ಬಸವನಬಾಗೇವಾಡಿ: ಉಕ್ಕಲಿ ಗ್ರಾಪಂ ತನ್ನ 80 ಎಕರೆ ಕೆರೆಯನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅದರ ಸಮಗ್ರ ಅಭಿವೃದ್ಧಿಗೆ ಮುಂದಾಗಿ ಜಿಲ್ಲೆಯ ಇತರ ಗ್ರಾಪಂಗಳಿಗೆ ಮಾದರಿಯಾಗಿದೆ. ತನ್ನ ಪಾಲಿನ ಸರಕಾರದ 80 ಎಕರೆ ಕೆರೆ ಆಸ್ತಿಯನ್ನು ಯಾರ ಕೈಗೆ ಸೇರದ ಹಾಗೆ ಸಂರಕ್ಷಣೆ ಮಾಡಿದ್ದಾರೆ. ಉಕ್ಕಲಿ ಗ್ರಾಪಂ ಸರ್ವ ಸದಸ್ಯರ ಆಡಳಿತ ಮಂಡಳಿ ಹಾಗೂ ಇಲ್ಲಿ ಕಾರ್ಯನಿರ್ವಹಿಸುವ ಅಧಿ ಕಾರಿಗಳ ಕಾರ್ಯಚಾತುರ್ಯತೆಯೇ ಇದಕ್ಕೆ ಮುಖ್ಯ ಕಾರಣ.
ಉಕ್ಕಲಿ ಗ್ರಾಪಂ ಒಟ್ಟು 24 ಸದಸ್ಯರನ್ನು ಹೊಂದಿದ್ದು ಎಲ್ಲ ಸದಸ್ಯರು ಊರಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಜಾತಿ, ಧರ್ಮ, ಭೇದ-ಭಾವ ಬದಿಗಿಟ್ಟು. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಾರೆ. ಉಕ್ಕಲಿ ಗ್ರಾಪಂನಲ್ಲಿ ಹಾಕಿಗೊಂಡ ಒಂದೊಂದು ಜನಪರ ಯೋಜನೆಗಳನ್ನು ಜನರಿಗೆ ತಲಿಪಿಸುವ ಕಾರ್ಯ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಮದಲ್ಲಿ ಒಟ್ಟು 3 ಕೆರೆಗಳಿದ್ದು ಇದರಲ್ಲಿ ನಾಗರದಿನ್ನಿ ಕೆರೆ 80 ಎಕರೆ ಹಾಗೂ 34 ಎಕರೆಯ ಪರಮಾನಂದ ಕೆರೆ, ಇನ್ನೂ ಮನಗೂಳಿ ಹಳೆ ರಸ್ತೆಯ ಪರಮಾನಂದ ಕೆರೆ 24 ಎಕರೆ ಹೊಂದಿದ್ದು ಈ ಕೆರೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ನಾಗರದಿನ್ನಿ ಕೆರೆ ಹೂಳು ತೆಗೆಯಲು 2019/20 -2021/22ರಲ್ಲಿ ಒಟ್ಟು 4 ಲಕ್ಷ ಹಣದಲ್ಲಿ ನಿತ್ಯ 15ರಿಂದ 20 ಜನರಿಂದ ಹೊಳು ತೆಗೆಯುವ ಕಾರ್ಯ ನಡೆದಿದೆ.
ಮನಗೂಳಿ ಹಳೆ ರಸ್ತೆಯ ಪರಮಾನಂದ ಕೆರೆಯಲ್ಲಿ 2019-20 ರಲ್ಲಿ 2.50 ಲಕ್ಷ 2021-22ರಲ್ಲಿ 2 ಲಕ್ಷ ರೂ. ಖರ್ಚು ಮಾಡುವ ಮೂಲಕ ಕೆರೆ ಹೊಳು ತೆಗೆದಿರುವುದರಿಂದ ಅಲ್ಲಿನ ದನ-ಕರುಗಳಿಗೆ ಕುಡಿಯಲು ನೀರಿನ ಅನುಕೂಲವಾಗಿದೆ. ಈ ಕೆರೆ 24 ಎಕರೆ ಇದ್ದು ಸರಕಾರಿ ಬಿಳು ಭೂಮಿಯಿದ್ದು ಇದರಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅನೇಕ ಗಿಡಗಂಟೆಗಳನ್ನು ಹಚ್ಚಿ ಆ ಭೂಮಿಯಲ್ಲಿ ಕಾಡು ನಿರ್ಮಿಸಲಾಗಿದೆ. 34 ಎಕರೆಯ ಪರಮಾನಂದ ಕೆರೆಗೆ 2019-20ರಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯಲಾಗಿದೆ. ಇನ್ನೂ 2021-22ಕ್ಕೆ 2 ಲಕ್ಷ ರೂ. ಮೀಸಲಿಡಲಾಗಿದೆ.
ಇದರ ಜೊತೆಗೆ ಗ್ರಾಮದ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ 2.50 ಲಕ್ಷ ರೂ., ಬಿಸಿಯೂಟದ ಕೋಣೆಗೆ 5.50 ಲಕ್ಷ ರೂ., ಕೃಷಿ ಹೊಂಡ, ಬದು ನಿರ್ಮಾಣ, ಇಂಗು ಬಚ್ಚಲ ನಿರ್ಮಾಣಕ್ಕೂ ಕೂಡಾ ರೈತರಿಗೆ ಸಾರ್ವಜನಿಕರಿಗೆ ನೀಡಲಾಗಿದೆ. ಕೃಷಿ ಹೊಂಡ ನಿರ್ಮಾಣಕ್ಕೆ ತಲಾ ಒಬ್ಬರ ರೈತರಿಗೆ 25 ಸಾವಿರ ರೂ., ಬದು ನಿರ್ಮಾಣಕ್ಕೆ ತಲಾ ಒಬ್ಬರ ರೈತನಿಗೆ 20 ಸಾವಿರ ರೂ., ಇಂಗು ಬಚ್ಚಲ ನಿರ್ಮಾಣ 13 ಸಾವಿರ ರೂ., 50 ಕೃಷಿ ಹೊಂಡ, 50 ಬದು ನಿರ್ಮಾಣ, 10 ಇಂಗು ಬಚ್ಚಲ ನಿರ್ಮಾಣ ಮಾಡಲಾಗಿದೆ.