Advertisement

ಹಾಡಿಯ ಶಾಲೆಗೆ ಹೊಸ ರೂಪ ನೀಡಿದ ಎನ್‌ಎಸ್‌ಎಸ್‌

08:44 PM Jan 13, 2020 | Lakshmi GovindaRaj |

ಹುಣಸೂರು: ಎನ್‌ಎಸ್‌ಎಸ್‌ ಶಿಬಿರಾರ್ಥಿಗಳು ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆ ಸಮೀಪ‌ ದತ್ತು ಪಡೆದಿರುವ ತಕ್ಕಲು ಹಾಡಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಬಳಸುವುದನ್ನು ಕಲಿ ಕೊಟ್ಟರು. ಶಾಲೆಯ ಕೊಠಡಿಗಳಿಗೆ ಸುಣ್ಣ ಬಣ್ಣ ಬಳಿದು, ನಲಿ-ಕಲಿ ಚಪ್ಪರವನ್ನು ನಿರ್ಮಿಸಿದರಲ್ಲದೇ ಸಸಿ ನೆಟ್ಟು ಪೋಷಿಸುವಂತೆ ಮನವಿ ಮಾಡಿದರು.

Advertisement

ಮೈಸೂರಿನ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ತಾಲೂಕಿನ ಗದ್ದಿಗೆಯಲ್ಲಿ ಆಯೋಜಿಸಲಾಗಿತ್ತು. ಪ್ರತಿದಿನವು ಕಾನೂನು ಅರಿವು-ನೆರವು, ವ್ಯಕ್ತಿತ್ವದ ಬೆಳವಣಿಗೆಗೆ ಆರೋಗ್ಯಕರ ಅಭ್ಯಾಸಗಳು, ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ, ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯಗಳು ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಎನ್‌ಎಸ್‌ಎಸ್‌ ಪಾತ್ರ ವಿಷಯಗಳಿಗೆ ಸಂಬಂಧಿಸಿದಂತೆ ಗಣ್ಯರು ಉಪನ್ಯಾಸ ನೀಡಿದರು.

ನಿತ್ಯ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಗ್ರಾಮಸ್ಥರ ಮನಗೆದ್ದರು. ಶಿಬಿರದಲ್ಲಿ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಜನಪದಗೀತೆ, ಭಾವಗೀತೆ, ದೇಶಭಕ್ತಿಗೀತೆ, ಶಿಬಿರದ ಸಾಂಪ್ರದಾಯಿಕ ಅರಿವು ಮೂಡಿಸುವ ಮೆರವಣಿಗೆ, ಆಶುಭಾಷಣ, ಕಿರುಚಲನಚಿತ್ರ ನಿರ್ಮಾಣ, ನಾಟಕ ಮತ್ತು ಚರ್ಚಾ ಸ್ಪರ್ಧೆಗಳು ನಡೆದವು. ವಿವಿಧ ಕಲಾವಿದರ ತಂಡವು ಸಾಂಸ್ಕೃತಿಕ ರಸದೌತಣ ನೀಡಿತು.

ಶ್ರಮದಾನ: ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಗದ್ದಿಗೆ ಕೆಂಡಗಣ್ಣಸ್ವಾಮಿ ದೇವಾಲಯದ ಬಳಿಯ ಲಕ್ಷ್ಮಣತೀರ್ಥ ನದಿಯ ಹೆಬ್ಬಳ್ಳ ಆವರಣ, ನೀರಿನ ಟ್ಯಾಂಕ್‌ ಹಾಗೂ ಗ್ರಾಮದ ಬೀದಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಜಾಥಾ ಹಾಗೂ ಬೀದಿ ನಾಟಕಗಳ ಮೂಲಕ ಗ್ರಾಮಸ್ಥರು ಹಾಗೂ ತಕ್ಕಲ ಹಾಡಿಯ ಗಿರಿಜನರಿಗೆ ಅರಿವು ಮೂಡಿಸಿದರು.

ಉಚಿತ ಚಿಕಿತ್ಸೆ: ಗದ್ದಿಗೆಯ ಕೆಂಡಗಣ್ಣೇಶ್ವರಸ್ವಾಮಿ ಮತ್ತು ಮಹದೇಶ್ವರಸ್ವಾಮಿ ಸೇವಾ ಟ್ರಸ್ಟ್‌ ಸಹಕಾರದಲ್ಲಿ ನಡೆದ ಶಿಬಿರದಲ್ಲಿ ಸಸ್ಯಧಾಮ ಮಾಲೀಕ, ಪರಿಸರವಾದಿ ನಾಗಭೂಷಣ್‌ ಸಹಯೋಗದೊಂದಿಗೆ ಕೆ.ಎಸ್‌.ಗದ್ದಿಗೆ, ಕುಟ್ಟವಾಡಿ ಗ್ರಾಮದಲ್ಲಿ 50ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟರು. ಸ್ವಚ್ಛತೆಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಲಾಯಿತು. ಜೆಎಸ್‌ಎಸ್‌ ಆರ್ಯುವೇದಿಕ್‌ ಆಸ್ಪತ್ರೆಯ ಹಿರಿಯವೈದ್ಯ ಡಾ.ಓಂಪ್ರಕಾಶ್‌ ನೇತೃತ್ವದ ತಂಡ 130ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರಿಗೆ ತಪಾಸಣೆ ಹಾಗೂ ಮಕ್ಕಳ ದಂತ ವೈದ್ಯ ಡಾ. ನಿಸರ್ಗ ಕನ್ಸರ್‌ ನೇತೃತ್ವದಲ್ಲಿ ಉಚಿತ ದಂತ ತಪಾಸಣೆ ನಡೆಯಿತು.

Advertisement

ಶಿಬಿರದಲ್ಲಿ ಕೆಪಿಟಿಸಿಎಲ್‌ ಅಭಿಯಂತರ ಡಾ.ಶಂಕರ್‌ ದೇವನೂರು, ಸಹಾಯಕ ಪ್ರಾಧ್ಯಾಪಕ ಕಿರಣ್‌, ರಂಗಕಲಾವಿದ ಶ್ರೀಕಾಂತಮೂರ್ತಿ, ಜಾನಪದ ಗಾಯಕ ಅಮ್ಮ ರಾಮಚಂದ್ರ, ಉತ್ತಮ ಸ್ವಯಂ ಸೇವಕ-ಸೇವಕಿ ಪ್ರಶಸ್ತಿಗೆ ಕೆ.ಎಸ್‌.ರಕ್ಷಿತ್‌, ನಿರಂಜನ್‌ ಹಾಗೂ ಜಯಶ್ರೀ ಭಾಜನರಾದರು. ಶಿಬಿರದ ಸಮಗ್ರ ಪ್ರಶಸ್ತಿಯನ್ನು ಸಂಕಲ್ಪ ತಂಡವು ಪಡೆಯಿತು. ಶಿಬಿರಾಧಿಕಾರಿ ಸಂತೋಷ್‌ಕುಮಾರ್‌ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next