Advertisement

ಇಂದಿನಿಂದ ಮಂಡ್ಯದಲ್ಲಿ ನಮ್ಮದೇ ಹವಾ: ಕುಮಾರಸ್ವಾಮಿ

06:44 AM Mar 25, 2019 | Vishnu Das |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಸೋಮವಾರ ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು, ಕ್ಷೇತ್ರ ದೈವ ಶ್ರೀ ಕಾಲಭೈರವೇಶ್ವರ, ಮಾಳಮ್ಮ, ಸ್ತಂಭಾಂಬಿಕೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ವೇಳೆ ಪತ್ರಕರ್ತರ ಜತೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ಭಿನ್ನಾ ಭಿಪ್ರಾಯ, ಕುತಂತ್ರ ರಾಜಕಾರಣಕ್ಕೆ ನಾನಾಗಲಿ, ದೇವೇಗೌಡರಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕಾರ್ಯಕರ್ತರ ಶಕ್ತಿ ಇದೆ. ಯಾವುದೇ ಭಯ, ಆತಂಕ ಇಲ್ಲ ಎಂದು ಹೇಳುವ ಮೂಲಕ ನಿಖಿಲ್‌ ಸ್ಫರ್ಧೆಗೆ ವಿರೋಧ ವ್ಯಕ್ತಪಡಿಸಿರುವ ಮಿತ್ರಪಕ್ಷ ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ವಿರುದ್ಧ ಹರಿಹಾಯ್ದರು. ಸಿಎಂ ಹೇಳಿಕೆಯ ಕೆಲವು ಪ್ರಮುಖ ತುಣುಕುಗಳು ಇಲ್ಲಿವೆ.

Advertisement

ಸೋಮವಾರ ನಿಖಿಲ್‌ ನಾಮಪತ್ರ ಸಲ್ಲಿಸ ಲಿದ್ದು, ಆ ಬಳಿಕ ಕ್ಷೇತ್ರದಲ್ಲಿ ನಮ್ಮ ಹವಾ ಶುರು ವಾಗಲಿದೆ.

ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಬೆಂಬಲದ ಭಿಕ್ಷೆ ಕೇಳಲ್ಲ.

ಮೈತ್ರಿ ಮರೆತು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಸ್ಪೀಡ್‌ ಬ್ರೇಕ್‌ ಹಾಕಲು ಕೆಲವರು ಮುಂದಾಗಿ ದ್ದಾರೆ. ಆದರೆ ನಾನು ಅಂಥ ನಂಬಿಕೆ ದ್ರೋಹದ ಕೆಲಸ ಮಾಡುವುದಿಲ್ಲ.

ಹಣ ಕೊಟ್ಟು ಮತ ಕೊಂಡುಕೊಳ್ಳುವವರ ಮಾತಿಗೆ ಜಿಲ್ಲೆಯ ಜನ ಮರುಳಾಗುವುದಿಲ್ಲ ಎಂಬ ವಿಶ್ವಾಸವಿದೆ. ನಿಖೀಲ್‌ ಗೆಲುವು ಖಚಿತ.

Advertisement

ದೇವೇಗೌಡರ ಕುಟುಂಬ ಮತ್ತು ಮಂಡ್ಯ ಜನರ ಬಾಂಧವ್ಯಕ್ಕೆ ಧಕ್ಕೆ ತರಲಾಗದು. ಓರ್ವ ನಿಖೀಲ್‌ನನ್ನು ಸೋಲಿಸಲು ಎಷ್ಟು ಜನ ಒಂದಾಗಿದ್ದಾರೆ ಎಂಬುದು ಗೊತ್ತಾಗಿದೆ. ಬೆನ್ನಿಗೆ ಚೂರಿ ಹಾಕುವುದರಿಂದ ಏನೂ ಸಾಧಿಸಲಾಗದು.

ನಿಖಿಲ್‌ ಸ್ಪರ್ಧೆಯಿಂದ ಮಂಡ್ಯದಲ್ಲಿ ಬಿಜೆಪಿ ಮುಖ್ಯವಾಗಿದೆ.

ಭಕ್ತನಿಂದ ಚುಂಚಶ್ರೀಗೆ ಪ್ರಶ್ನೆ
ಮಂಡ್ಯ: ಒಕ್ಕಲಿಗ ಸಮುದಾಯದ ದೇವೇಗೌಡ ಮತ್ತವರ ಕುಟುಂಬದವರನ್ನು ಮಾತ್ರ ಪೋಷಿಸಿ ಆಶೀರ್ವದಿಸುವುದು ಎಷ್ಟು ಸರಿ ಎಂದು ಸಿದ್ದು ಎಂಬ ಭಕ್ತ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳಿಗೆ ಪ್ರಶ್ನೆಗಳ ಸುರಿಮಳೆಗರೆದಿರುವ ಸಿದ್ದು, ಇತರ ಒಕ್ಕಲಿಗ ನಾಯಕರ ಬೆಳವಣಿಗೆಯನ್ನು ಸಹಿಸದ ದೇವೇಗೌಡರ ಕುಟುಂಬಕ್ಕೆ ಸಹಕಾರ ನೀಡುವಷ್ಟು ಬೇರೆ ನಾಯಕರಿಗೆ ಏಕೆ ನೀಡುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸಿದ್ದು ಭೇಟಿ ಮಾಡಿದ ಅನಿತಾ
ಈ ಮಧ್ಯೆ ನಿಖಿಲ್‌ ತಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ, ಹಾಸನ ಮಾದರಿಯಲ್ಲೇ ಮಂಡ್ಯ ಜಿಲ್ಲೆಯಲ್ಲೂ ಕಾಂಗ್ರೆಸಿಗರನ್ನು ಒಗ್ಗೂಡಿಸಿ, ನಿಖೀಲ್‌ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದರು. ಜಿಲ್ಲೆಯ ಪ್ರಭಾವಿ ಕಾಂಗ್ರೆಸಿಗರು ಸುಮಲತಾ ಬೆಂಬಲಕ್ಕೆ ನಿಂತಿದ್ದು, ಪುತ್ರನಿಗೆ ಸೋಲಿನ ಭಯ ಕಾಡುತ್ತಿದೆ. ಇದು ನಮ್ಮ ಕುಟುಂಬದ ಗೌರವ ಪ್ರಶ್ನೆ. ನಿಖೀಲ್‌ ನಾಮಪತ್ರ ಸಲ್ಲಿಕೆ ವೇಳೆ ಬನ್ನಿ, ಪುತ್ರನ ಪರ ಪ್ರಚಾರ ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವೊಂದು ಶಕ್ತಿಗಳು ಹುನ್ನಾರ ನಡೆಸಿವೆ. ಆದರೆ ಜನರು ನನ್ನ ಪರ ಇದ್ದಾರೆ. ಮಂಡ್ಯದ ಜನ ನನ್ನ ಕೈಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ.
– ನಿಖಿಲ್‌ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ

ಸುಮಲತಾಗೆ ಬಿಜೆಪಿ ಬೆಂಬಲ ಸೂಚಿಸಿದೆ. ಹೀಗಾಗಿ ಸುಮಲತಾ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬುದನ್ನು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಒಂದು ರಾಷ್ಟ್ರೀಯ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಉದ್ದೇಶವೇ ಜೆಡಿಎಸ್‌ ಭದ್ರಕೋಟೆಯನ್ನು ಭೇದಿಸುವ ತಂತ್ರಗಾರಿಕೆ.
– ಡಿ.ಸಿ.ತಮ್ಮಣ್ಣ , ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next