Advertisement
ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರತ್ತ ಕಾಂಗ್ರೆಸ್ ಪಕ್ಷ ದೃಷ್ಟಿ ಹಾಯಿಸಿದೆ. ಪಕ್ಷದ ನಾಯಕರ ಸೂಚನೆಯಂತೆ ಸೌದಿ ಅರೇಬಿಯಾದಲ್ಲಿ ಕಾಂಗ್ರೆಸ್ ಎನ್‌ಆರ್‌ಐ ವಿಂಗ್ ಪ್ರಾರಂಭಿಸಿದ್ದು, ಅದರ ಉದ್ಘಾಟನೆ ಮತ್ತು ಸಮಾವೇಶದಲ್ಲಿ ಭಾಗವಹಿಸಲು ಕರಾವಳಿಯ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಶುಕ್ರವಾರ ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ.
ಮಾಜಿ ಸಂಸದ, ಕ್ರಿಕೆಟ್‌ಪಟು ಮಹಮ್ಮದ್ ಅಜರುದ್ದೀನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗಳಲ್ಲಿ ಪ್ರಭಾವಿ ಸಚಿವರುಗಳಾದ ಯು.ಟಿ. ಖಾದರ್, ರಮಾನಾಥ ರೈ, ಶಾಸಕರಾದ ವಿನಯಕುಮಾರ್ ಸೊರಕೆ, ಬಿ.ಎ. ಮೊದಿನ್ ಬಾವಾ, ಪಕ್ಷದ ಮುಖಂಡರಾದ ಡಾ| ದೇವಿಪ್ರಸಾದ್ ಶೆಟ್ಟಿ, ಬಿ.ಎಂ. ಮುಮ್ತಾಜ್ ಅಲಿ, ಸುಹೈಲ್ ಕಂದಕ್, ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹ್ಯಾರಿಸ್ ಬೈಕಂಪಾಡಿ ಭಾಗವಹಿಸುತ್ತಿದ್ದಾರೆ. ಮತ್ತೂಮ್ಮೆ ಸಿದ್ದರಾಮಯ್ಯ ಸಮಾವೇಶ
“ಕರ್ನಾಟಕದಲ್ಲಿ ಮತ್ತೂಮ್ಮೆ ಸಿದ್ದರಾಮಯ್ಯ’ ಎಂಬ ಘೋಷಣೆಯೊಂದಿಗೆ ಸೌದಿ ಅರೇಬಿಯಾದ ಕಾಂಗ್ರೆಸ್ ಪಕ್ಷದ ಅನಿವಾಸಿ ಭಾರತೀಯ ಸಂಘಟನೆಯ ನಾಯಕರಾದ ಅಬ್ದುಲ್ ಶಕೀಲ್ ದೇರಳಕಟ್ಟೆ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಇಬ್ರಾಹಿಂ ಕನ್ನಂಗಾರ್ ಸಹಿತ ಕರಾವಳಿಯ ಪ್ರಸಿದ್ಧ ಉದ್ಯಮಿಗಳು ಮತ್ತು ಕಾಂಗ್ರೆಸ್ ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಮತಯಾಚನೆ ಸಭೆ ನಡೆದಿದೆ.
Related Articles
ಸೌದಿ ಅರೇಬಿಯಾದ ತಾಯಿಫ್ ಮತ್ತು ಜೆದ್ದಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಎನ್‌ಆರ್‌ಐ ವಿಭಾಗದ ಆತಿಥ್ಯದಲ್ಲಿ ಶುಕ್ರವಾರ ರಾತ್ರಿ ಚುನಾವಣಾ ಪೂರ್ವಭಾವಿ ಬೃಹತ್ ಸಮಾವೇಶ ನಡೆದಿದೆ. ಸಮಾವೇಶದಲ್ಲಿ 3,000ಕ್ಕೂ ಅಧಿಕ ಮಂದಿ ಕರಾವಳಿಗರು ಭಾಗವಹಿಸಿದ್ದಾರೆ. ಶನಿವಾರ ರಾತ್ರಿ ಮತ್ತೂಂದು ಸಮಾವೇಶ ನಡೆದಿದ್ದು 5,000ಕ್ಕೂ ಅಧಿಕ ಮಂದಿ ಕರಾವಳಿಗರು ಭಾಗವಹಿಸುತ್ತಿದ್ದಾರೆ. ಸೌದಿ ಅರೇಬಿಯಾ ಸುತ್ತಲಿನ ಪ್ರದೇಶಗಳಲ್ಲಿ 15 ಬ್ಲಾಕ್ ಮೀಟಿಂಗ್‌ಗಳು ಆಯೋಜಿಸಲ್ಪಟ್ಟಿವೆ.
Advertisement
ಹೆಚ್ಚಿನ ಮತದಾನ ಮಾಡಿಸುವತ್ತ ದೃಷ್ಟಿ ಸೌದಿ ಅರೇಬಿಯಾದಲ್ಲಿ ಕನಿಷ್ಟ 1 ಲಕ್ಷದಷ್ಟು ಕರಾವಳಿಗರು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವೊಲಿಸುವುದು ಈ ಸಭೆಗಳ ಮುಖ್ಯ ಉದ್ದೇಶವಾಗಿದೆ. ಪ್ರತೀ ಮತದಾನದ ಸಂದರ್ಭದಲ್ಲೂ ಶೇ.30ರಿಂದ 35ರಷ್ಟು ಎನ್ನಾರೈ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರವುಳಿಯುತ್ತಿದ್ದು, ಇದರಲ್ಲಿ ಬಹುಭಾಗ ಮತದಾರರು ಅರಬ್ ರಾಷ್ಟ್ರಗಳಲ್ಲಿ ಇರುವವರಾಗಿದ್ದಾರೆ. ಇಂತಹ ಮತದಾರರನ್ನು ಮತದಾನ ಮಾಡಲು ಮನವೊಲಿಸುವ ಪ್ರಯತ್ನ ನಡೆಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ಆ ಕಾರಣಕ್ಕಾಗಿಯೇ ಸೌದಿ ಅರೇಬಿಯಾಕ್ಕೆ ತೆರಳಿದೆ ಎಂದು ಹೇಳಲಾಗುತ್ತಿದೆ. ಕಾಪು, ಸುರತ್ಕಲ್, ಉಳ್ಳಾಲ, ಬಂಟ್ವಾಳ ಗುರಿ
ಕರಾವಳಿಯ ಒಟ್ಟು ಮತದಾರರ ಪೈಕಿ ಶೇ. 20ರಷ್ಟು ಮತದಾರರು ಕ್ಷೇತ್ರ ಬಿಟ್ಟು ಹೊರಗಿದ್ದಾರೆ. ಇವರ ಪೈಕಿ ಕಾಪು, ಸುರತ್ಕಲ್, ಉಳ್ಳಾಲ, ಬಂಟ್ವಾಳ ಕ್ಷೇತ್ರಗಳ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನೇ ಗುರಿಯಾಗಿಸಿಕೊಂಡು ನಾಲ್ಕು ಕ್ಷೇತ್ರಗಳ ಶಾಸಕರು ಈಗ ಅರಬ್ ರಾಷ್ಟ್ರಗಳಿಗೆ ತೆರಳಿದ್ದಾರೆ. ಕರಾವಳಿಯ ಪ್ರಮುಖ ವಿಧಾನಸಭಾ ಕ್ಷೇತ್ರಗಳನ್ನು ಹೇಗಾದರೂ ಸೆಳೆಯಬೇಕೆಂಬ ಚಿಂತನೆ ಬಿಜೆಪಿಯದ್ದಾಗಿದ್ದರೆ, ಅವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕೂಡ ಪ್ರತಿತಂತ್ರವನ್ನು ರೂಪಿಸಿರುವುದರಿಂದ ಕರಾವಳಿಯಲ್ಲಿ ಚುನಾವಣಾ ಜಿದ್ದಾಜಿದ್ದಿ ಮತ್ತಷ್ಟು ರಂಗೇರುವಂತಾಗಿದೆ. ಮತದಾನ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ವಿನಂತಿ:
ಡಾ| ದೇವಿಪ್ರಸಾದ್ ಶೆಟ್ಟಿ ಎನ್ನಾರೈ ಮತದಾರರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಚುನಾವಣಾ ಆಯೋಗ ವಿಶೇಷ ಅವಕಾಶ ನೀಡಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅನಿವಾಸಿ ಭಾರತೀಯರಿಗೆ ಎ. 14ರವರೆಗೆ ಅವಕಾಶ ನೀಡಿದ್ದು ಅದರಂತೆ ಅವರ ಮನವೊಲಿಸಲು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಾಧನೆಯನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೂಮ್ಮೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಮೂರು ದಿನಗಳ ಅವಧಿಯಲ್ಲಿ 15ಕ್ಕೂ ಅಧಿಕ ಸಭೆಗಳನ್ನು ಆಯೋಜಿಸಲಾಗಿದ್ದು, ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಬ್ಲಾಕ್ ಮೀಟಿಂಗ್‌ನಲ್ಲಿ ಭಾಗವಹಿಸಿರುವ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ಶಾಸಕರಾದ ವಿನಯಕುಮಾರ್ ಸೊರಕೆ, ಮೊದಿನ್ ಬಾವಾ, ಮಾಜಿ ಸಂಸದ / ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮೊದಲಾದವರು ಪಾಲ್ಗೊಂಡಿದ್ದರು. ರಾಕೇಶ್ ಕುಂಜೂರು