Advertisement

ಎನ್ನೆಸ್ಸೆಸ್‌: ಸೇವೆ, ಸಾಧನೆ ಹಾದಿಯಲ್ಲಿ ಸುವರ್ಣ ಸಂಭ್ರಮ

10:22 PM Sep 23, 2019 | Team Udayavani |

ತಾರುಣ್ಯದ ಶಕ್ತಿ ಇರುವಾಗ ನಿಮ್ಮ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಸ್ವಾಮಿ ವಿವೇಕಾನಂದರ ಕರೆಯಂತೆ ಬಲಿಷ್ಠ ಯುವ ಸಮೂಹವನ್ನು ನಿರ್ಮಿಸುವ ಪಣ ತೊಟ್ಟ ದೇಶದ ಅತೀ ದೊಡ್ಡ ಸಂಘಟನೆ – ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌).

Advertisement

ಸೇವೆಯೇ ಈ ಸಂಘಟನೆಯ ಪರಮಾರ್ಥ. ತ್ಯಾಗ ಮತ್ತು ಅಹಿಂಸೆಯ ಪ್ರತೀಕ. ಸಮಾಜದ ನೋವುಗಳಿಗೆ ಸ್ಪಂದಿಸುವುದು ಇದರ ಅಂಕಿತ. “ನನಗಲ್ಲ ನಿನಗೆ’ ಎಂಬ ಧ್ಯೇಯ. ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿ, ಉತ್ಸಾಹಿ ನವತರುಣರನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯವನ್ನು ಎನ್ನೆಸ್ಸೆಸ್‌ ಮಾಡುತ್ತಿದೆ. ಯುವಜನ ಸಬಲೀಕರಣ ಇಲಾಖೆ ಈ ಸೇವಾ ಸಂಸ್ಥೆಯ ಮುಂದಾಳತ್ವ ವಹಿಸಿದೆ. ಮಹಾತ್ಮಾ ಗಾಂಧಿಯವರ ತಣ್ತೀ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಎನ್ನೆಸ್ಸೆಸ್‌ ಹೊಸ ತಲೆಮಾರಿನ ಅಭಿವೃದ್ಧಿಗೆ ಶ್ರಮಿ ಸುತ್ತಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಜತೆಗೆ ಪ್ರತಿಯೊಬ್ಬ ವ್ಯಕ್ತಿಯ, ಸಮಾಜದ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ.

ಡಾ| ಸರ್ವೇಪಲ್ಲಿ ರಾಧಾಕೃಷ್ಣನ್‌ ನೇತೃತ್ವದ ಸಮಿತಿ ಮೂಲಕ ಎನ್ನೆಸ್ಸೆಸ್‌ ಜಾರಿಗೆ ಬಂತು. ಈ ಸಾಧನೆಯ ಹಾದಿಗೆ ಈಗ ಸುವರ್ಣ ವರ್ಷದ ಸಂಭ್ರಮ. 1969ರ ಸೆ. 24ರಂದು ಗಾಂಧೀಜಿ ಅವರ ಶತವರ್ಷಾಚರಣೆಯ ಅಂಗವಾಗಿ ಆಗಿನ ಕೇಂದ್ರ ಶಿಕ್ಷಣ ಸಚಿವ ಡಾ| ವಿ.ಕೆ. ರಾವ್‌ ವಿಶ್ವವಿದ್ಯಾಲಯಗಳಲ್ಲಿ ಎಸ್ಸೆನ್ನೆಸ್‌ ಅಸ್ತಿತ್ವಕ್ಕೆ ತಂದರು. ಹೀಗೆ ಎನ್ನೆಸ್ಸೆಸ್‌ ಕಾಲೇಜು ಮಟ್ಟದಲ್ಲಿ ಸ್ನಾತಕೋತ್ತರ, ಪದವಿ ಹಾಗೂ ತದ ನಂತರ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ದೇಶದ 37 ವಿಶ್ವ ವಿದ್ಯಾಲಯ ಗಳಲ್ಲಿ ಕಾರ್ಯ ರೂಪಕ್ಕೆ ಬಂತು. 40 ಸಾವಿರ ಸ್ವಯಂ ಸೇವಕರನ್ನು ಒಗ್ಗೂಡಿಸಿ ಕೊಂಡು ಆರಂಭವಾದ ಈ ಸೇವಾ ಸಂಸ್ಥೆಯಲ್ಲಿ ಈಗ 4 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ.

ಅವಕಾಶಗಳ ಆಗರ
ವಿದ್ಯಾರ್ಥಿ ದೆಸೆಯಲ್ಲೇ ಸೇವಾ ಮನೋಭಾವ ಮೂಡಬೇಕು ಹಾಗೂ ಅವರ ವ್ಯಕ್ತಿತ್ವ ವಿಕಸನವಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸ್ವಯಂಸೇವಕರೂ 2 ವರ್ಷಗಳ ಅವಧಿಯಲ್ಲಿ 240 ಗಂಟೆಗಳ ಅವಧಿಯನ್ನು ಪೂರೈಸಿರಬೇಕು. ವಾರ್ಷಿಕ ಶಿಬಿರದಲ್ಲೂ ಪಾಲ್ಗೊಂಡಿರ ಬೇಕು. ಶ್ರಮದಾನ, ಪರಿಸರ ಮತ್ತು ಸ್ವಚ್ಛತೆಯ ಕುರಿತು ಜಾಗೃತಿ, ಕೌಶಲಾಭಿವೃದ್ಧಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರಗತಿ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ದುಡಿಯುವ ಅಂಶಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ನಾಯಕತ್ವ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶವೂ ಸ್ವಯಂಸೇವಕರಿಗೆ ಸಿಗುತ್ತದೆ. ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಲ್ಲೂ ಅವಕಾಶ ಲಭಿಸುತ್ತದೆ. ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಪ್ರದಾಯವೂ ಇದೆ. ಪ್ರತೀ ಘಟಕವು ಆಯಾ ಕಾಲೇಜಿನ ಶಿಕ್ಷಕರನ್ನು ಯೋಜನಾಧಿಕಾರಿಗಳನ್ನು ಒಳಗೊಂಡಿರುತ್ತದೆ. ಅವರ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಚಟುವಟಿಕೆ ನಡೆಯುತ್ತವೆ.

ಎಲ್ಲರೂ ಸುಖೀಗಳಾಗಲಿ, ಎಲ್ಲರೂ ರೋಗರಹಿತರಾಗಲಿ, ಎಲ್ಲರೂ ಎಲ್ಲೆಲ್ಲೂ ಮಂಗಳವನ್ನೇ ಕಾಣಲಿ ಎಂದು ಕಳಂಕರಹಿತ ಮನದಿಂದ ಸಮಾಜಕ್ಕಾಗಿ ಪ್ರಾರ್ಥಿಸುವ ಸಹೃದಯ ಎನ್ನೆಸ್ಸೆಸ್‌ ಸ್ವಯಂಸೇವಕರದ್ದು. ಇವರ ಸಮಾಜದ ಬೆಳಕಾಗುವ ಹಾದಿ ಹೀಗೇ ನಿರಂತರವಾಗಿ ಸಾಗಲಿ. ಎನ್ನೆಸ್ಸೆಸ್‌ ಇನ್ನಷ್ಟು ಬೆಳೆಯಲಿ ಇತರರನ್ನು ಬೆಳೆಸಲಿ ಎಂಬುದೇ ಆಶಯ.

Advertisement

-  ರಶ್ಮಿ ಯಾದವ್‌ ಕೆ., ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next