Advertisement

ಕವಿವಿಯಲ್ಲಿ ಎನ್ನೆಸ್ಸೆಸ್‌ ಬಲವರ್ಧನೆ ಕಾರ್ಯಾಗಾರ

03:00 PM May 27, 2017 | Team Udayavani |

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಆಶ್ರಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎನ್ನೆಸ್ಸೆಸ್‌ ಬಲವರ್ಧನೆ ಕುರಿತ ಕಾರ್ಯಕ್ರಮಾಧಿಕಾರಿಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. 

Advertisement

ಕಾರ್ಯಾಗಾರ ಉದ್ಘಾಟಿಸಿದ ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಎನ್ನೆಸ್ಸೆಸ್‌ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಅವರಲ್ಲಿ ಸೇವಾ ಮನೋಭಾವನೆ, ತ್ಯಾಗ, ರಾಷ್ಟ್ರೀಯ ಮನೋಭಾವನೆ, ಸಮನ್ವಯತೆ ಬೆಳೆಸುವುದರಲ್ಲಿ ಕಾರ್ಯಕ್ರಮಾಧಿಕಾರಿಗಳ ಪಾತ್ರ ಗಣನೀಯವಾದದು. ಎನ್ನೆಸ್ಸೆಸ್‌ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವುದರಲ್ಲಿ ಸಂದೇಹ ಇರುವುದಿಲ್ಲ ಎಂದರು. 

ಸರಳ ಜೀವನ, ಪ್ರೀತಿ, ಸಹನೆ, ಶ್ರಮದಾನ, ಸಹಕಾರ ಮನೋಭಾವ, ಕಷ್ಟಕರ ಜೀವನ, ಸಮಯ ಪ್ರಜ್ಞೆ, ಸಹೋದರತ್ವ ಮುಂತಾದ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಯುವಕರು ಕಲಿತುಕೊಳ್ಳಬಹುದು. ಯುವ ಜನತೆಯಲ್ಲಿರುವ ಸಮಾಜದ ಉತ್ಸಾಹ, ಶಕ್ತಿ ಮತ್ತು ಭರವಸೆಯ ಪ್ರತೀಕವನ್ನು ಹೊರ ಹೊಮ್ಮುವಂತೆ ಮಾಡಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳುವಂತೆ ಮಾಡುವುದರಲ್ಲಿ ಎನ್ನೆಸ್ಸೆಸ್‌ ಪಾತ್ರ ಪ್ರಮುಖವಾಗಿದೆ ಎಂದರು. 

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ|ಡಿ.ಎಂ. ನಿಡವಣಿ ಮಾತನಾಡಿ, ಎನ್ನೆಸ್ಸೆಸ್‌ ಗುರಿ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಹುದ್ದೆಗೆ ಏರುವುದು ಖಚಿತ. ಪ್ರಸ್ತುತ ದಿನಮಾನದಲ್ಲಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐ.ಎ.ಎಸ್‌., ಐ.ಪಿ.ಎಸ್‌ ಮತ್ತು ಕೆ.ಎ.ಎಸ್‌ ಅಧಿಕಾರಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎನ್ನೆಸ್ಸೆಸ್‌ ಸ್ವಯಂ ಸೇವಕರಾಗಿದ್ದ ನಿದರ್ಶನಗಳಿವೆ ಎಂದರು. 

ಮೂರು ವಿಶ್ವವಿದ್ಯಾಲಯದ ಕಾರ್ಯಕ್ರಮಾಧಿ ಧಿಕಾರಿಗಳೊಂದಿಗೆ ಸಂವಾದ ನಡೆಸಿದ ಎನ್ನೆಸ್ಸೆಸ್‌ ಪ್ರಾದೇಶಿಕ ನಿರ್ದೇಶಕ ಅರುಣ ಪೂಜಾರ ಅವರು, ಮುಂದಿನ ದಿನಗಳಲ್ಲಿ ಎನ್ನೆಸ್ಸೆಸ್‌ ಅಭಿವೃದ್ಧಿ ಮಾಡಲು ಎಲ್ಲಾ ಸೂಕ್ತ ಮಾರ್ಗಗಳನ್ನು ಅನುಸರಿಸಲಾಗುವುದು. ಅಲ್ಲದೆ ಕಾರ್ಯಕ್ರಮಾಧಿಕಾರಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಹರಿಸುವ ಭರವಸೆ ನೀಡಿದರು. ಶಿವಾನಿ ಪಾಠಕ, ವಿಶಾಲ ಮತ್ತು ಅಮಿತ ಪ್ರಾರ್ಥಿಸಿದರು. ಡಾ| ಎಲ್‌.ಟಿ. ನಾಯಕ ಸ್ವಾಗತಿಸಿದರು. ಪ್ರೊ| ಎಸ್‌.ಕೆ. ಸಜ್ಜನ ವಂದಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next