Advertisement

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

03:17 PM Mar 22, 2024 | Team Udayavani |

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌)ಯ ಧ್ಯೇಯ ವಾಕ್ಯವಾದ “ಶ್ರಮಯೇವ ಜಯತೇ’ ತಿಳಿಸುವಂತೆ ಜೀವನದಲ್ಲಿ ಕಾಯಕ ಮಾಡಿದರಷ್ಟೇ ಕೈಲಾಸ. ಬದುಕು, ಸರಳವಾದ ಜೀವನದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದೆ ಈ ಬಾರಿ ನಮ್ಮ ಕಾಲೇಜು ಆಯೋಜಿಸಿದ ಏಳು ದಿನಗಳ ಎನ್‌ಎಸ್‌ಎಸ್‌ ಶಿಬಿರ. ಈ ಏಳು ದಿನ ವಿಶೇಷ ಚೇತನ ಮಕ್ಕಳೊಡನೆ ಕಳೆದ ಸಮಯ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳೆಂದರೆ ತಪ್ಪಾಗಳಾರದು. ಮಕ್ಕಳ ನಿಷ್ಕಲ್ಮಶ ಮನಸ್ಸು, ತುಂಟ ನಗು ಮತ್ತು ಅವರು ತೋರಿಸಿದ ಪ್ರೀತಿ ಶಿಬಿರದಲ್ಲಿ ಭಾಗವಹಿಸಿದ ನಮ್ಮನ್ನು ಮಂತ್ರಮುಗ್ದಗೊಳಿಸಿರುವುದಂತು ಸತ್ಯ.

Advertisement

ಈ ವರ್ಷ ಕಾಲೇಜಿನಿಂದ ವಿಶೇಷ ಚೇತನ ಮಕ್ಕಳ ಸಂಸ್ಥೆಯೊಂದರಲ್ಲಿ ಶಿಬಿರ ನಡೆದಿದ್ದು, ಮಕ್ಕಳು ಉತ್ಸಾಹದಿಂದ ಮಾಡುವ ಕೆಲಸಗಳು, ಕ್ರಾಫ್ಟ್ ತಯಾರಿಕೆ, ಗ್ರೀಟಿಂಗ್‌ ತಯಾರಿಕೆ ಹಾಗೂ ಇನ್ನಿತರ ಕರಕೌಶಲ ಗಳನ್ನು ನೋಡಿ ನಾವೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವನ್ನು ತುಂಬಿದೆ. ಈ ಶಿಬಿರ ಮುಗಿಯುವ ವೇಳೆಗೆ ನಮಗೊಂದು ಸ್ಫೂರ್ತಿ ಲಭಿಸಿದೆ. ನನ್ನ ಬದುಕಿನ ಜವಾಬ್ದಾರಿಗಳನ್ನು ಮರೆತು ಏಳು ದಿನಗಳ ಕಾಲ ಸಂಪೂರ್ಣವಾಗಿ ಶಿಬಿರದಲ್ಲಿ ತೊಡಗಿಸಿಕೊಂಡಿದ್ದು ನಮ್ಮಲ್ಲಿರುವ ಭಾವನೆಗಳಿಗೆ ಹೊಸದೊಂದು ಸ್ಪರ್ಶ ನೀಡಿದೆ ಎನ್ನಬಹುದು.

ಪ್ರತಿ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತಿದ್ದ ನಮ್ಮ ದಿನಚರಿ ರಾತ್ರಿ 11 ಗಂಟೆಯ ವರೆಗೆ ಮುಂದುವರೆಯುತ್ತಿತ್ತು. ಈ ಅವಧಿಯಲ್ಲಿ ನಡೆಯುತ್ತಿದ್ದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು, ಶ್ರಮದಾನ ಜತೆಗೆ ನಮ್ಮ ಒಂದಿಷ್ಟು ಹರಟೆ, ನೃತ್ಯ ಎಲ್ಲವೂ ನಮ್ಮ ಉತ್ಸಾಹವನ್ನು ಹೆಚ್ಚಿಸಿತ್ತು. ಒಟ್ಟಾರೆಯಾಗಿ ನಮ್ಮ ಜೀವನದಲ್ಲಿ ಈ ಶಿಬಿರ ರಾಷ್ಟ್ರೀಯತೆಯ ಬಗ್ಗೆ ಅರಿವು ಮೂಡಿಸಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳೆಲ್ಲರೂ ಯಾವುದೇ ಭೇದಭಾವವಿಲ್ಲದೆ ಒಗ್ಗೂಡಿ, ಜನಿಸಿದ ಮಾತ್ರಭೂಮಿಯಲ್ಲಿ ನಮ್ಮ ಬದುಕನ್ನು ನಿರ್ವಹಿಸಿ, ಅಸ್ಮಿತೆಯನ್ನು ಕಾಪಾಡಿಕೊಂಡು, ಶ್ರಮವಹಿಸಬೇಕು ಎಂಬುದನ್ನು  ತಿಳಿಸಿತು.

ಶಿಬಿರದ ನಡುವೆ ನಡೆದ ಸಭೆಗಳಲ್ಲಿ ಗಣ್ಯರ ಸ್ಪೂರ್ತಿಯ ಮಾತುಗಳು ಮನಕ್ಕೆ ಮುಟ್ಟುವಂತಿತ್ತು. ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಮಕ್ಕಳೊಡನೆ ಕಳೆದ ಆ ದಿನಗಳು ನನ್ನ ಬದುಕಿನಲ್ಲಿ ಎಂದೂ ಮರೆಯಲಾಗದ ವಿಶೇಷ ದಿನಗಳಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು.

Advertisement

ಅಕ್ಷಯ ಭಟ್‌

ಎಂಜಿಎಂ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next