Advertisement

ನರೇಗಾ ಕಾಯಕ ಜೀವನ ನಿರ್ವಹಣೆಗೆ ಸಹಕಾರಿ

02:23 PM May 26, 2022 | Team Udayavani |

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಬೇಸಿಗೆಯಲ್ಲಿ ಕೃಷಿ ಕೆಲಸಗಳು ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ, ರೈತರು ನರೇಗಾ ಕಾಮಗಾರಿಗಳಲ್ಲಿ ಕೂಲಿ ಕೆಲಸ ಪಡೆದುಕೊಳ್ಳಬೇಕು. ಇದರಿಂದ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಸುಶೀಲಾ ಹೇಳಿದರು.

Advertisement

ತಾಲೂಕಿನ ಅಡವಿಸೋಮಾಪೂರ, ಲಕ್ಕುಂಡಿ ಹಾಗೂ ತಿಮ್ಮಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿಯಲ್ಲಿರುವ ಹಳ್ಳ ಹೊಳೆತ್ತುವ ಹಾಗೂ ಸಾಮೂಹಿಕ ಕಂದಕ, ಬದು ನಿರ್ಮಾಣ ಕಾಮಗಾರಿಗಳಲ್ಲಿ ನೂರಾರು ಅಕುಶಲ ಕೂಲಿಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಅನುಷ್ಠಾನ ಗೊಳಿಸುವ ಕಾಮಗಾರಿ ಹಾಗೂ ಕೂಲಿ ಕೆಲಸದಲ್ಲಿ ಪಾರದರ್ಶಕತೆ ತರಲು ಸರ್ಕಾರ ಕೆಲಸಗಾರರ ದಿನದ ಹಾಜರಾತಿ ಆನ್‌ಲೈನ್‌ ಮೂಲಕ ಕೆಲಸದ ಸ್ಥಳದಲ್ಲೇ ದಿನಕ್ಕೆ ಎರಡು ಬಾರಿ ಹಾಕಲು ಎನ್‌ ಎಂಎಂಎಸ್‌ ಆ್ಯಪ್‌ ಜಾರಿಗೆ ತಂದಿದೆ. ಹೀಗಾಗಿ, ಕೆಲಸ ಮಾಡುವವರು ಎರಡು ಬಾರಿ ಹಾಜರಾತಿ ಹಾಕುವ ವರೆಗೆ ಕಾಮಗಾರಿ ಸ್ಥಳದಲ್ಲೇ ಇರಬೇಕು. ಆಗ ಮಾತ್ರ ಕೆಲಸಗಾರರು ಕೆಲಸ ಮಾಡಿದ ಕೂಲಿ ಹಣ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಹಳ್ಳ, ಕೊಳ್ಳಗಳ ಮೂಲಕ ಹರಿದು ನದಿ, ಸಮುದ್ರ ಸೇರಿ ವ್ಯರ್ಥವಾಗಿ ಹೋಗುವ ನೀರನ್ನು ತಡೆಯಲು ಕಂದಕ, ಬದು ನಿರ್ಮಾಣದಿಂದ ಕಂದಕಗಳಲ್ಲಿ ಇಂಗಿಸಿ ಸೆರೆ ಹಿಡಿಯಬಹುದು. ಇದರಿಂದ ಭೂಮಿಯ ಅಂತರ್ಜಲ ಮಟ್ಟ ಹೆಚ್ಚುತ್ತದೆಯಲ್ಲದೇ, ನಮ್ಮ ಮುಂದಿನ ಮನುಕೂಲಕ್ಕೆ ಜಲ ಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಿಇಒ, ಯೋಜನೆ ತಮ್ಮ ಕುಟುಂಬ ನಿರ್ವಹಣೆಗೆ ನೆರವಾಗಿರುವ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ಹೆಚ್ಚು ಹೆಚ್ಚು ಕಾರ್ಮಿಕರು ಖಾತ್ರಿ ಯೋಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸಬಲತೆಗೆ ಮುಂದಾಗಬೇಕೆಂದರು.

Advertisement

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ ಬಡಿಗೇರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಐಇಸಿ ಸಂಯೋಜಕರು, ನರೇಗಾ ತಾಂತ್ರಿಕ ಸಂಯೋಜಕರು, ಗ್ರಾಪಂ ತಾಂತ್ರಿಕ ಸಹಾಯಕರು, ಬಿಎಫ್‌ಟಿ ಹಾಗೂ ಗ್ರಾಮ ಕಾಯಕ ಮಿತ್ರರು ಇದ್ದರು.

ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿ ಹಾಗೂ ಕೂಲಿ ಕೆಲಸದಲ್ಲಿ ಪಾರದರ್ಶಕತೆ ತರಲು ಸರ್ಕಾರ ಕೆಲಸಗಾರರ ದಿನದ ಹಾಜರಾತಿಯನ್ನು ಆನ್‌ಲೈನ್‌ ಮೂಲಕ ದಿನಕ್ಕೆ ಎರಡು ಬಾರಿ ಕೆಲಸದ ಸ್ಥಳದಲ್ಲೇ ಹಾಕಲು ಎನ್‌ಎಂಎಂಎಸ್‌ ಆ್ಯಪ್‌ ಜಾರಿಗೆ ತಂದಿದೆ. ಡಾ|ಸುಶೀಲಾ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next