ಸೋಲ್ : “ಅಣ್ವಸ್ತ್ರಗಳ ಬಟನ್ ನನ್ನ ಟೇಬಲ್ ಮೇಲೇ ಇದೆ; ಯಾವ ಹೊತ್ತಿಗೂ ನಾನದನ್ನು ಒತ್ತಬಲ್ಲೆ’ ಎಂದು ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ತನ್ನ ಹೊಸ ವರ್ಷದ ಸಂದೇಶದಲ್ಲಿ ವಿಶ್ವಕ್ಕೇ ಬೆದರಿಕೆ ಹಾಕಿದ್ದಾರೆ.
ಉತ್ತರ ಕೊರಿಯದ ನಿರಂತರ ಅಣ್ವಸ್ತ್ರ ಪರೀಕ್ಷೆಗಳು ಮತ್ತು ಅಪಾರ ಪ್ರಮಾಣದ ಅಣ್ವಸ್ತ್ರ ಸಂಗ್ರಹಣೆ ಅಮೆರಿಕ, ಜಪಾನ್ ಸಹಿತ ವಿಶ್ವದ ಎಲ್ಲ ಶಕ್ತ ರಾಷ್ಟ್ರಗಳಿಗೆ ಬಹು ದೊಡ್ಡ ಬೆದರಿಕೆಯಾಗಿದ್ದು ಕಳೆದ ಕೆಲ ತಿಂಗಳಿಂದ ಉದ್ವಿಗ್ನತೆಗೆ ಕಾರಣವಾಗಿದೆ.
“ಅಣ್ವಸ್ತ್ರ ಹಾರಿ ಬಿಡುವ ಬಟನ್ ನನ್ನ ಟೇಬಲ್ ಮೇಲೆಯೇ ಇದೆ. ಇದು ಬ್ಲಾಕ್ ಮೇಲ್ ಮಾತಲ್ಲ; ವಸ್ತು ಸ್ಥಿತಿಯ ಮಾತಾಗಿದೆ’ ಎಂದು ಹೇಳುವ ಮೂಲಕ ತನ್ನ ಉತ್ತರ ಕೊರಿಯ ದೇಶ ಸಂಪೂರ್ಣವಾಗಿ ಸಮೂಹ ನಾಶಕಗಳ ಅಣ್ವಸ್ತ್ರಗಳನ್ನು ಹೊಂದಿರುವ ದೇಶವಾಗಿದೆ ಎಂದು ಕಿಮ್ ಹೇಳಿದ್ದಾರೆ.
ಇದೇ ವೇಳೆ ಕಿಮ್ ಅವರು ತನ್ನ ದೇಶಕ್ಕೆ ಹೆಚ್ಚೆಚ್ಚು ಅಣ್ವಸ್ತ್ರಗಳು, ಖಂಡಾಂತರ ಅಣು ಕ್ಷಿಪಣಿಗಳು, ಮತ್ತು ಸಮೂಹ ನಾಶಕ ಶಸ್ತ್ರಾಸ್ತ್ರ ಗಳ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಕಳೆದ ವರ್ಷ ಪೂರ್ತಿ ಉತ್ತರ ಕೊರಿಯ ನಿರಂತರವಾಗಿ ತನ್ನ ಅಣ್ವಸ್ತ್ರಗಳನ್ನು ಪರೀಕ್ಷಿಸಿದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ಯಾಂಗ್ ಯಾಂಗನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಬೆದರಿಕೆಯನ್ನು ಹಾಕುತ್ತಲೇ ಬಂದಿದ್ದರು. ಆದರೆ ಅದರಿಂದ ಕಿಮ್ ಒಂದಿನಿತೂ ಕಂಗೆಡದೆ ಅಮೆರಿಕ ಮತ್ತು ವಿಶ್ವಸಂಸ್ಥೆಗೆ ಸೆಡ್ಡು ಹೊಡೆದು ತನ್ನ ವಿವಾದಿತ ಅಣು ಕಾರ್ಯಕ್ರಮಗಳನ್ನು ಎಗ್ಗಿಲ್ಲದೆ ಮುಂದುವರಿಸಿದ್ದರು.