Advertisement

ನನಸಾಗದ ನಿವೇಶನ ರಹಿತರ ಕನಸು!

06:26 PM Oct 31, 2019 | Team Udayavani |

„ಪ್ರಶಾಂತ್‌ ಶೆಟ್ಟಿ
ಎನ್‌.ಆರ್‌.ಪುರ: ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಜಾಗ ಕಾಯ್ದಿರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಒಂದು ವರ್ಷ ಕಳೆದರೂ ಇನ್ನೂ ಕಾರ್ಯಗತವಾಗಿಲ್ಲ ಎಂಬ ಕೂಗು ನಿವೇಶನ ರಹಿತರಿಂದ ಕೇಳಿಬರುತ್ತಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ನಾಗಲಾಪುರ ಗ್ರಾಮದ ಸರ್ವೆ ನಂ.179ರಲ್ಲಿ 5.20 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಹಾಗೂ 1ಎಕರೆ ಜಮೀನನ್ನು ಹಿಂದೂ ಸ್ಮಶಾನಕ್ಕಾಗಿ ಕಾಯ್ದಿರಿಸುಸುವಂತೆ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ಸರ್ವೆ ನಂ. ವ್ಯಾಪ್ತಿಯಲ್ಲಿ ಸಾಕಷ್ಟು ಗೋಮಾಳ ಜಮೀನು ಲಭ್ಯವಿದೆ. ಡೀಮ್ಡ್ ಫಾರೆಸ್ಟ್‌ ಜಿಲ್ಲಾ ಅರಣ್ಯ, ಸೆಕ್ಷನ್‌ 4ರ ಅರಣ್ಯ ಮೀಸಲು ಅರಣ್ಯವಾಗದೇ ಇರುವುದನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಭೂ ಕಂದಾಯ ನಿಯಮ 1966ರ 67(4) ಮತ್ತು ಭೂ ಮಂಜೂರಿ ನಿಯಮ 1969ರ 18-ಎ ಪ್ರಕಾರ ನಾಗಲಾಪುರ ಗ್ರಾಮದಲ್ಲಿ 6.20 ಎಕರೆ ಕಂದಾಯ ಜಮೀನನ್ನು 29ರ ಸೆಪ್ಟೆಂಬರ್‌ 2018ರಂದು ಗ್ರಾಮ ಪಂಚಾಯಿತಿಯ ನಿವೇಶನ ರಹಿತರಿಗಾಗಿ ಆಶ್ರಯ ನಿವೇಶನ ಹಾಗೂ ಸ್ಮಶಾನ ಜಾಗಕ್ಕೆ ಕಾಯ್ದಿರಿಸಿ ಆದೇಶಿಸಿದ್ದರು.

ಒಂದು ವರ್ಷದ ಹಿಂದೆ ತಾಲೂಕಿನ ಸೀಗುವಾನಿ ಗ್ರಾಮದಿಂದ ಜ್ಯೋತಿಷಿಯೊಬ್ಬರ ಮಾತು ಕೇಳಿ ಗ್ರಾಮವನ್ನೇ ತೊರೆದಿದ್ದ ಪ್ರಸ್ತುತ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗಕ್ಕೂ ಇದೇ ಗ್ರಾಮದಲ್ಲಿ ಆಶ್ರಯ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲು ತಾಲೂಕು ಆಡಳಿತ ನಿರ್ಧರಿಸಿತ್ತು.

ನಿವೇಶನ ಹಂಚಿಕೆ ಪ್ರಕ್ರಿಯೆಗೆ ಕಾರ್ಯ ಪ್ರವೃತ್ತರಾಗಿದ್ದ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಅರಣ್ಯ ಇಲಾಖೆಯಿಂದ ಬೆಳೆಸಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸಿ, ಕಂದಾಯ ಇಲಾಖೆಯಿಂದ ದಾಖಲೆ ಸಮೇತ ಪಂಚಾಯಿತಿಗೆ ಹಸ್ತಾಂತರಿಸಿ ಬಡಾವಣೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡುವಂತೆ ಪತ್ರ ಬರೆದಿದ್ದರು.

Advertisement

ಆಶ್ರಯ ನಿವೇಶನಕ್ಕೆ ಮೀಸಲಿರಿಸಿದ್ದ ಜಾಗವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿ ಮುಂಜಾಗ್ರತೆಯಿಂದ ಸ್ಥಳೀಯರ ಸಹಕಾರ ಪಡೆದು ಕಂದಕ ನಿರ್ಮಿಸಿ ಅತಿಕ್ರಮ ಪ್ರವೇಶ ಮಾಡದಂತೆ ಎಚ್ಚರಿಕೆಯ ನಾಮಫಲಕವನ್ನು ಅಳವಡಿಸಿತ್ತು.

ಅರಣ್ಯ ಇಲಾಖೆಯ ವಿಳಂಬ ನೀತಿಯಿಂದಾಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿ ಒಂದು ವರ್ಷಗಳು ಸಂದರೂ ನಿವೇಶನ ಹಂಚಿಕೆ ಸಾಧ್ಯವಾಗಿಲ್ಲ. ಅಲ್ಲದೇ, ಅಲೆಮಾರಿ ಜನಾಂಗದವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಇಂದಿಗೂ ಬಾಳೆಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ನಿವೇಶನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್‌ಗಳಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next