ನವದೆಹಲಿ: ಮುಂಬರುವ ಜಿ20 ಶೃಂಗಸಭೆಯ ಔತಣಕೂಟ ಸಂಬಂದ ಕೇಂದ್ರ ಸರ್ಕಾರ ಮುದ್ರಿಸಿರುವ ಪ್ರಕಟನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇದುವರೆಗಿನ ಸಂಪ್ರದಾಯದಂತೆ ʼಪ್ರೆಸಿಡೆಂಟ್ ಆಫ್ ಇಂಡಿಯಾ” ಎಂಬುದರ ಬದಲಾಗಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಮೂದಿಸಿದ್ದು, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು “ಪ್ರೈಮ್ ಮಿನಿಸ್ಟರ್ ಆಫ್ ಭಾರತ್ “ ಎಂದು ನಮೂದಿಸಿರುವ ಜಾಹೀರಾತು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:Udupi; ಶ್ರೀಕೃಷ್ಣಾಷ್ಟಮಿಯ “ಹುಲಿವೇಷದʼ ಹಿಂದಿದೆ ರೋಚಕ ಕಥೆ! ಶ್ರೀರಘು ತೀರ್ಥರ ಪವಾಡ
20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಗಾಗಿ ಬುಧವಾರ ಮತ್ತು ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಕಾರ್ಯಕ್ರಮದ ಟಿಪ್ಪಣಿಯಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬಳಸಲಾಗಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಈ ಟಿಪ್ಪಣಿಯನ್ನು ಎಕ್ಸ್ ನಲ್ಲಿ ಶೇರ್ ಮಾಡಿ, ಕಾಂಗ್ರೆಸ್ ತಕ್ಷಣವೇ ಟೀಕಾಪ್ರಹಾರ ನಡೆಸಲಿ ಎಂದು ಆಹ್ವಾನ ನೀಡಿದ್ದಾರೆ. “ ನೋಡಿ ಮೋದಿ ಸರ್ಕಾರ ಹೇಗೆ ಗೊಂದಲ ಸೃಷ್ಟಿಸುತ್ತಿದೆ. ವಿಪಕ್ಷಗಳು ಒಟ್ಟುಗೂಡಿ ಇಂಡಿಯಾ ಎಂದು ಹೆಸರಿಟ್ಟಿದ್ದಕ್ಕೆ ಈ ಎಲ್ಲಾ ನಾಟಕ ಮಾಡಲಾಗುತ್ತಿದೆ” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವ ಚಿಂತನೆಗೆ ಭಾರತೀಯ ಜನತಾ ಪಕ್ಷ ಬೆಂಬಲ ವ್ಯಕ್ತಪಡಿಸಿದ್ದು, ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ವಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂದು ಕರೆದುಕೊಂಡಿದ್ದಕ್ಕೆ ಇಂತಹ ಗೊಂದಲ ಸೃಷ್ಟಿಸಲಾಗುತ್ತಿದೆ. ಭಾರತದಲ್ಲಿ 140 ಕೋಟಿ ಜನರನ್ನು ಹೊಂದಿದ್ದು, ಕೇವಲ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಯಾವ ಮಾನದಂಡದ ಮೇಲೆ ದೇಶದ ಹೆಸರನ್ನು ಬದಲಾಯಿಸುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.