Advertisement
ಗೋವಾದ ತೀವ್ರ ವಿರೋಧದ ನಡುವೆಯೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್‌ಗೆ ಮನವರಿಕೆ ಮಾಡಿಕೊಟ್ಟು, ಅಧಿಸೂಚನೆ ಹೊರಡಿಸುವಂತೆ ಮಾಡುವಲ್ಲಿ ಪ್ರಹ್ಲಾದ ಜೋಶಿ ಶ್ರಮ ಮಹತ್ವದ್ದಾಗಿದೆ. ಈ ಹಿಂದೆಯೂ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೇಕರ ಮೇಲೆ ಪ್ರಭಾವ ಬೀರಿ, ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆಗೆ ಪರವಾನಗಿ ಅಗತ್ಯವಿಲ್ಲ ಎಂದು ಪತ್ರ ಬರೆಸುವಲ್ಲಿ ಜೋಶಿ ಮೌನಕ್ರಾಂತಿ ತೋರಿದ್ದರು.
Related Articles
Advertisement
ಕಾಲಮಿತಿ ಯೋಜನೆ ಸವಾಲು: ಇದು ಒಂದು ಹಂತದ ನೆಗೆತವಷ್ಟೇ. ಮುಂದಿರುವುದು ಬಹುದೊಡ್ಡ ಸವಾಲು. ಮಹದಾಯಿ ನೀರಿಗಾಗಿ ಮೂರ್‍ನಾಲ್ಕು ದಶಕಗಳಿಂದ ಮೊಳಗುತ್ತಿದ್ದ ಬೇಡಿಕೆ, ಧ್ವನಿಗೆ ಇದೀಗ ಫಲ ಸಿಗುವ ಕಾಲ ಕೂಡಿ ಬಂದಿದೆ. ಈಗಲೂ ನಾವು ಉದಾಸೀನತೆ, ವಿಳಂಬಕ್ಕೆ ಅವಕಾಶ ನೀಡದೆ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನದ ಬದ್ಧತೆ ತೋರಬೇಕಾಗಿದೆ.
1,000 ಕೋಟಿ ಬೇಕು: ಮಹದಾಯಿ ನಾಲಾ ಯೋಜನೆಗೆ ಕನಿಷ್ಠ 1,000 ಕೋಟಿ ರೂ. ನೀಡಿದರೆ ಕಾಮಗಾರಿಯ ವೇಗ ಹೆಚ್ಚಲಿದೆ ಎಂಬುದು ಅಧಿಕಾರಿಗಳ ಅನಿಸಿಕೆ. ಮಾ.5ರಂದು ಮಂಡನೆಯಾಗುವ ಆಯವ್ಯಯದಲ್ಲಿ ಯಡಿಯೂರಪ್ಪನವರು, ಹೆಚ್ಚು ಹಣ ನಿಗದಿ ಮಾಡುವ ಮೂಲಕ ತಮ್ಮ ಬದ್ಧತೆ ತೋರಬೇಕಾಗಿದೆ.
ನೀರು ಬಂದೇ ಬಿಟ್ಟಿತು ಎಂದಲ್ಲ: ಅಧಿಸೂಚನೆ ಹೊರಡಿಸಿದ ಕೂಡಲೇ ಅಲ್ಲಿಗೆ ಎಲ್ಲವೂ ಮುಗಿಯಿತು, ನೀರು ಬಂದೇ ಬಿಟ್ಟಿತು ಎಂದಲ್ಲ. ಮಹದಾಯಿ ನ್ಯಾಯಾಧಿಕರಣದ ತೀರ್ಪಿನಂತೆ ಸದ್ಯಕ್ಕೆ ಕರ್ನಾಟಕಕ್ಕೆ 8.02 ಟಿಎಂಸಿ ಅಡಿಯಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸೇರಿ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರು ಉದ್ದೇಶಕ್ಕೆಂದು ಕಳಸಾದಿಂದ 1.72 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಪಡೆಯಬಹುದಾಗಿದೆ.
ಇದಕ್ಕಾಗಿ ಜಲಸಂಪನ್ಮೂಲ ಇಲಾಖೆ ಈಗಾಗಲೇ ಅಂದಾಜು 1,600 ಕೋಟಿ ರೂ.ಗಳ ಡಿಪಿಆರ್ ಸಿದ್ಧಪಡಿಸಿದೆ. ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಇನ್ನಿತರ ಇಲಾಖೆಗಳ ಪರವಾನಗಿ ಪಡೆಯಬೇಕಾಗಿದೆ. ಕಳಸಾ ಹಳ್ಳಕ್ಕೆ ಇರುವ ತಡೆಗೋಡೆ ತೆಗೆಯಲು ಮೊದಲ ಆದ್ಯತೆ ನೀಡಬೇಕಾಗಿದೆ. ಇದರಿಂದ ಕನಿಷ್ಟ ಒಂದು ಟಿಎಂಸಿ ಅಡಿಯಷ್ಟಾದರೂ ನೀರು ನೈಸರ್ಗಿಕವಾಗಿ ಹರಿದು ಬಂದು ಮಲಪ್ರಭಾ ಸೇರಿದಂತಾಗಲಿದೆ.
ಹೋರಾಟಗಾರರಿಂದ ಹುಬ್ಬಳ್ಳಿಯಲ್ಲಿ ಸಂಭ್ರಮಾಚರಣೆ: ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದರಿಂದ ಮಹದಾಯಿ ಹೋರಾಟಗಾರರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಸಂಭ್ರಮಾಚರಣೆ ನಡೆಸಿದರು. ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಅಧಿಸೂಚನೆ ಹೊರಡಿಸಿದ್ದು ಅಭಿನಂದನೀಯ. ಮುಖ್ಯಮಂತ್ರಿಗಳು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಹೋರಾಟದಲ್ಲಿ ಅಸುನೀಗಿದ 12 ಜನರ ಕುಟುಂಬದವರಿಗೆ ಪರಿಹಾರ ವಿತರಣೆಯಾಗಬೇಕು. ರೈತರ ಮೇಲೆ ದಾಖಲಿಸಿದ ಎಲ್ಲ ಮೊಕದ್ದಮೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಹದಾಯಿ ಅಧಿಸೂಚನೆಗೆ ಸುಪ್ರೀಂಕೋರ್ಟ್ ಸೂಚನೆ, ಕೇಂದ್ರ ಸರಕಾರ ಅದನ್ನು ಪಾಲಿಸಿರುವುದು ಸಂತಸದ ವಿಚಾರ. ಯೋಜನೆಯ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಈ ಭಾಗದ ಸಂಸದರು ತಮ್ಮ ಬದ್ಧತೆಯನ್ನು ತೋರಬೇಕಾಗಿದೆ. -ವಿಕಾಸ ಸೊಪ್ಪಿನ, ಮಹದಾಯಿ ಹೋರಾಟಗಾರ * ಅಮರೇಗೌಡ ಗೋನವಾರ