Advertisement

ಮತದಾನ ಹೆಚ್ಚಳಕ್ಕೆ ನರೇಗಾ ಮೊರೆಹೋದ “ಸ್ವೀಪ್‌’: ಕೂಲಿ ಕಾರ್ಮಿಕರಿಗೆ ತಿಳಿವಳಿಕೆ

12:27 AM May 10, 2023 | Team Udayavani |

ರಾಯಚೂರು: ಪ್ರತೀ ವರ್ಷದಂತೆ ಈ ಬಾರಿಯೂ ಜಿಲ್ಲಾ ಸ್ವೀಪ್‌ ಸಮಿತಿ ಮತದಾನ ಹೆಚ್ಚಳಕ್ಕೆ ನಾನಾ ರೀತಿಯ ಕಾರ್ಯಕ್ರಮ ನಡೆಸುವ ಮೂಲಕ ಜನಜಾಗೃತಿ ಮೂಡಿಸಿತು. ಈ ಬಾರಿ ಮುಖ್ಯವಾಗಿ ನರೇಗಾ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮತದಾನ ಹೆಚ್ಚಳಕ್ಕೆ ಒತ್ತು ನೀಡಿದ್ದು ವಿಶೇಷ.

Advertisement

ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 66.08 ಮತದಾನವಾಗಿತ್ತು. ಈ ಪ್ರಮಾಣ ಈ ಬಾರಿ ಇನ್ನೂ ಹೆಚ್ಚು ಮಾಡುವ ನಿಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತ ಅನೇಕ ಕಾರ್ಯಕ್ರಮ ನಡೆಸಿತು. ಜಿಲ್ಲೆಯಲ್ಲಿ ಒಟ್ಟು 16,34,989 ಮತದಾರರಿದ್ದು, ಅದರಲ್ಲಿ ಒಟ್ಟು 8,05,594 ಪುರುಷ, 8,29,133 ಮಹಿಳೆ ಹಾಗೂ 262 ಇತರ ಮತದಾರರಿದ್ದಾರೆ.

ಸಾಮಾನ್ಯವಾಗಿ ಚುನಾವಣೆಗಳು ಎಪ್ರಿಲ್‌, ಮೇನಲ್ಲಿ ನಡೆಯುವುದರಿಂದ ಕೃಷಿ ಚಟುವಟಿಕೆಗಳೆಲ್ಲ ಮುಗಿದು ಜನ ಗುಳೆ ಹೋಗುತ್ತಾರೆ. ಈಚೆಗೆ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸುತ್ತಿದ್ದು, ಜನ ಗುಳೆ ಹೋಗುವುದಕ್ಕೆ ಅಲ್ಪ ಮಟ್ಟಿಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ನರೇಗಾ ಕೂಲಿ ಕೆಲಸಗಳು ನಡೆದ ಪ್ರದೇಶಗಳಿಗೆ ಹೋಗುತ್ತಿದ್ದ ಸ್ವೀಪ್‌ ಸಮಿತಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದೆ.

1.12 ಲಕ್ಷ ಕೂಲಿ ಕಾರ್ಮಿಕರುನರೇಗಾದಡಿ ಜಿಲ್ಲೆಯಲ್ಲಿ 1.12 ಲಕ್ಷಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ಮತ ಮೌಲ್ಯದಬಗ್ಗೆ ತಿಳಿ ಹೇಳಲಾಗಿದೆ. ಕೂಲಿ ಮಾಡುವ ಸ್ಥಳದಲ್ಲೇ ದೊಡ್ಡ ದೊಡ್ಡ ಚಿತ್ರ ಬಿಡಿಸಿ ಕೂಲಿ ಕಾರ್ಮಿಕರಿಂದ ಮಾನವ ಸರಪಳಿ ರಚಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಇಷ್ಟು ಮಾತ್ರವಲ್ಲ ನಗರಸಭೆಯಿಂದ ಡಾ| ಅಂಬೇಡ್ಕರ್‌ ವೃತ್ತದವರೆಗೂ ಮೇಣದ ಬತ್ತಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರೆ, ಡಿಸಿ ಕಚೇರಿಯಿಂದ ಸೈಕಲ್‌ ರ್ಯಾಲಿ, ಜಾಗೃತಿ ಜಾಥಾ ನಡೆಸಲಾಯಿತು.

ಹೆಚ್ಚಿನ ಸೌಲಭ್ಯ
ಮತಗಟ್ಟೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಪ್ರತೀ ಮತಗಟ್ಟೆಯಲ್ಲಿ ಅಂಗವಿಕಲರಿಗೆ ರ್‍ಯಾಂಪ್‌, ವ್ಹೀಲ್‌ಚೇರ್‌, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಪ್ರತೀ ಕ್ಷೇತ್ರದಲ್ಲಿ 5 ಸಖೀ ಮತಗಟ್ಟೆಗಳು, ತಲಾ ಒಂದು ವಿಶೇಷಚೇತನರು, ಯುವಕರಿಗೆ ಹಾಗೂ ಥೀಮ್‌ ಬೇಸ್‌ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಮತದಾರರನ್ನು ಆಕರ್ಷಿಸಲಾಗುತ್ತಿದೆ.

Advertisement

ವರ್ಲಿ ಅಲಂಕೃತ ಮತಗಟ್ಟೆಗಳು
ಅತೀ ದೊಡ್ಡ ಹಬ್ಬವಾದ ವಿಧಾನಸಭೆ ಚುನಾವಣೆಗೆ ಈ ಬಾರಿ ವಿಶೇಷವಾಗಿ ಮತಗಟ್ಟೆಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಮತದಾರರನ್ನು ಆಕರ್ಷಿಸಲು ವರ್ಲಿ ಕಲಾಕೃತಿಗಳನ್ನು ಬಿಡಿಸುವ ಮೂಲಕ ಮತ್ತಷ್ಟು ಆಕರ್ಷಿಸುವಂತೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,840 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ವರ್ಲಿ ಆರ್ಟ್‌ ಬಿಡಿಸುವಂತೆ ಚಿತ್ರಕಲಾ ಶಿಕ್ಷಕರಿಗೆ ತಿಳಿಸಲಾಗಿತ್ತು. ಅದರಂತೆ ಎಲ್ಲ ಮತಗಟ್ಟೆ ಸುಂದರವಾಗಿ ಚಿತ್ರಿಸುವ ಮೂಲಕ ಅತ್ಯಾಕರ್ಷವಾಗಿ ರೂಪಿಸಲಾಗಿದೆ. ವಿಶೇಷಚೇತರಿಗಾಗಿಯೇ ಪ್ರತ್ಯೇಕ ಮತಗಟ್ಟೆ ನಿರ್ಮಿಸಿ ಚಿತ್ರ ಬರೆಯಲಾಗಿದೆ. ಅದರಲ್ಲಿ ಚುನಾವಣೆಗೆ ಸಂಬಂಸಿದ ಘೋಷವಾಕ್ಯಗಳನ್ನು ಬರೆಸಲಾಗಿದೆ.

ಕರೆ ನೀಡದ ರಾಜಮೌಳಿ!
ಪ್ಯಾನ್‌ ಇಂಡಿಯಾ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರನ್ನು ಜಿಲ್ಲೆಯ ಚುನಾವಣೆ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ತಿಳಿಸಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ ಆಯೋಗಕ್ಕೆ ದೂರು ನೀಡಿತ್ತು. ರಾಜಮೌಳಿ ಜಾಗೃತಿ ಮೂಡಿಸಿದರೆ ಒಂದು ಪಕ್ಷಕ್ಕೆ ಮಾತ್ರ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಅವರ ಪ್ರಚಾರ ಕೈ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next