಕವನಗಳನ್ನು ಹೊಂದಿರುವ ಧ್ವನಿಮುದ್ರಿಕೆ “ಮನಮೋಹನ’. ಇದನ್ನು ಹೊರತಂದಿರುವವರು ಪೆನ್ಸಿಲ್ವೇನಿಯಾದ ಲತಾ ನಟರಾಜ್‌ ಮತ್ತು ನೇಹಾ ನಟರಾಜ್‌.  ಲತಾ ತಮ್ಮ ಮಗಳು ನೇಹಾಳೊಂದಿಗೆ ಹಾಡಿರುವ ಸುಂದರ ಗೀತೆಗಳು ಇದರಲ್ಲಿವೆ. ಈ ಸಿಡಿ ಹೊರತರುವ ಸಮಯದಲ್ಲಿ ಭಟ್ಟರೊಂದಿಗಿನ ಭೇಟಿಯ ನೆನಪುಗಳನ್ನು ಹಂಚಿಕೊಂಡಿದ್ದಲ್ಲದೆ ಅದೇ ಸಿಡಿಯಿಂದಾಯ್ದ ಎರಡು ಭಾವಗೀತೆಗಳನ್ನು ಹಾಡಿದರು.

ನಳಿನಿ ಕುಕ್ಕೆಯವರು ಮಾತನಾಡಿ, ಭಟ್ಟರು  ನ್ಯೂಜೆರ್ಸಿಯ ತಮ್ಮ ಮನೆಗೆ ಭೇಟಿ ಕೊಟ್ಟಿದ್ದಾಗ ಅವರನ್ನು ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೆನ್‌ ಮನೆಗೆ ಕರೆದೊಯ್ದಿದ್ದನ್ನು, ಭಟ್ಟರು ವಿಜ್ಞಾನಿಯ ದಿವ್ಯ  ಸನ್ನಿಧಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನೂ, ರಮಣ ಮಹರ್ಷಿಗಳ ಅಧ್ಯಾತ್ಮದತ್ತ  ಭಟ್ಟರಿಗಿದ್ದ ಆಸಕ್ತಿಯ ಬಗೆಗೂ ತಿಳಿಸಿದರು.  ಅವರನ್ನು  ಅಟ್ಲಾಂಟಿಕ್‌ ಸಿಟಿಯ ಕೆಸಿನೊಗೆ ಕರೆದೊಯ್ದಿದ್ದಾಗ ಅವರು ತೋರಿದ ಕುತೂಹಲ, ಸುತ್ತಮುತ್ತಲ ಎಲ್ಲ  ವಿಷಯಗಳ ಬಗೆಗೂ ಅವರಿಗಿದ್ದ ಆಸಕ್ತಿಯನ್ನು ಗೋಪಾಲ್‌ ಕುಕ್ಕೆ ತಮ್ಮ ಮಾತಿನಲ್ಲಿ ತೆರೆದಿಟ್ಟರು.

ಕೊನೆಯಲ್ಲಿ ಮಾತನಾಡಿದ ನ್ಯೂಜೆರ್ಸಿಯ ಆಶಾ ಮೇಲುಕೋಟೆ ಅವರು “ನಡೆದಿದೆ ಪೂಜಾರತಿ ವಿಶ್ವದೇವಿಗೆ’ ಕವನವನ್ನು ಹಾಡಿದರು.

ಇದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸುಮಾರು ಮೂರು ತಾಸಿನವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ನೆನಪುಗಳ ರಸಧಾರೆಯೇ ಹರಿಯಿತು.

 

– ತ್ರಿವೇಣಿ ಶ್ರೀನಿವಾಸ ರಾವ್‌, ಶಿಕಾಗೊ

Advertisement

Udayavani is now on Telegram. Click here to join our channel and stay updated with the latest news.

Next