ಲಕ್ಷ್ಮೇಶ್ವರ: ತಾಲೂಕಿನ ಬಹುಪಾಲು ರೈತರ ಜಮೀನುಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ ಬದು ನಿರ್ಮಾಣ ಮಾಡಲಾಗುತ್ತಿದ್ದು, ಇದು ರೈತರಿಗೆ ವರದಾನವಾಗಿದೆ.
ಗ್ರಾಮೀಣರು ವೈಯಕ್ತಿಕ ಕಾಮಗಾರಿಗಳ ಮೂಲಕ ತಮ್ಮ ಜಮೀನಿನಲ್ಲಿ ವಿವಿಧ ಅರಣ್ಯ, ತೋಟಗಾರಿಕೆ, ರೇಷ್ಮೆ ಬೆಳೆ ಬೆಳೆಯುವ ಜತೆಗೆ ಸಮುದಾಯ ಕಾಮಗಾರಿಯಲ್ಲಿ ಪಾಲ್ಗೊಂಡು ದಿನಕ್ಕೆ 309 ರೂ. ಕೂಲಿ ಪಡೆಯಬಹುದಾಗಿದೆ. ದುಡಿಯೋಣ ಬಾ ಅಭಿಯಾನ ಹಾಗೂ ಜಲಶಕ್ತಿ ಅಭಿಯಾನದಡಿಯಲ್ಲಿ ಮಳೆ ನೀರನ್ನು ಹಿಡಿದಿಡಲು ಲಕ್ಷ್ಮೇಶ್ವರ ತಾಲೂಕಿನ ದೊಡೂxರು, ರಾಮಗಿರಿ, ಸೂರಣಗಿ, ಕುಂದ್ರಳ್ಳಿ, ಗೊಜನೂರ ಸೇರಿ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಸೂರಣಗಿ ಗ್ರಾಮದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ.
ಹಾಜರಾತಿ ಗೊಂದಲಕ್ಕೆ ತೆರೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸಕ್ಕೆ ಬರುವ ಕೂಲಿಕಾರರ ಹಾಜರಾತಿ ಪಡೆಯಲು ಕೇಂದ್ರ ಸರ್ಕಾರ ಹೊಸದಾಗಿ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸರ್ವಿಸ್) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 2-5 ಗಂಟೆಯೊಳಗೆ ಎರಡು ಬಾರಿ ಹಾಜರಾತಿ ಪಡೆಯಲು ಸೂಚನೆ ನೀಡಲಾಗಿತ್ತು. ಬೇಸಿಗೆ ಅವಧಿಯಾದ ಕಾರಣ ಕೂಲಿಕಾರರ ಅದರಲ್ಲೂ ವಿಶೇಷವಾಗಿ ಮಹಿಳಾ ಕೂಲಿಕಾರರ ಇದಕ್ಕೆ ಅಸಹಮತ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದ ಸರ್ಕಾರ ಹಾಜರಾತಿ ಸಮಯವನ್ನು ಪರಿಷ್ಕರಣೆ ಮಾಡಿದೆ. ಪ್ರತಿದಿನ ಬೆಳಗ್ಗೆ 8-11 ಗಂಟೆಯೊಳಗೆ ಮೊದಲ ಹಾಜರಿ ಮತ್ತು 11 ಗಂಟೆಗೆ ನಂತರ ಎರಡನೇ ಹಾಜರಿ ಪಡೆಯಲು ಅವಕಾಶ ನೀಡಿದೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯಕ ಬಂಧುಗಳಿಗೆ ತಂತ್ರಾಂಶ ಬಳಕೆ ಕುರಿತು ಕಾರ್ಯಾಗಾರದ ಮೂಲಕ ತಿಳಿವಳಿಕೆ ನೀಡಲಾಗಿದೆ.
ಸಮಾನ ಕೂಲಿ: ಎನ್‌ಆರ್‌ಇಜಿಎ ಯೋಜನೆಯಡಿ ಮಹಿಳೆ, ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ ಕೂಲಿ ಹಣ ನೀಡಲಾಗುತ್ತದೆ. 289 ರೂ. ಇದ್ದ ಕೂಲಿ ದರವನ್ನು ಏಪ್ರಿಲ್ 1ರಿಂದ 309 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಜನರು ತಮ್ಮ ಜಮೀನುಗಳಲ್ಲಿ ತಮ್ಮದೇ ಕುಟುಂಬ ಸದಸ್ಯರು ಕೂಡಿಕೊಂಡು ಕೆಲಸ ಮಾಡಿ ಹಣ ಪಡೆಯಬಹುದಾಗಿದೆ.
ವಲಸೆಗೆ ತಡೆ: ಬೇಸಿಗೆ ಕಾಲ ಆರಂಭವಾಗುತ್ತಲೇ ಲಕ್ಷ್ಮೇಶ್ವರ ತಾಲೂಕಿನ ಬಹುತೇಕ ತಾಂಡಾ ನಿವಾಸಿಗಳು ಕೆಲಸಕ್ಕಾಗಿ ಗೋವಾ, ಮಹಾರಾಷ್ಟ್ರ ಹಾಗೂ ಮಲೆನಾಡಿನ ಕಡೆಗೆ ತೆರಳುವುದು ಹೆಚ್ಚು. ರೈತರ ಜಮೀನಿನಲ್ಲಿಯ ಕೆಲಸ ಕಾರ್ಯಗಳು ಪೂರ್ಣವಾಗಿವೆ. ಹೀಗಾಗಿ ತಾಲೂಕಿನ ಗ್ರಾಮೀಣ ಜನರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ನೀಡಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಉದ್ಯೋಗ ಅರಿಸಿ ವಲಸೆ ಹೋಗುವುದನ್ನು ನಿಲ್ಲಿಸಿ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಪಡೆಯುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದ್ದಾರೆ.
ಮಣ್ಣು ನೀರು ಸಂರಕ್ಷಣೆ: ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ. ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಣ್ಣು ಕೊಚ್ಚಿ ಹೋಗದೆ ಗುಂಡಿಗಳಲ್ಲಿಯೇ ಸಂಗ್ರಹವಾಗಲಿದೆ. ಮಳೆಗಾಲದಲ್ಲಿ ಹೆಚ್ಚು ಮಳೆಯಾದಾಗ ನೀರು ಹರಿದು ಕೊಚ್ಚಿ ಹೋಗದಂತೆ ಬದುವಿನಲ್ಲಿ ಮಣ್ಣಿನ ಏರಿ ಹಾಕುವುದರಿಂದ ಮಣ್ಣು ಮತ್ತು ನೀರನ್ನು ತಡೆ ಹಿಡಿದ ಭೂ ಫಲವತ್ತತೆ ಹಾಗೂ ಅಂತರ್ಜಲ ಹೆಚ್ಚಿಸಿಕೊಂಡು ರೈತರು ಉತ್ತಮ ಇಳುವರಿ ಪಡೆಯಬಹುದಾಗಿದೆ.
ನೀರು ಸಂಗ್ರಹ ಸಾಮರ್ಥ್ಯ: ಬದು ನಿರ್ಮಾಣ ಕಾಮಗಾರಿಯಲ್ಲಿ ಮೂರು ಮಾದರಿಗಳಿವೆ. 10 ಅಡಿ ಉದ್ದ, 10 ಅಡಿ ಅಗಲ, 1 ಅಡಿ ಆಳ, 10 ಅಡಿ ಉದ್ದ, 5 ಅಡಿ ಅಗಲ, 2 ಅಡಿ ಆಳ ಮತ್ತು 20 ಅಡಿ ಉದ್ದ, 5 ಅಡಿ ಅಗಲ 1 ಅಡಿ ಆಳದ ಕಂದಕಗಳಿಗೆ ಅವಕಾಶವಿದೆ. ಇದರಿಂದ ಪ್ರತಿ ಕಂದಕವೂ 2700 ಲೀಟರ್ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿರುತ್ತದೆ. ಪ್ರತಿ ಎಕರೆ ಪ್ರದೇಶದಲ್ಲಿ 16 ಕಂದಕಗಳು ನಿರ್ಮಾಣವಾಗಲಿವೆ.
ಬದು ನಿರ್ಮಾಣ ರೈತರಿಗೆ ಎರಡು ರೀತಿಯ ಲಾಭ ನೀಡುವ ಯೋಜನೆಯಾಗಿದೆ. ಇದರಲ್ಲಿ ದಿನಕ್ಕೆ 309ರೂ. ಕೂಲಿ ಹಾಗೂ ಜಮೀನಿನ ಫಲವತ್ತತೆ ಹೆಚ್ಚಲಿದೆ. ಮಣ್ಣು ಮತ್ತು ನೀರು ಸಂರಕ್ಷಿಸಲು ಬದು ನಿರ್ಮಾಣ ಉತ್ತಮ ಯೋಜನೆಯಾಗಿದೆ. ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಿಸಿಕೊಳ್ಳಲು ಮುಂದಾಗಬೇಕು.
-ಕೃಷ್ಣಪ್ಪ ಧರ್ಮರ,ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಪಂ ಲಕ್ಷ್ಮೇಶ್ವರ.