Advertisement
ನೀತಿ ಸಂಹಿತೆ ಎಂದರೇನು?ನೀತಿ ಸಂಹಿತೆ ಎಂಬುದು ಚುನಾವಣೆಯನ್ನು ಪಾರದರ್ಶಕ ವಾಗಿ ಮಾಡುವ ಒಂದು ಮಾರ್ಗಸೂಚಿ. ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ನಿಗದಿಸಿದ ದಿನದಂದೇ ಇದು ಜಾರಿಗೆ ಬರುತ್ತದೆ.
ಸಾಮಾನ್ಯ ಸಂಹಿತೆ: ರಾಜಕೀಯ ಪಕ್ಷಗಳು ಇತರ ಪಕ್ಷಗಳ ಅಭ್ಯರ್ಥಿಗಳನ್ನು ನೀತಿಗಳು ಮತ್ತು ಯೋಜನೆಗಳ ಆಧಾರದಲ್ಲಿ ಟೀಕಿಸಬಹುದು. ಆದರೆ ಜಾತಿ, ಕೋಮು ಭಾವನೆಗಳನ್ನು ಕೆರಳಿಸಿ ಮತಯಾಚಿಸಬಾರದು. ಅಷ್ಟೇ ಅಲ್ಲ, ಮತದಾರರಿಗೆ ಲಂಚದ ಆಮಿಷವನ್ನೂ ಒಡ್ಡಬಾರದು. ಸಭೆಗಳು: ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳ ಬಗ್ಗೆ ರಾಜಕೀಯ ಪಕ್ಷಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು.
Related Articles
Advertisement
ಮತದಾನದ ದಿನ: ಮತಗಟ್ಟೆಯಲ್ಲಿ ತಮ್ಮ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಎಲ್ಲ ಪಕ್ಷದ ಕಾರ್ಯಕರ್ತರೂ ತಮ್ಮ ಪಕ್ಷದ ಹೆಸರು ಮತ್ತು ಚಿಹ್ನೆ ಹೊಂದಿರುವ ಬ್ಯಾಡ್ಜ್ ಧರಿಸಿರಬೇಕು.
ಮತಗಟ್ಟೆಗಳು: ಮತದಾರರನ್ನು ಹೊರತು ಪಡಿಸಿ ಚುನಾವಣಾ ಆಯೋಗ ಅನುಮೋದಿ ಸಿದ ವ್ಯಕ್ತಿಗಳು ಮಾತ್ರ ಮತಗಟ್ಟೆಗೆ ಪ್ರವೇಶಿಸಬಹುದು. ಮತಗಟ್ಟೆಯಿಂದ 100 ಮೀ. ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ನಡೆಸುವಂತಿಲ್ಲ.
ವೀಕ್ಷಕರು: ಚುನಾವಣೆ ನಡೆಸುತ್ತಿರುವ ವಿಧಾನದ ಬಗ್ಗೆ ಅಭ್ಯರ್ಥಿಗಳು ಆಕ್ಷೇಪ ಹೊಂದಿದ್ದರೆ, ಚುನಾವಣಾ ಆಯೋಗ ನೇಮಿಸಿದ ವೀಕ್ಷಕರನ್ನು ಸಂಪರ್ಕಿಸಬಹುದು.
ಪಕ್ಷಗಳಿಗೆ ಯಾವ ನಿರ್ಬಂಧಗಳಿವೆ?– ಆಡಳಿತದಲ್ಲಿರುವ ಪಕ್ಷಗಳಿಗೆ 1979 ರ ನಂತರ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
– ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತು ನೀಡುವಂತಿಲ್ಲ
– ಪ್ರಚಾರ ಹಾಗೂ ಪಕ್ಷದ ಕೆಲಸದೊಂದಿಗೆ ಅಧಿಕೃತ ಭೇಟಿಯನ್ನು ಯಾವುದೇ ಸಂಸದ ಅಥವಾ ಸಚಿವರು ಮಿಶ್ರಗೊಳಿಸುವಂತಿಲ್ಲ. ಅಧಿಕಾರಿಗಳನ್ನೂ ಪ್ರಚಾರಕ್ಕೆ ಬಳಸುವಂತಿಲ್ಲ.
– ಸಚಿವರು ಯಾವುದೇ ಅನುದಾನ ಘೋಷಿಸುವಂತಿಲ್ಲ ಅಥವಾ ರಸ್ತೆ ನಿರ್ಮಾಣ, ಕುಡಿಯುವ ನೀರು ಸೌಲಭ್ಯದಂತಹ ಅನುಕೂಲ ಒದಗಿಸುವ ಭರವಸೆ ನೀಡುವಂತಿಲ್ಲ
– ಇತರ ಪಕ್ಷಗಳೂ ಸಾರ್ವಜನಿಕ ಸ್ಥಳವನ್ನು ಬಳಸಲು ಅವಕಾಶ ನೀಡಬೇಕು ಕೆಲವು ಮಹತ್ವದ ಉಲ್ಲಂಘನೆಗಳು
– 2017ರ ಗುಜರಾತ್ ವಿಧಾನಸಭೆ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ ಹಾಕಿದ ಬೆರಳನ್ನು ಮತಗಟ್ಟೆ ಬಳಿ ಸೇರಿದ್ದ ಜನರಿಗೆ ತೋರಿಸಿದ್ದರು. 2014ರ ಲೋಕಸಭೆ ಚುನಾವಣೆಯ ವೇಳೆಯೂ ಇದೇ ರೀತಿ ನಡೆದುಕೊಂಡಿದ್ದಕ್ಕೆ ವಿಪಕ್ಷಗಳು ಆಕ್ಷೇಪಿಸಿ ಎಫ್ಐಆರ್ ದಾಖಲಿಸಿದ್ದವು.
– 2017ರ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಮತದಾನಕ್ಕೂ ಮುನ್ನಾ ದಿನ ಗುಜರಾತ್ ಟಿವಿ ಚಾನೆಲ್‌ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂದರ್ಶನ ನೀಡಿದ್ದಕ್ಕೆ ಚುನಾವಣಾ ಆಯೋಗವು ಎಫ್ಐಆರ್ ದಾಖಲಿಸಿತ್ತು.
– 2017ರಲ್ಲಿ ಗೋವಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡಿದ್ದಕ್ಕೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು.
– 2016ರ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಅಸಾನ್ಸೋಲ್ ಅನ್ನು ಜಿಲ್ಲೆ ಎಂದು ಘೋಷಿಸಿದ್ದಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿತ್ತು.
– 2016ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೋಯ್ ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಆಯೋಗ ಆಕ್ಷೇಪಿಸಿತ್ತು. ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
– 2014ರಲ್ಲಿ ದ್ವೇಷ ಭಾಷಣಕ್ಕೆ ಅಮಿತ್ ಶಾ ವಿರುದ್ಧ ದೂರು ದಾಖಲಾಗಿತ್ತು. ನೀತಿ ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತದೆ?
ನೀತಿ ಸಂಹಿತೆ ಉಲ್ಲಂಘಿ ಸಿದರೆ ನಿರ್ದಿಷ್ಟ ಕ್ರಮಗಳನ್ನೇ ಕೈಗೊಳ್ಳಬೇಕು ಎಂಬ ನಿಯಮವಿಲ್ಲ. ಆದರೆ ಉಲ್ಲಂಘ ನೆಯ ತೀವ್ರತೆ, ವಿಧ ಹಾಗೂ ಪರಿಣಾಮಗಳನ್ನು ಅವಲಂಬಿಸಿರುತ್ತದೆ. ಈವರೆಗೆ ನೀತಿ ಸಂಹಿತೆ ಉಲ್ಲಂ ಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡ ಉದಾಹರಣೆಗಳೂ ಕಡಿಮೆ. ನೀತಿ ಸಂಹಿತೆ ಎಂಬುದು ನೈತಿಕ ಸಂಹಿತೆಯ ರೀತಿ ಕೆಲಸ ಮಾಡುತ್ತಿದ್ದು, ಇದರ ಉಲ್ಲಂಘನೆ ಗಮನಕ್ಕೆ ಬಂದಲ್ಲಿ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಚುನಾವಣಾ ಆಯೋಗ ನೋಟಿಸ್ ನೀಡುತ್ತದೆ. ನೋಟಿಸ್ ಸ್ವೀಕರಿಸಿದ ಪಕ್ಷ ಅಥವಾ ಅಭ್ಯರ್ಥಿ ಪ್ರತಿಕ್ರಿಯೆ ನೀಡಬೇಕು. ತಪ್ಪು ನಡೆದಿದ್ದು ಖಚಿತವಾದರೆ ಮುಂದೆ ಹೀಗಾಗದಂತೆ ಮುಚ್ಚಳಿಕೆ ಬರೆದುಕೊಡುವ ಅಥವಾ ಪುನರಾವರ್ತಿಸಿದರೆ ಪಕ್ಷ ಅಥವಾ ಅಭ್ಯರ್ಥಿಯ ಆಯ್ಕೆಯನ್ನು ಅನರ್ಹಗೊಳಿಸುವ ಎಚ್ಚರಿಕೆಯನ್ನು ಚುನಾವಣಾ ಆಯೋಗ ನೀಡುತ್ತದೆ.