Advertisement
ಏನಿದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ?ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್‌ಪಿಎಸ್ ಜಾರಿಗೆ ಬಂದಿದ್ದು ನಿರ್ದಿಷ್ಟ ಉದ್ದೇಶದಿಂದ. 2004, ಜ.1ರ ನಂತರ ಸರ್ಕಾರಿ ಕೆಲಸಕ್ಕೆ ಸೇರಿಕೊಂಡ ಎಲ್ಲ ವ್ಯಕ್ತಿಗಳಿಗೆ, ಹಳೆಯ ಮಾದರಿಯ ಪಿಂಚಣಿಯನ್ನು ನಿಲ್ಲಿಸುತ್ತೇವೆಂದು ಕೇಂದ್ರ ಘೋಷಿಸಿದ ನಂತರ ಎನ್‌ಪಿಎಸ್ ಆರಂಭಿಸಲಾಯಿತು. ಜನರು ಸ್ವಯಂಪ್ರೇರಣೆಯಿಂದ ಪಿಂಚಣಿ ಮೊತ್ತ ಕಟ್ಟಿಕೊಳ್ಳಲು ಈ ವ್ಯವಸ್ಥೆ ಮಾಡಿಕೊಡಲಾಗಿದೆ. ಇದು ಸ್ವಲ್ಪ ಮಟ್ಟಿಗೆ ಇಪಿಎಫ್ ಅನ್ನು ಹೋಲುತ್ತದೆ. ಆರಂಭದಲ್ಲಿ ಎನ್‌ಪಿಎಸ್ ಕೇವಲ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರವಿತ್ತು. 2009ರ ನಂತರ ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್‌ಡಿಎ) ನಿರ್ವಹಿಸುತ್ತದೆ. 2018, ಡಿ.10ರಂದು ಕೇಂದ್ರ ಸರ್ಕಾರ ಇದನ್ನು ಸಂಪೂರ್ಣ ತೆರಿಗೆರಹಿತ ಎಂದು ಘೋಷಿಸಿತು. ಸದ್ಯ ಇದನ್ನು ಅತ್ಯುತ್ತಮ ಹೂಡಿಕೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಇನ್ನು ಎನ್‌ಪಿಎಸ್ ಚಂದಾದಾರರು, ನೇರವಾಗಿ ತಮ್ಮ ಬ್ಯಾಂಕ್ ಖ್ಯಾತೆಯ ನೆಟ್‌ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ, ಎನ್‌ಪಿಎಸ್‌ಗೆ ಹಣ ಸಲ್ಲಿಸಬಹುದು. ಅದನ್ನೇ ಡಿ-ರೆಮಿಟ್ ಅಥವಾ ನೇರ ಸಲ್ಲಿಕೆ (ಡೈರೆಕ್ಟ್ ರೆಮಿಟ್ಟೆನ್ಸ್) ಎನ್ನಲಾಗಿದೆ. ಇದಕ್ಕೆ ಮಾಡಬೇಕಾಗಿದ್ದು ಇಷ್ಟೇ. ನೀವು ಎನ್‌ಪಿಎಸ್ ಚಂದಾದಾರರಾಗಿದ್ದರೆ, ನೀವು ಹೊಂದಿರುವ ಪ್ರಾಣ್ (ಪರ್ಮನೆಂಟ್ ರಿಟೈರ್‌ವೆುಂಟ್ ಅಕೌಂಟ್ ನಂಬರ್) ಸಂಖ್ಯೆಯ ಖಾತೆಗೆ ಲಾಗಿನ್ ಆಗಬೇಕು. ಅನಂತರ ಒಂದು ಸಮಾನಾಂತರ ಸಂಖ್ಯೆಯನ್ನು ಸೃಷ್ಟಿಸಬೇಕು (ವರ್ಚ್ಯುವಲ್ ಐಡಿ). ಅದನ್ನು ನಿಮ್ಮ ನೆಟ್‌ಬ್ಯಾಂಕಿಂಗ್ ವ್ಯವಸ್ಥೆಯ ಬೆನಿಫಿಶರಿಯಲ್ಲಿ ಐಎಫ್ಎಸ್‌ಸಿ ಸಂಖ್ಯೆಯ ಜೊತೆಯಲ್ಲಿ ನಮೂದಿಸಬೇಕು. ನಂತರ ನೇರವಾಗಿ ಎನ್‌ಪಿಎಸ್ ಖಾತೆಗೆ ಹಣ ಹಾಕಲು ಆರಂಭಿಸಬಹುದು. ಇನ್ನೂ ಒಂದು ಅವಕಾಶವೆಂದರೆ, ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಕಡಿತಗೊಳ್ಳುವಂತೆಯೂ ಮಾಡಿಕೊಳ್ಳಬಹುದು. ಇದಕ್ಕೂ ಮುನ್ನ ಪಿಎಫ್ಆರ್‌ಡಿಎ ಸೂಚಿಸಿದ ನಿರ್ದಿಷ್ಟ ಜಾಗಗಳಲ್ಲಿ ಅಥವಾ ಇ-ಎನ್‌ಪಿಎಸ್ ಮೂಲಕ ಹಣವನ್ನು ಪಾವತಿ ಮಾಡಬೇಕಾಗಿತ್ತು. ನೇರ ಸಲ್ಲಿಕೆಯ ಲಾಭವೇನು?
ಡಿ-ರೆಮಿಟ್‌ನಿಂದ ಹಣ ಕಟ್ಟುವ ವ್ಯವಸ್ಥೆ ಸಲೀಸಾಗುತ್ತದೆ. ಹಿಂದಿನಂತೆ ಪಿಎಫ್ಆರ್‌ಡಿಎ ಸೂಚಿಸಿದ ನಿರ್ದಿಷ್ಟ ಜಾಗಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಜೊತೆಗೆ ಈ ಮಾದರಿಯಲ್ಲಿ ಹಣ ಪಾವತಿ ಮಾಡಿದ ಕೂಡಲೇ, ನಿಮಗೆ ನಿವ್ವಳ ಆಸ್ತಿ ಮೌಲ್ಯ ಎಷ್ಟು ಎಂದು ಗೊತ್ತಾಗುತ್ತದೆ. ಅಂದರೆ ಗಡುವಿನೊಳಗೆ ಹಣ ಕಟ್ಟಿದರೆ, ಹಿಂತಿರುಗಿ ಪಡೆಯುವ ಲಾಭವೆಷ್ಟು ಎಂದು ತಿಳಿಯುತ್ತದೆ.
Related Articles
ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ) ನಿರ್ವಹಿಸುತ್ತದೆ. 1952ರಲ್ಲಿ ಇದು ಜಾರಿಯಾಯಿತು. ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವ್ಯಕ್ತಿಗಳಿಗೆ ಒಂದೇ ಮೊತ್ತದಲ್ಲಿ ಪಿಂಚಣಿ ನೀಡುವುದು ಹಾಗೆಯೇ ವಿಮೆ ನೀಡುವುದು ಇದರ ಉದ್ದೇಶ. ಭವಿಷ್ಯ ನಿಧಿಗಾಗಿ ಉದ್ಯೋಗಿಗಳ ವೇತನದಲ್ಲಿ ಶೇ.12ರಷ್ಟು ಹಣ ಕತ್ತರಿಸಲ್ಪಡುತ್ತದೆ. ಅಷ್ಟೇ ಹಣ ಉದ್ಯೋಗದಾತರಿಂದಲೂ ಕತ್ತರಿ ಸಲ್ಪಡುತ್ತದೆ. ಇದು ಕಂಪನಿಗಳಿಂದ ನೇಮಿಸಿ ಕೊಳ್ಳಲ್ಪಟ್ಟ ಎಲ್ಲರಿಗೂ ಅನ್ವಯವಾಗುತ್ತದೆ. ಎನ್‌ಪಿಎಸ್ ಕೇವಲ ಸ್ವಯಂಪ್ರೇರಣೆಯಿಂದ ವ್ಯಕ್ತಿಗಳಿಂದ ಕಟ್ಟಲ್ಪಡುವ ಹಣ.
Advertisement
ಪಿಪಿಎಫ್ ಎಂದರೆ?ಪಿಂಚಣಿ ಯೋಜನೆ ವ್ಯಾಪ್ತಿಗೆ ಬರದ ವ್ಯಕ್ತಿಗಳು ತಾವೇ ಸ್ವತಃ, ಬ್ಯಾಂಕ್‌ನಲ್ಲಿ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಖಾತೆಯನ್ನು ತೆರೆಯಬಹುದು. ಇದೂ ಕೇಂದ್ರದ್ದೇ ಒಂದು ಯೋಜನೆ. ತಾವು ನಿಗದಿಪಡಿಸಿಕೊಂಡ ಮೊತ್ತವನ್ನು ನಿಗದಿತವಾಗಿ ಕಟ್ಟುತ್ತಾ ಹೋಗಬೇಕು. ನಿರ್ದಿಷ್ಟ ಬಡ್ಡಿ ಹೊಂದಿರುವ ಈ ಮೊತ್ತವನ್ನು 15 ವರ್ಷಗಳ ಅನಂತರ ಹಿಂಪಡೆಯಬಹುದು. ಈ ನಡುವೆ ಬಯಸಿದರೂ ಪಡೆಯಲು ಅವಕಾಶವಿದೆ.