ಕೆರೆ ನೀಡುವ ಬಿಡುವ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಮತ್ತು ಸುತ್ತಲಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ ಇದೇ ವಿಚಾರವಾಗಿ ನಾಲ್ಕೈದುಗ್ರಾಮಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಿದ್ದಾರೆ.
Advertisement
ಅಲ್ಲದೆ, ಇದೀಗ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಕಡೂರು ತಾಲೂಕು ಸಖರಾಯಪಟ್ಟಣದ ಅಯ್ಯನಕೆರೆಯಿಂದ ಬ್ರಹ್ಮಸಮುದ್ರ ಕೆರೆಗೆ ನೀರು ಬಿಡುವ ವಿಚಾರವಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಸುತ್ತಲಿನ ಗ್ರಾಮಗಳಾದ ಚಟ್ಟನಹಳ್ಳಿ, ಬಾಣೂರು, ಬಿಸಲೆಹಳ್ಳಿ, ಬ್ರಹ್ಮಸಮುದ್ರ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನೀರು ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ, ಅದೇ ದಿನ ಸಂಜೆಯೇ ಸಖರಾಯಪಟ್ಟಣ ಗ್ರಾಮಸ್ಥರು, ಅಯ್ಯನಕೆರೆಯಲ್ಲಿ ಕೇವಲ 4 ಅಡಿಗಳಷ್ಟೇ ನೀರಿದೆ. ಹೀಗಾಗಿ ಬಿಡಲು ಸಾಧ್ಯವಿಲ್ಲ ಎಂದು ಹೇಳಿ, ನೀರು ಹೋಗುವುದು ತಪ್ಪಿಸಿದ್ದರು.
ಶುಕ್ರವಾರ ಬೆಳಗ್ಗೆ ಚಟ್ಟನಹಳ್ಳಿ, ಬಾಣೂರು, ಬ್ರಹ್ಮಸಮುದ್ರ, ಬಿಸಲೆಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಸಖರಾಯಪಟ್ಟಣಕ್ಕೆ ಆಗಮಿಸಿ ಬ್ರಹ್ಮಸಮುದ್ರ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ರಸ್ತೆತಡೆದು ಪ್ರತಿಭಟನೆ ನಡೆಸಲಾರಂಭಿಸಿದರು. ಈ ವಿಷಯ ತಿಳಿದ ಸಖರಾಯಪಟ್ಟಣದ ಗ್ರಾಮಸ್ಥರು ಮಹಿಳೆಯರೊಂದಿಗೆ ಸೇರಿ ಮತ್ತೂಂದೆಡೆ ಪ್ರತಿಭಟನೆ ಆರಂಭಿಸಿದರು. ಎರಡೂ ಕಡೆಯವರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಕರೆಸಿ ಚರ್ಚೆ ನಡೆಸಿದರು. ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ತಕ್ಷಣ ಎರಡೂ ಗ್ರಾಮಸ್ಥರ ಮಧ್ಯೆ ಗಲಾಟೆ ಆರಂಭವಾಯಿತು. ಕೆಲವರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಲಭೆ ಮಾಡುತ್ತಿದ್ದುದೂ ಕಂಡು ಬಂತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಕೂಡಲೆ ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು. ಗಲಭೆಯಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Related Articles
Advertisement