Advertisement

ನೀರಿಗಾಗಿ ನುಗ್ಗಾದ ನುಗ್ಗಾನಟ್ಟಿ ಜನ

11:05 AM May 28, 2019 | Team Udayavani |

ಸವದತ್ತಿ: ಮಲಪ್ರಭಾ ದಡದಲ್ಲಿರುವ ಈ ಗ್ರಾಮದಲ್ಲಿ ಮಕ್ಕಳು ನೀರಿಗಾಗಿ ಶಾಲೆ ತೊರೆಯುವ ದುಸ್ಥಿತಿಯಲ್ಲಿದ್ದಾರೆ. ಇನ್ನು ಕೂಲಿ ಮತ್ತು ವ್ಯವಸಾಯವನ್ನೇ ಆಧರಿಸಿ ಜೀವನ ಸಾಗಿಸುವ ಜನತೆ ನೀರಿನ ಕಾಯುವಿಕೆಯಲ್ಲೇಇಡೀ ದಿನ ವ್ಯರ್ಥವಾಗಿ ಕಳೆಯುವಂತಾಗಿದೆ.

Advertisement

ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು. ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ರೈತರು, ಕೂಲಿ ಕಾರ್ಮಿಕರು. ಬೇಸಿಗೆಯ ಬೇಗೆಯ ಜೊತೆಗೆ ಎಲ್ಲ ರೀತಿಯಿಂದಲೂ ಈ ಗ್ರಾಮದ ಜನತೆ ತತ್ತರಿಸಿ ಹೋಗಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಕುಡಿಯುವ ನೀರಿನ ಕೊರತೆ.

ಯರಝರ್ವಿ, ಬೂದಿಗೊಪ್ಪ ಮತ್ತು ನುಗ್ಗಾನಟ್ಟಿ ಗ್ರಾಮಗಳಿಗೆ ಏಕಕಾಲಕ್ಕೆ ನೇರವಾಗಿ ಮಲಪ್ರಭಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನೀರು ಪೂರೈಕೆಗೆ ನಿರ್ದಿಷ್ಟ ಸಮಯವೆಂಬುದಿಲ್ಲ. 2 ದಿನಕ್ಕೊಮ್ಮೆ ಬರುವ ನೀರಿಗೆ ಅರ್ಧ ಗಂಟೆ ಮಾತ್ರ ಕಾಲಾವಕಾಶ ಇರುವುದರಿಂದ ಗ್ರಾಮಸ್ಥರಿಗೆ ನೀರಿನ ಅಭಾವ ಹೆಚ್ಚಾಗಿದೆ. ಗ್ರಾಮಸ್ಥರು ಬರಕ್ಕೆ ತತ್ತರಿಸಿ ಆರ್ಥಿಕವಾಗಿಯೂ ಹಿಂದುಳಿದಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಸುಮಾರು 3 ಸಾವಿರ ಜನರಿರುವ ಗ್ರಾಮದಲ್ಲಿ ಸಾಕಷ್ಟು ನೀರಿನ ಸೌಕರ್ಯವಿದ್ದರೂ, ದಿನದ ಅರ್ಧ ಗಂಟೆ ಮಾತ್ರ ನೀರು ಪೂರೈಕೆಯಾಗುತ್ತಿರುವುದರಿಂದ ಜನರ ಆಕ್ರೋಶ ಹೆಚ್ಚುತ್ತಿದೆ. ಕುಡಿಯುವ ನೀರಿಗಾಗಿ ಶಾಲೆ ಬಿಟ್ಟ ಮಕ್ಕಳು ನೀರು ಅರಸುತ್ತ ಅಲೆಯುತ್ತಿದ್ದಾರೆ. ವ್ಯವಸಾಯ ಮತ್ತು ಕೂಲಿ ಮಾಡುತ್ತಿರುವ ಜನ ಆರ್ಥಿಕ ಸಂಕಟ ಎದುರಿಸುತ್ತಿದ್ದಾರೆ. ನೀರಿನ ಬರಕ್ಕೆ ಶಿಕ್ಷಣ ಮತ್ತು ಆರ್ಥಿಕವಾಗಿ ಈ ಗ್ರಾಮಕ್ಕೆ ಹಿನ್ನಡೆಯಾಗುತ್ತಿರುವುದಂತೂ ಸತ್ಯ.

ಇನ್ನು ಇರುವ ಎರಡು ಬೋರವೆಲ್ಗಳಲ್ಲಿ ಒಂದು ಈಗಾಗಲೇ ನಿಷ್ಕ್ರಿಯಗೊಂಡಿದ್ದು ಕೆರೆಯ ಪಕ್ಕದಲ್ಲಿರುವ ಬೊರವೆಲ್ಲೇ ಗತಿ ಎನ್ನವ ಸ್ಥಿತಿ ನಿರ್ಮಾಣವಾಗಿದೆ.

Advertisement

ನೀರು ಪೂರೈಕೆಗೆ ಸಮಯ ನಿಗದಿಪಡಿಸಬೇಕು. ಅರ್ಧಗಂಟೆಗಿಂತ ಹೆಚ್ಚು ಸಮಯ ನೀರು ಬಿಡಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಬೋರ್‌ವೆಲ್ ಮೂಲಕ ಬರುವ ನೀರಿನಿಂದ ಆನೆಕಾಲು ರೋಗದ ಭೀತಿ ಜನರನ್ನು ಕಾಡುತ್ತಿದ್ದು, 800 ಅಡಿ ಆಳದ ನೀರಿನ ಬದಲು ಮಲಪ್ರಭಾ ನೀರನ್ನೇ ಹೆಚ್ಚುವರಿಯಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಹರಿಜನಕೇರಿಯ ಮೂಲಕವೇ ಪೈಪ್‌ಲೈನ್‌ ಹಾಯ್ದು ಹೋದರೂ ಅಲ್ಲಿಯ ಜನ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವೇ ನೀರಿನ ಸಮಸ್ಯೆಗೆ ಪರಿಹಾರ ಕಂಡಕೊಳ್ಳಬೇಕೆಂದು ಪಂಚಾಯತಿ ಅಧಿಕಾರಿಗಳಿಗೆ ಜನರು ಆಗ್ರಹಿಸಿದ್ದಾರೆ.

ಆತಂಕ ಸೃಷ್ಟಿಸಿದ ಟ್ಯಾಂಕ್‌: ನುಗ್ಗಾನಟ್ಟಿ ಗ್ರಾಮದಲ್ಲಿ 2 ನೀರಿನ ಟ್ಯಾಂಕ್‌ಗಳು, 2 ಬೋರ್‌ವೆಲ್ಗಳಿದ್ದರೂ ನೀರಿನ ಅಭಾವ ದಿನೇ ದಿನೇ ಹೆಚ್ಚಾಗುತ್ತಿದೆ. ಅಂಗನವಾಡಿ ಕೇಂದ್ರದ ಹತ್ತಿರ ಒಂದು ಮತ್ತು ಹರಿಜನ ಕೇರಿಯ ಹತ್ತಿರ ಕುಡಿಯುವ ನೀರಿಗೆಂದೇ ಮತ್ತೂಂದು ಟ್ಯಾಂಕ್‌ಗಳಿವೆ. ಆದರೆ ಅಂಗನವಾಡಿ ಕೇಂದ್ರದ ಹತ್ತಿರವಿರುವ ಟ್ಯಾಂಕ್‌ಗೆ ಇಲ್ಲಿಯವರೆಗೆ ಹನಿ ನೀರು ಕೂಡ ಬಂದಿಲ್ಲ. ಕಳಪೆ ಗುಣಮಟ್ಟದಿಂದ ನಿರ್ಮಾಣವಾದ ಈ ಟ್ಯಾಂಕ್‌ ಯಾವ ಸಮಯದಲ್ಲಿ ಧರೆಗುರುಳುವುದೋ ಎಂಬ ಆತಂಕ ಜನರಲ್ಲಿದೆ.

ನೀರು ತುಂಬಿಸಲೆಂದೇ ಮಕ್ಕಳು ಶಾಲೆ ಬಿಡುತ್ತಿದ್ದಾರೆ. ನಿಗದಿತ ವೇಳೆಯಲ್ಲಿ ನೀರು ಬಿಡುವುದರಿಂದ ಮಕ್ಕಳಿಗೂ, ಗ್ರಾಮಸ್ಥರಿಗೂ ಅನುಕೂಲವಾಗಬಹುದು.ಯಾವುದಕ್ಕೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಎಲ್ಲವನ್ನೂ ನೋಡಿ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ.-ಈರಣ್ಣ ಗೇಡಿ, ನುಗ್ಗಾನಟ್ಟಿ ಗ್ರಾಮಸ್ಥ.

ನೀರು ಪೂರೈಕೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಯವಾಗುತ್ತಿದೆ. ಆದರೂ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ಲರಿಗೂ ನೀರು ಸಿಗಬೇಕೆನ್ನುವ ಉದ್ದೇಶದಿಂದ ನೀರನ್ನು ಸೀಮಿತ ಅವಧಿಗೆ ಮಾತ್ರ ಪೂರೈಸಲಾಗುತ್ತಿದೆ.-ವಿರುಪಾಕ್ಷ ಪೂಜೇರ ಪಿಡಿಒ ನುಗ್ಗಾನಟ್ಟಿ

•ಡಿ.ಎಸ್‌.ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next