ದಾವಣಗೆರೆ: 12ನೇ ಶತಮಾನದ ವಚನಕಾರರು ನುಡಿದಂತೆ ನಡೆದು, ನಡೆ-ನುಡಿ ಒಂದಾಗಿಸಿಕೊಂಡು ಬದುಕಿದವರು ಎಂದು ಹಿರಿಯ ಸಾಹಿತಿ ಕೆ.ಬಿ. ಸಿದ್ದಯ್ಯ ಬಣ್ಣಿಸಿದರು. ಜಿಲ್ಲಾಡಳಿತದಿಂದ ಶುಕ್ರವಾರ ಕುವೆಂಪು ಕನ್ನಡಭವನದಲ್ಲಿ ಆಯೋಜಿಸಲಾಗಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿ ಶುದ್ಧ ಕಾಯಕ, ಸತ್ಯದಿಂದ ಬದುಕನ್ನು ನಡೆಸಿದ ಮಹಾಪುರುಷರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರನ್ನು ಕೇವಲ ದಲಿತ ವಚನಕಾರರು ಎಂದರೆ ಶುಶ್ಕವಾಗುತ್ತದೆ ಎಂದರು. ಅಕ್ಕಮಹಾದೇವಿ, ಸೂಳೆ ಸಂಕವ್ವೆ, ಕಲ್ಯಾಣಮ್ಮನಂತಹ ಅನೇಕ ಮಹಿಳಾ ವಚನಗಾರ್ತಿಯರು ನಾಡು ಕಟ್ಟಿದ ಮಹಾನ್ ವ್ಯಕ್ತಿಗಳು.
ವಿದ್ಯಾರ್ಥಿಗಳು ವಚನಗಳು ಮತ್ತು ಭಾರತ ಸಂವಿಧಾನ ಅಧ್ಯಯನ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ವಚನಕಾರರು ಎಲ್ಲರಿಗಿಂತ ಮೇಲುಗೈ ಸಾಧಿಸಿರುವುದಕ್ಕೆ ಕಾರಣ ಅವರು ತಮ್ಮ ಅನುಭವದ ನೆಲೆಯಲ್ಲಿ ತತ್ವಗಳನ್ನು ಕಟ್ಟಿ ಕೊಟ್ಟಿರುವುದು.
ಬಸವಣ್ಣನವರು ಅಂತರಂಗದ ಶುದ್ಧಿಯ ಬಗ್ಗೆ ಹೇಳಿದರೆ, ಸರ್ವಜ್ಞ ತಮ್ಮ ತ್ರಿಪದಿಗಳಲ್ಲಿ ಕಚ್ಚೆ, ಕೈ, ಬಾಯಿ ಸರಿಯಿದ್ದರೆ ಅದೇ ದೈವತ್ವ. ಅವನೇ ನಿಶ್ಚಿಂತ ಅಂತ ಹೇಳಿದ್ದಾರೆ. ಎಂತಹ ದೊಡ್ಡ ದೊಡ್ಡ ಗ್ರಂಥಗಳು ಸಾರುವ ತತ್ವಗಳನ್ನು ವಚನಗಳು ಸರಳವಾಗಿ ಎಲ್ಲರಿಗೂ ತಲುಪಿಸುತ್ತವೆ ಎಂದರು.
ನಾವೆಲ್ಲಾ ದಿನೇ ದಿನೇ ಬೆಳೆಯುತ್ತಿರುವಂತೆ ನಮ್ಮ ಆಲೋಚನೆಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಿದರೆ ಅವು ಹೆಮ್ಮರವಾಗುತ್ತದೆ. ನುಡಿಗಿಂತ ಉತ್ತಮವಾಗಿ ನಡೆಯಬೇಕು. ನುಡಿದಂತೆ ನಡೆಯುವ ಕಾಲವೊಂದಿತ್ತು ಎಂಬುದಕ್ಕೆ ವಚನಕಾರರೇ ಸಾಕ್ಷಿಯಾಗಿದ್ದು, ನಾವೆಲ್ಲರೂ ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು, ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಿಪಂ ಅಧ್ಯಕ್ಷೆ ಉಮಾ ರಮೇಶ್, ಜಿಪಂ ಸದಸ್ಯ ಕೆ.ಎಸ್. ಬಸವರಾಜಪ್ಪ, ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ, ತಹಶೀಲ್ದಾರ್ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ ವೇದಿಕೆಯಲ್ಲಿದ್ದರು.
ದಾವಣಗೆರೆಯ ದೀಪಕಮಲ ಸಂಗೀತ ಶಾಲಾ ಕಲಾವಿದರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಮ್ಮ ಹೆಮ್ಮೆಯ ವಚನಕಾರರು ಎಂಬ ಮಡಿಕೆ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿ, ವಿತರಿಸಲಾಯಿತು.