Advertisement

ನರೇಗಾ:ಕೇಂದ್ರದಿಂದ 1,861 ಕೋ.ರೂ. ಬಿಡುಗಡೆ

11:07 PM Apr 24, 2020 | Sriram |

ಬೆಂಗಳೂರು: ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಕಾರ್ಯಕ್ರಮದಡಿ ಉದ್ಯೋಗ ಖಾತರಿ ಯೋಜನೆಯ ದಿನಗೂಲಿಯನ್ನು 275 ರೂ.ಗಳಿಗೆ ಏರಿಸಲಾಗಿದ್ದು, ಕೋವಿಡ್-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಎಲ್ಲರಿಗೂ ಉದ್ಯೋಗ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಪಿಎಲ್‌ ಅಥವಾ ಬಿಪಿಎಲ್‌ ಕುಟುಂಬ ಎಂಬ ಷರತ್ತು ಇಲ್ಲ. ಕೆಲಸ ಬಯಸಿದ ಎಲ್ಲರಿಗೂ ಜಾಬ್‌ ಕಾರ್ಡ್‌ ನೀಡಲಾಗುವುದು. ಒಂದೊಮ್ಮೆ ಯಾರ ಬಳಿಯಾದರೂ ಜಾಬ್‌ ಕಾರ್ಡ್‌ ಇಲ್ಲ ಎಂದಾದರೆ ಪಂಚಾಯತ್‌ ಅಧಿಕಾರಿ ಬಳಿ ಮನವಿ ಸಲ್ಲಿಸಿದ ತತ್‌ಕ್ಷಣ ನೀಡಲಾಗುವುದು. ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಕೆಲಸ ಮಾಡಿದ ಅನಂತರ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಕೂಲಿ ಪಾವತಿಸಲು ಸೂಚಿಸಲಾಗಿದೆ ಎಂದರು.

ಕೇಂದ್ರ ಸರಕಾರವು ಈ ಸಾಲಿನ ಮೊದಲ ಕಂತಾಗಿ 1,039 ಕೋ. ರೂ. ಕೂಲಿ ಬಾಬ್ತು, 821 ಕೋ. ರೂ. ಸಮಗ್ರ ಬಾಬ್ತು ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಬಿಡುಗಡೆ ಮಾಡಿದ್ದ ಹಣ ಮರು ಹೊಂದಾಣಿಕೆ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ ಬಾಕಿ ಇದ್ದ 346 ಕೋ. ರೂ. ಕೂಲಿ ಮಾಡಿದವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಎಲ್ಲ ಕಳೆದು 1,000 ಕೋ. ರೂ. ಉಳಿಯಲಿದ್ದು ತತ್‌ಕ್ಷಣದಿಂದಲೇ ಕೇಂದ್ರದ ಮಾರ್ಗಸೂಚಿಯಂತೆ ಯೋಜನೆ ಜಾರಿಗೊಳಿಸಲಾಗುವುದು. ಕೊರೊನಾ ತಡೆಗಾಗಿ ಸರಕಾರ ರೂಪಿಸಿರುವ ಪಂಚಸೂತ್ರ ಪಾಲನೆ ಮಾಡಲು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಿಎಂಜಿಎಸ್‌ವೈ
ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಮೂಲಕ ಕೇಂದ್ರವು ರಾಜ್ಯಕ್ಕೆ 5612 ಕಿ.ಮೀ.ರಸ್ತೆ ಅಭಿವೃದ್ಧಿಗೆ ಹಂಚಿಕೆ ಮಾಡಿದೆ. ಮೊದಲ ಹಂತದಲ್ಲಿ 3226 ಕಿ.ಮೀ. ರಸ್ತೆಗೆ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಲ್ಲಿ ಕೇಂದ್ರದ ಪಾಲು 1,274 ಕೋ. ರೂ. ಮತ್ತು ರಾಜ್ಯದ ಪಾಲು 1,455 ಕೋ. ರೂ. ಸೇರಿ 2,729 ಕೋ.ರೂ.ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

“ಮನೆ ಮನೆಗೆ ಗಂಗೆ’
ಕೇಂದ್ರ ಜಲಮಿಷನ್‌ ಯೋಜನೆಯಡಿ “ಮನೆ ಮನೆಗೆ ಗಂಗೆ’ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ 80.72 ಲಕ್ಷ ಮನೆಗಳಿದ್ದು, 15.88 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕವಿದೆ. 64.89 ಲಕ್ಷ ಮನೆಗಳಿಗೆ 2024ರೊಳಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು. 2020-21ರಲ್ಲಿ 10 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next