ಚಿತ್ರದುರ್ಗ: ಅಧಿಕಾರ ಅವಕಾಶ ವಂಚಿತರಾಗಿ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ದಲಿತ ನಾಯಕ ಎಂ. ಜಯಣ್ಣ ಹಾಗೂ ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಜನಪ್ರಿಯ ನಾಯಕರಾಗಿ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಗರದಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಹೋರಾಟಗಾರರಾದ ಎಂ. ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಬ್ಬರು ಹೋರಾಟಗಾರರುತಮ್ಮ ವೈಯಕ್ತಿಕ ಬದುಕಿನ ಕಡೆಗೆ ಎಂದಿಗೂ ಗಮನ ಕೊಟ್ಟವರಲ್ಲ. ದಲಿತ ಚಳವಳಿ, ರೈತ ಚಳವಳಿ, ನೀರಾವರಿಗಾಗಿ ಹೋರಾಟ ಹೀಗೆ ಒಂದಲ್ಲ ಒಂದು ರೀತಿಯ ಹೋರಾಟಕ್ಕಾಗಿಯೇ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಜಿಲ್ಲೆ ಇಬ್ಬರು ಹೋರಾಟಗಾರರನ್ನು ಕಳೆದುಕೊಂಡು ಬಡವಾಗಿದೆ. ಈ ಇಬ್ಬರು ಹೋರಾಟಗಾರರು ಯಾವುದಾದರೂ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ ರಾಜಕೀಯ ಅಧಿಕಾರದಲ್ಲಿರುತ್ತಿದ್ದರು. ನಾನು ಕೂಡ ಶಾಸಕ, ಮಂತ್ರಿಯಾಗುತ್ತೇನೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಮತ್ತು ಬದ್ಧತೆಯಿಂದ ಇದ್ದ ಕಾರಣಕ್ಕಾಗಿ ಅಧಿಕಾರ ಅನುಭವಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಆರ್ಥಿಕ ಚಿಂತಕ ಡಾ| ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಜನಪರ ಹೋರಾಟದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಬಹುದು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಕೂಡ ಚಳವಳಿಗಾರರೇ ಆಗಿದ್ದಾರೆ. ಅಂತರಂಗದಲ್ಲಿ ಆಗುವ ತಲ್ಲಣಗಳೇಬಹಿರಂಗ ಚಳವಳಿಗೆ ಕಾರಣವಾಗುತ್ತವೆ. ಸಮಾಜ ಕಟ್ಟುವ ಹೋರಾಟಗಾರರು ಎಂದಿಗೂ ವೈಯಕ್ತಿಕಬದುಕಿನ ಕಡೆಗೆ ಗಮನ ಕೊಡುವುದಿಲ್ಲ. ಎಂ. ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಕೂಡ ದಲಿತ ಚಳವಳಿ, ರೈತ ಚಳುವಳಿಗೆಮೀಸಲಾಗಿದ್ದರೇ ಹೊರತು ಸ್ವಂತಕ್ಕಾಗಿ ಎಂದಿಗೂ ಬದುಕಿದವರಲ್ಲ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ| ದೊಡ್ಡಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಫಾ| ಎಂ.ಎಸ್. ರಾಜು, ಎಂ. ಜಯಣ್ಣ ಮತ್ತು ಮುರುಘರಾಜೇಂದ್ರ ಒಡೆಯರ್ ಪುತ್ರರು ಮತ್ತು ರಂಗಾ ನಾಯಕ್‌ವೇದಿಕೆಯಲ್ಲಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್. ದಾಸೇಗೌಡ, ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಕಸಾಪ ಗೌರವ ಕಾರ್ಯದರ್ಶಿ ಕೆ.ಎಂ. ಯೂಸೂಫ್, ಷರಿಫಾಬೀ, ಜಯಣ್ಣ ಮತ್ತು ಮುರುಘರಾಜೇಂದ್ರ ಒಡೆಯರ್‌ರವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.