ಫ್ರೆಂಚ್ ಗಯಾನಾ (ಅಮೆರಿಕ): ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ವಾಣಿಜ್ಯ ಶಾಖೆಯಾದ “ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ (ಎನ್‌ಎಸ್‌ಐಎಲ್) ಸಂಸ್ಥೆ ವತಿಯಿಂದ “ಜಿ ಸ್ಯಾಟ್-24′ ಎಂಬ ಉಪಗ್ರಹವನ್ನು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದಿಂದ ಗುರುವಾರ ಬೆಳಗಿನ ಜಾವ 3.20 ಗಂಟೆ ಸುಮಾರಿಗೆ ನಭಕ್ಕೆ ಕಳುಹಿಸಲಾಯಿತು.
ಉಡಾವಣೆಗೊಂಡ 40 ನಿಮಿಷಗಳ ನಂತರ, ಭೂಮಿಯಿಂದ 35,825 ಕಿ.ಮೀ. ಎತ್ತರದಲ್ಲಿರುವ ಜಿಯೋ ಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಕಕ್ಷೆಗೆ ಹೋಗಿ ಸೇರಿಕೊಂಡಿತು ಎಂದು ಇಸ್ರೋ ತಿಳಿಸಿದೆ. ಇದು ಎನ್‌ಎಸ್‌ಐಎಲ್ ಸಂಸ್ಥೆಯು ಖಾಸಗಿ ಕಂಪನಿಯೊಂದಕ್ಕಾಗಿ ತಯಾರಿಸಿದ ಉಪಗ್ರಹ ಎನಿಸಿದೆ.
“ಟಾಟಾ ಪ್ಲೇ’ಗಾಗಿ ತಯಾರಿಸಿದ ಉಪಗ್ರಹ: “ಜಿ ಸ್ಯಾಟ್-24 ಉಪಗ್ರಹವು 24- ಕೆ.ಯು. ಬ್ಯಾಂಡ್ ಮಾದರಿಯ ಸಂವಹನ ಉಪಗ್ರಹವಾಗಿದ್ದು, ಇದನ್ನು “ಡೈರೆಕ್ಟ್-ಟು- ಹೋಂ’ (ಡಿಟಿಎಚ್) ಸೇವೆಗಳಿಗೆ ಬಳಸಿಕೊಳ್ಳಬಹುದು. ಈ ಉಪಗ್ರಹವನ್ನು ತಯಾರಿಸಿಕೊಡುವಂತೆ ಟಾಟಾ ಪ್ಲೇ ಕಂಪನಿಯು ಎನ್‌ಎಸ್‌ಐಎಲ್ ಸಂಸ್ಥೆಗೆ ಮನವಿ ಮಾಡಿದ್ದು ಆ ಹಿನ್ನೆಲೆಯಲ್ಲಿ ಉಪಗ್ರಹವನ್ನು ಇಸ್ರೋ ನಿರ್ಮಿಸಿತ್ತು. ಒಪ್ಪಂದದ ಅನುಸಾರ, ಉಡಾವಣೆಗೊಂಡ ಉಪಗ್ರಹದ ಸಂಪೂರ್ಣ ಉಪಯೋಗವನ್ನು ಟಾಟಾ ಪ್ಲೇ ಸಂಸ್ಥೆಯೇ ಪಡೆದುಕೊಳ್ಳಲಿದೆ.
“ಜಿ ಸ್ಯಾಟ್ - 24′ ಉಪಯೋಗಗಳು :
- ಉತ್ಕೃಷ್ಟ ಮಟ್ಟದ ಡಿಟಿಎಚ್ ಸೇವೆಗಳು ಲಭ್ಯ.
- ಹೆಚ್ಚು “ಹೈ ಡೆಫಿನಿಷನ್’ (ಎಚ್.ಡಿ.) ಟಿವಿ ವಾಹಿನಿಗಳಿಗೆ ಅವಕಾಶ.
- ಮಳೆ ಬಂದಾಗ ಡಿಟಿಎಚ್ ಸೇವೆಗಳಿಗೆ ಆಗುವ ಅಡಚಣೆ ತೀರಾ ಕಡಿಮೆ.
- ದೊಡ್ಡ ಮಟ್ಟದ ದತ್ತಾಂಶ ರವಾನೆ, ಡಿಟಿಎಚ್ ಆಧಾರಿತ ತರಗತಿಗಳು, ಡಿಜಿಟಲ್ ಸಿನೆಮಾ ಮುಂತಾದ ಸೇವೆಗಳು ಸಾಧ್ಯ.