Advertisement

ಕೋವಿಡ್ ಹಿಮ್ಮೆಟ್ಟಿಸಲು ಎನ್ನೆಸ್ಸೆಸ್‌ ವಾರಿಯರ್ಸ್‌

11:40 AM May 29, 2020 | Suhan S |

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಆನ್‌ಲೈನ್‌ನಲ್ಲಿ ಪಾಠ ಕಲಿಯುತ್ತ ಪದವಿ ಪರೀಕ್ಷೆ ಯಾವಾಗ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ, ಸಮಯ ವ್ಯರ್ಥ ಮಾಡದೇ ತಮಗೆ ಸಿಕ್ಕ ವೇಳೆಯಲ್ಲಿ ಪಾಠದೊಂದಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ (ಎನ್ನೆಸ್ಸೆಸ್‌) ಸ್ವಯಂ ಸೇವಕರು ಕೋವಿಡ್ ವನ್ನು ಸಮಾಜದಿಂದ ಹಿಮ್ಮೆಟ್ಟಿಸುವಲ್ಲಿ ದಣಿವರಿಯದೇ ದುಡಿಯುತ್ತಿದ್ದಾರೆ.

Advertisement

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ (ಎನ್ನೆಸ್ಸೆಸ್‌) ವಿದ್ಯಾರ್ಥಿಗಳು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೋವಿಡ್ ವಾರಿಯರ್ಸ್‌ಗಳಾಗಿದ್ದಾರೆ. ವಿಶ್ವವಿದ್ಯಾಲಯದ 386 ಕಾಲೇಜುಗಳ ಪೈಕಿ 277 ಕಾಲೇಜುಗಳಲ್ಲಿ 316 ಎನ್ನೆಸ್ಸೆಸ್‌ ಘಟಕಗಳಿದ್ದು, 25 ಸಾವಿರ ವಿದ್ಯಾರ್ಥಿಗಳು ಇದರಲ್ಲಿ ನೋಂದಣಿಯಾಗಿದ್ದಾರೆ. ಸದ್ಯ ಕೋವಿಡ್ ವಿರುದ್ಧದ ಹೋರಾಟದಲ್ಲಿ 1,500ಕ್ಕೂ ಹೆಚ್ಚು ಸ್ವಯಂ ಸೇವಕರು, 300ಕ್ಕೂ ಹೆಚ್ಚು ಯೋಜನಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕೈ ಜೋಡಿಸಿದ್ದಾರೆ.

ಕೋವಿಡ್ ಕಾರ್ಯ ಪಡೆ (ಕೋವಿಡ್ ರ್ಯಾಪಿಡ್‌ ಫೋರ್ಸ್‌) ಎಂದು ಮಾಡಿಕೊಂಡು ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೇವಕರಾಗಿ, ಬಡವರಿಗೆ ಊಟ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ, ಮಾಸ್ಕ್ ಹಂಚುವುದು, ಸಮಾಜದಲ್ಲಿ ಕೋವಿಡ್ ಜಾಗೃತಿ ಮೂಡಿಸುವುದು, ಆನ್‌ಲೈನ್‌ ಪೋಸ್ಟರ್‌, ಹೋಲ್ಡಿಂಗ್‌ ಮೂಲಕ ಅರಿವು ಮೂಡಿಸುವುದು, ಕ್ರಿಮಿನಾಶಕ ಔಷಧ  ಸಿಂಪಡಣೆ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಎನ್ನೆಸ್ಸೆಸ್‌ ಘಟಕಗಳು ಕೆಲವು ಎನ್‌ಜಿಒ, ಸಂಘ-ಸಂಸ್ಥೆಗಳು, ಮಠಗಳು, ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಇತರೆ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಬಡವರಿಗೆ ಊಟ, ವಸತಿ ವ್ಯವಸ್ಥೆಮಾಡುತ್ತಿವೆ. ನಿರ್ಗತಿಕರಿಗೆ ತರಕಾರಿ, ದಿನಸಿ ಸಾಮಗ್ರಿಗಳನ್ನೂ ವಿತರಿಸುತ್ತಿದ್ದಾರೆ. ಅಗತ್ಯ ಬಿದ್ದರೆ ರಕ್ತದಾನ ಮಾಡುವಲ್ಲಿಯೂ ಸ್ವಯಂ ಸೇವಕರು ಸಜ್ಜಾಗಿದ್ದಾರೆ.

ವಿವಿ ವ್ಯಾಪ್ತಿಯ ಮೂರೂ ಜಿಲ್ಲೆಗಳಲ್ಲಿ 316 ಎನ್ನೆಸ್ಸೆಸ್‌ ಘಟಕಗಳಲ್ಲಿ ವರ್ಷದಲ್ಲಿ ನಿರಂತರ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಘಟಕಗಳಿಗೆ ಅನುದಾನ ಬರುತ್ತದೆ. ವರ್ಷದ ಏಳು ಅಥವಾ ಹತ್ತು ದಿನಗಳ ಕಾಲ ಒಂದು ಗ್ರಾಮದಲ್ಲಿ ಶಿಬಿರ ಹಮ್ಮಿಕೊಂಡು ಶ್ರಮದಾನ ಹಾಗೂ ಸಾಮಾಜಿಕ ಅರಿವು ಕಾರ್ಯಗಳಲ್ಲಿ ಸ್ವಯಂ ಸೇವಕರು ತೊಡಗಿಕೊಳ್ಳುತ್ತಾರೆ. ಈಗ ಕೋವಿಡ್ ವಿರುದ್ಧದ ಯುದ್ಧದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ.

Advertisement

ಮಾಸ್ಕ್ ತಯಾರಿಸಿ ಹಂಚಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಈ ಮೂರೂ ಜಿಲ್ಲೆಗಳಲ್ಲಿರುವ ಎನ್ನೆಸ್ಸೆಸ್‌ ಸ್ವಯಂ ಸೇವಕರು ತಾವೇ ಮಾಸ್ಕ್ಗಳನ್ನು ಹೊಲೆಯುತ್ತಿದ್ದಾರೆ. ತಮ್ಮ ಸುತ್ತಲಿನ ಹಳ್ಳಿಗಳಲ್ಲಿ, ಬಡವರಿಗೆ, ಕ್ವಾರಂಟೈನ್‌ ಕೇಂದ್ರಗಳಲ್ಲಿ ಮಾಸ್ಕ್ ಹಂಚುತ್ತಿದ್ದಾರೆ. ಇನ್ನೂ ಕೆಲವೊಂದು ಕಡೆಗಳ ಕ್ವಾರಂಟೈನ್‌ ಕೇಂದ್ರಗಳಲ್ಲಿ ಊಟ, ಉಪಾಹಾರ ವಿತರಿಸುತ್ತಿದ್ದಾರೆ. ಬಸವಳಿದು ಬಂದ ಜನರ ಸಹಾಯಕ್ಕೆ ನಿಂತು ಕೋವಿಡ್ ವಾರಿಯರ್ಸ್‌ಗಳಾಗಿ ಸ್ವಯಂ ಸೇವಕರು ದುಡಿಯುತ್ತಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೂರೂ ಜಿಲ್ಲೆಗಳಲ್ಲಿರುವ ನಮ್ಮ ಎನ್ನೆಸ್ಸೆಸ್‌ ಸ್ವಯಂ ಸೇವಕರು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ತಮಗೆ ಸಿಕ್ಕ ಸಮಯ ವ್ಯರ್ಥ ಮಾಡದೇ ಸಮಾಜ ಸೇವೆಗಾಗಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಊಟ, ಉಪಾಹಾರ, ಕುಡಿಯುವ ನೀರು, ಮಾಸ್ಕ್ ವಿತರಣೆ, ಆರೋಗ್ಯ ಜಾಗೃತಿಯಲ್ಲಿ ನಿರತರಾಗಿದ್ದಾರೆ. ಯೋಜನಾ ಅಧಿಕಾರಿಗಳೂಚೆಕ್‌ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.- ಡಾ| ಬಿ.ಎಸ್‌. ನಾವಿ, ಸಂಯೋಜನಾಧಿಕಾರಿ, ರಾಚವಿ

 

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next