ಹರಿಯಾಣ: ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಯಾವುದೇ ರಾಲಿಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರೂ, ಇಂದು ಹರಿಯಾಣದ ನುಹ್‌ನಲ್ಲಿ ತಮ್ಮ ಶೋಭಾ ಯಾತ್ರೆಯನ್ನು ಮುಂದುವರಿಸುವುದಾಗಿ ಹಿಂದೂ ಸಂಘಟನೆಗಳು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜುಲೈ 31 ರಂದು ನಡೆದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿದಾಗ ಮುಸ್ಲಿಂ ಬಹುಸಂಖ್ಯಾತ ನುಹ್‌ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದರು. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.
ಈ ವೇಳೆ ಮಸೀದಿ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಘಟನೆಗಳು ನಡೆದಿದ್ದವು. ಇದಾದ ಬಳಿಕ ಗಲಭೆಯಲ್ಲಿ ಭಾಗಿಯಾಗಿದ್ದವರ ಅಕ್ರಮ ಆಸ್ತಿಗಳನ್ನು ಸ್ಥಳೀಯ ಆಡಳಿತ ನೆಲಸಮಗೊಳಿಸಿತ್ತು. ಬಳಿಕ ಹೈಕೋರ್ಟ್ ಇದಕ್ಕೆ ತಡೆ ನೀಡಿತ್ತು.
ಇದೀಗ ಮತ್ತೆ ಹಿಂದೂ ಸಂಘಟನೆ ಅಪೂರ್ಣಗೊಂಡ ಶೋಭಾಯಾತ್ರೆಯನ್ನು ಮತ್ತೆ ಆರಂಭಿಸುವುದಾಗಿ ಹೇಳಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಹರಿಯಾಣ ಸರ್ಕಾರವು 1,900 ಹರಿಯಾಣ ಪೊಲೀಸ್ ಸಿಬ್ಬಂದಿ ಮತ್ತು 24 ಕಂಪನಿ ಅರೆಸೇನಾ ಪಡೆಗಳನ್ನು ಅಂತರ -ರಾಜ್ಯ ಮತ್ತು ಅಂತರ – ಜಿಲ್ಲಾ ಗಡಿಗಳಲ್ಲಿ ನಿಯೋಜಿಸುವ ಮೂಲಕ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.
ಇದನ್ನೂ ಓದಿ: WAC 2023: ಭಾರತಕ್ಕೆ ಐತಿಹಾಸಿಕ ಚಿನ್ನ… ಒಲಿಂಪಿಕ್ ವೀರನಿಗೆ ಶುಭಕೋರಿದ ಪ್ರಧಾನಿ ಮೋದಿ