Advertisement

ಬೆಂಗಾಡಿನ ಸಂಡೂರಲ್ಲಿ ಈಗ ಎಲ್ಲೆಲ್ಲೂ ಹಸಿರು..!

05:09 PM May 31, 2018 | |

ಸಂಡೂರು: ಕಳೆದ ವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಬಳ್ಳಾರಿ ಜಿಲ್ಲೆಯ ಕಾಶ್ಮೀರ ಎಂದೇ ಖ್ಯಾತಿ ಪಡೆದ ಸಂಡೂರಿನ ಸ್ವಾಮಿ ಮಲೈಬೆಟ್ಟ ಸೇರಿದಂತೆ ಬೆಟ್ಟ ಗುಡ್ಡಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ.

Advertisement

ತಾಲೂಕಿನಾದ್ಯಂತ ಸುತ್ತುವರಿದ ಬೆಟ್ಟಗಳು ಮಳೆಯಿಂದಾಗಿ ಹಸಿರ ಸೀರೆಯನ್ನುಟ್ಟು ಮೈದುಂಬಿಕೊಂಡಿರುವಂತೆ ಕಂಡು ಬರುತ್ತಿವೆ. ಅಲ್ಲದೇ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳ್ಳಿಸುವ, ಅದರ ಮಧ್ಯೆದಲ್ಲಿ ಹರಿಯುತ್ತಿರುವ ನಾರಿಹಳ್ಳದ ಜುಳು ಜುಳು ನೀರು ಎಂತಹವರನ್ನು ಒಮ್ಮೆ ಕೈ ಬೀಸಿ ಕರೆಯುವಂತಿದೆ. 

ಸಂಡೂರು ಎಂದಾಕ್ಷಣ ಗಣಿಗಳ ನಾಡು, ಧೂಳಿನ ಬೀಡು ಎಂಬ ಅಪಖ್ಯಾತಿ ಪಡೆದಿತ್ತು. ನಿವೃತ್ತ ನ್ಯಾ| ಸಂತೋಷ್‌ ಹೆಗ್ಡೆ ಯವರು ಭೇಟಿ ನೀಡಿ ಇಲ್ಲಿನ ಅಕ್ರಮ ಗಣಿಗೆ ಬ್ರೇಕ್‌ ಹಾಕಿದ ಪರಿಣಾಮ ಇಂದು ಸ್ವಾಮಿ ಮಲೈ, ರಾಮನಮಲೈ ಮತ್ತು ದೋಣಿ ಮಲೈ ಸೇರಿದಂತೆ ಹಲವು ಬೆಟ್ಟಗಳು ಹಸಿರು ಹೊದಿಕೆ ಹೊದ್ದು ನೋಡುಗರ ಮೈ-ಮನ ಸೆಳೆಯುವಂತೆ ಮಾಡಿದೆ. 

ಈ ಕಾಡುಗಳ ಮಧ್ಯದಲ್ಲಿಯೇ ಸುಂದರ ಪ್ರವಾಸಿ ತಾಣಗಳು ನೈಸರ್ಗಿಕವಾಗಿ ನಿರ್ಮಾಣವಾಗಿವೆ. ಪ್ರಮುಖವಾಗಿ ಉಬ್ಬಲ ಗಂಡಿ ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶ ಯಾಣಕ್ಕಿಂತಲೂ ಅದ್ಭುತವಾದಂಥ ಉದ್ದನೆಯ ಶಿಖರಗಳನ್ನು ಕಾಣಬಹುದು. ಸಂಡೂರು-ಕೂಡ್ಲಿಗಿ ರಸ್ತೆಗೆ ಹೊಂದಿಕೊಂಡ ಗಂಡಿ ನರಸಿಂಹಸ್ವಾಮಿಯ ಗಂಡಿ ಪ್ರದೇಶವಂತೂ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಇಲ್ಲಿ 12 ತೀರ್ಥಗಳಿದ್ದು ಸುಂದರ ತಾಣಗಳಾಗಿವೆ.

ಹರಿಶಂಕರ ತೀರ್ಥ, ನವಿಲುತೀರ್ಥ, ಭೀಮತೀರ್ಥ, ಭೈರವ ತೀರ್ಥಗಳಲ್ಲಿ ನೀರು ಸದಾ ಹರಿಯುತ್ತಿದ್ದು, ನೋಡುಗರನ್ನು ಸೆಳೆಯುತ್ತದೆ. ಅಲ್ಲದೇ ಜಗತ್ತಿನ ಅತಿ ವಿಶೇಷವಾದ ಸಸ್ಯಗಳ ತಾಣ ಇದಾಗಿದೆ. 12 ವರ್ಷಕ್ಕೊಮ್ಮೆ ಬಿಡುವ ನೀಲಕುರಂಜಿ ಹೂ ಈ ಬಾರಿ ಬಿಟ್ಟಿದ್ದು, ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಇಂತಹ ಸುಂದರವಾದ ತಾಣಕ್ಕೆ ರಾಷ್ಟ್ರ ಪಿತ ಮಹಾತ್ಮ ಗಾಂಧೀಜಿಯವರು ಸಹ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇಲ್ಲಿನ ಬೆಟ್ಟ ಗುಡ್ಡಗಳನ್ನು ಕಂಡ ಅವರು ಸಂಡೂರು ಸೀ ಇನ್‌ ಸೆಪ್ಟಂಬರ್‌ ಎಂದು ಮೂದಲಿಸಿದ್ದಾರೆ.

Advertisement

ಇಂತಹ ಪ್ರಕೃತಿ ಸೌಂದರ್ಯ ಹೊಂದಿರುವ ಸಂಡೂರು ಈ ಬಾರಿ ತಡವಾಗಿ ಮಳೆ ಬಿದ್ದ ಕಾರಣ ಮೈದುಂಬಿಕೊಂಡು ಪ್ರವಾಸಿಗರಿಗಾಗಿ ಎದುರು ನೋಡುತ್ತಿದ್ದು, ಇಂತಹ ರಮ್ಯ ತಾಣವನ್ನು ಒಮ್ಮೆ ನೋಡ ಬನ್ನಿ ಎಂದು ಕರೆಯುತ್ತಿದೆ.
 
ತಾಲೂಕಿನ ಒಟ್ಟು ಅರಣ್ಯ ಪ್ರದೇಶವನ್ನು ನಾಲ್ಕು ಬ್ಲಾಕ್‌ಗಳಾಗಿ ವಿಂಗಡಿಸಿದ್ದು, ನಾರ್ಥ ಈಸ್ಟ ಬ್ಲಾಕ್‌ 10596 ಹೆಕ್ಟೇರ್‌, ರಾಮನಮಲೈ ಬ್ಲಾಕ್‌ 7769.85 ಹೆಕ್ಟೇರ್‌, ದೋಣಿಮಲೈ ಬ್ಲಾಕ್‌ 6733.18, ಸ್ವಾಮಿ ಮಲೈ ಬ್ಲಾಕ್‌ 6993.12 ಹೆಕ್ಟೇರ್‌ ಪ್ರದೇಶ ಇದೆ. ಇದರಲ್ಲಿ ಉತ್ತರ ವಲಯ ಪ್ರದೇಶದಲ್ಲಿ ವಿಶೇಷವಾಗಿ ಔಷಧಿ ಸಸ್ಯಗಳು ಸಿಗುತ್ತಿದ್ದು, ಅವುಗಳಿಗಾಗಿ 345 ಹೆಕ್ಟೇರ್‌ ಪ್ರದೇಶವನ್ನು ಯಾವುದೇ ಕಾರಣಕ್ಕೂ ಬಳಸದಂತೆ ಇಡಲಾಗಿದೆ. ಅಲ್ಲದೇ ಔಷಧ ವನ ಮತ್ತು ಸಸ್ಯಗಳ ಅಭಿವೃದ್ಧಿ ಕಾರ್ಯವೂ ಸಹ ನಡೆಯುತ್ತಿದೆ. ಪ್ರತಿ ನಕ್ಷತ್ರಗಳಿಗೆ ಒಂದು ಮರ, ಗ್ರಹಗಳಿಗೆ ವನಗಳನ್ನು ಸಹ ನಿರ್ಮಿಸಲಾಗಿದೆ. ಈ ಬಾರಿ ಸುರಿದ ಮಳೆಯಿಂದಾಗಿ ಸಂಡೂರು ಅರಣ್ಯ ಪ್ರದೇಶ ಬಹು ಸುಂದರವಾಗಿ ಬೆಳೆದು ನಿಂತಿದ್ದು, ನೋಡುಗರ ಮೈ ಮನ ಸೆಳೆಯುತ್ತಿದೆ. 

ಬಸವರಾಜ ಬಣಕಾರ

Advertisement

Udayavani is now on Telegram. Click here to join our channel and stay updated with the latest news.

Next