ಬೆಂಗಳೂರು: ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಕೋಟಾದಡಿ ಸಾಗರೋತ್ತರ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ರಾಜ್ಯಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯಿದೆ 2006ರ ಕಲಂ 5ರ ರದ್ದುಕೋರಿ ಸಾಗರೋತ್ತರ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿ ಹೆಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಕೆ.ಎಸ್ ಮುದ್ಗಲ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಇತರೆ ರಾಜ್ಯಗಳಲ್ಲಿ ಸಾಗರೋತ್ತರ ವಿದ್ಯಾರ್ಥಿಗಳು ಸರ್ಕಾರಿ ಸೀಟುಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯಿದೆ 2006ರ ಕಲಂ 5ರ ಅಡಿಯಲ್ಲಿ ಸಾಗರೋತ್ತರ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟುಗಳನ್ನು ಪಡೆಯಲು ಅರ್ಹರಿಲ್ಲ ಎಂಬ ನಿಯಮವಿದೆ. ಈ ನಿಟ್ಟಿನಲ್ಲಿ ಕಲಂ 5 ರದ್ದುಪಡಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ,’ ಕೋರಿದರು.
ಸರ್ಕಾರದ ಪರ ವಾದಿಸಿದ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ, “ಕಳೆದ ಏಪ್ರಿಲ್3ರಂದು ರಾಜ್ಯಸರ್ಕಾರ 2006 ಕಾಯಿದೆಗೆ ತಿದ್ದುಪಡಿ ತಂದಿರುವ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯಿದೆ 2017ರಲ್ಲಿ ಅನಿವಾಸಿ ಭಾರತೀಯರ ಪಟ್ಟಿಯಲ್ಲಿಯೇ ಸಾಗರೋತ್ತರ ನಿವಾಸಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ ಎನ್‌ಆರ್‌ಐ, ಸಾಗರೋತ್ತರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಹಂಚಿಕೆ ಸಂಬಂಧ ಸರ್ಕಾರ ಶೀಘ್ರದಲ್ಲಿಯೇ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜೊತೆ ಸಭೆ ನಡೆಸಲು ತೀರ್ಮಾನಿಸಿದೆ ಎಂದೂ ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಗೃಹ ಇಲಾಖೆ, ವಿದೇಶಾಂಗ ಸಚಿವಾಲಯ, ಕೇಂದ್ರ ವೈದ್ಯಕೀಯ ಶಿಕ್ಷಣ ಇಲಾಖೆ, ರಾಜ್ಯಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟೀಸ್ ಜಾರಿಗೊಳಿಸಿ ಜುಲೈ 3ಕ್ಕೆ ವಿಚಾರಣೆ ಮುಂದೂಡಿತು.