Advertisement

ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಎನ್ ಎಸ್ ಎಸ್ ಘಟಕ ಕಡ್ಡಾಯ –ಡಾ. ನಾರಾಯಣಗೌಡ

05:37 PM Apr 01, 2021 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಿಂದ ಎಲ್ಲಾ ಖಾಸಗಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಎನ್‍ಎಸ್‍ಎಸ್ ಘಟಕವನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

Advertisement

ಇಂದು ವಿಕಾಸ ಸೌಧದಲ್ಲಿ ರಾಷ್ಟ್ರೀಯ ಸೇವಾ ಯೋಜನೆ  ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಮಾತನಾಡಿದರು.

2021-22ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಸ್ವಾತಂತ್ರ್ಯ ಪೂರ್ವದ  ಹೋರಾಟ, ಸ್ವಾತಂತ್ರ್ಯದ ನಂತರದ ಸಾಧನೆಗಳು, ಮುಂದಿನ ಗುರಿಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮದ ಕ್ರಿಯಾಯೋಜನೆ ರೂಪಿಸಿ ಆಕರ್ಷಕವಾಗಿ ಕಾರ್ಯಕ್ರಮ ನಡೆಸಲು ಸಚಿವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ 13 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೂ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಪಥಸಂಚಲನದ ಆಯ್ಕೆ ಮತ್ತು ತರಬೇತಿ ಜವಾಬ್ದಾರಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ

Advertisement

ಗಣರಾಜ್ಯೋತ್ಸವ ಪೂರ್ವಭಾವಿ ಪಥಸಂಚಲನದ ಆಯ್ಕೆ ಶಿಬಿರ ಮತ್ತು ಪಥಸಂಚಲನ ತರಬೇತಿ ಶಿಬಿರ ನಡೆಸುವ ಜವಾಬ್ದಾರಿಯನ್ನು  ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೀಡಲಾಯಿತು.

ಮಂಗಳೂರು ವಿವಿ, ಗುಲ್ಬರ್ಗ ವಿವಿ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಬೆಂಗಳೂರು, ಕುವೆಂಪು ವಿವಿ ಶಿವಮೊಗ್ಗ, ಕರ್ನಾಟಕ ವಿವಿ ಧಾರವಾಡ,  ಕರ್ನಾಟಕ ರಾಜ್ಯ ಕಾನೂನು ವಿವಿ ಹುಬ್ಬಳ್ಳಿ, ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿವಿ ಬೀದರ್, ಬೆಂಗಳೂರು ಕೇಂದ್ರ ವಿವಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರ ಮತ್ತು ಮಂಡ್ಯ ವಿಶ್ವ ವಿದ್ಯಾಲಯದಲ್ಲಿ ಭಾವೈಕ್ಯತಾ ಶಿಬಿರ ಆಯೋಜಿಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿ:ನಂದಿಗ್ರಾಮದಲ್ಲಿ ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ : ರಾಜ್ಯಪಾಲರಿಗೆ ಮಮತಾ ದೂರು

2021-22 ನೇ ಸಾಲಿನಲ್ಲಿ ಯುವಜನೋತ್ಸವ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ರಾಣಿಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ನೀಡಲಾಯಿತು. ರಾಜ್ಯಮಟ್ಟದ ಎನ್ ಎಸ್ ಎಸ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ನಡೆಸಲಾಗುವುದು.

ಪ್ರಸಕ್ತ ಸಾಲಿನಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ

2021-22 ನೇ ಸಾಲಿನಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ ನೀಡುವ ಗುರಿ ನೀಡಲಾಗಿದೆ. ಎನ್ ಎಸ್ ಎಸ್ ಅಧಿಕಾರಿಗಳು ಈ ಜವಾಬ್ದಾರಿ ನಿರ್ವಹಿಸುತ್ತಿದ್ದು, ಕಳೆದ ಸಾಲಿನಲ್ಲಿ ಸುಮಾರು ನಾಲ್ಕುವರೆ ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಮುಂದಿನ ಸಾಲಿನಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ಇದು ವಿಸ್ತರಣೆ ಆಗಬೇಕು ಎಂದು ಸಚಿವರು ಹೇಳಿದರು.

ಕಳೆದ ವರ್ಷ ಕೊವಿಡ್ 19 ಸಂದರ್ಭದಲ್ಲಿ ಎನ್‍ಎಸ್‍ಎಸ್ ಸ್ವಯಂ ಸೇವಕರು ಬಹಳ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಈಗ ಎರಡನೆ ಅಲೆ ಶುರುವಾಗಿದೆ. ಹೀಗಾಗಿ ಎನ್‍ಎಸ್‍ಎಸ್ ಮತ್ತೊಮ್ಮೆ ಕೋವಿಡ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಬೇಕು. ಪರಿಸರ ರಕ್ಷಣೆ, ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆಯಬೇಕು. ಅದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲು ಸರಕಾರ ಬದ್ದವಾಗಿದೆ ಎಂದು ಸಚಿವ ಡಾ. ನಾರಾಯಣಗೌಡ ಹೇಳಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಎನ್ ಎಸ್ ಎಸ್ ಅಧಿಕಾರಿ ಪ್ರಥಾಪ್ ಲಿಂಗಯ್ಯ, ಕೇಂದ್ರ ಸರ್ಕಾರದ ಪ್ರಾದೇಶಿಕ ನಿರ್ದೇಶಕ ಖಾದ್ರಿ ನರಸಿಂಹಯ್ಯ, ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕ ಮುರಳೀಧರ್, ಎಲ್ಲಾ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಎನ್‍ಎಸ್‍ಎಸ್ ಸಂಯೋಜಕರು, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next