Advertisement

ಬಾಡಿಗೆ ವಾಹನಗಳಿಗೆ ಈಗ ಹೊಸ ಸಂಕಷ್ಟ! ಸರ್ಕಾರಕ್ಕೂ ಲಕ್ಷಾಂತರ ರೂ. ತೆರಿಗೆ ನಷ್ಟ

06:09 PM Jul 10, 2024 | Team Udayavani |

ಉದಯವಾಣಿ ಸಮಾಚಾರ
ಶಿಗ್ಗಾವಿ: ಸಾರಿಗೆ ಇಲಾಖೆಯಿಂದ ವಾಣಿಜ್ಯ ಪರವಾನಗಿ ಪಡೆಯದ ವಾಹನಗಳನ್ನು ತಾಲೂಕಿನಲ್ಲಿ ಅಕ್ರಮವಾಗಿ ಬಾಡಿಗೆಗೆ
ಬಳಸಲಾಗುತ್ತಿದ್ದು ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ. ಅಲ್ಲದೇ ವಾಣಿಜ್ಯ ಪರವಾನಗಿ ಪಡೆದ ವಾಹನ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಸ್ವಂತ ಬಳಕೆಯ ಉದ್ದೇಶದ ಹೆಸರಲ್ಲಿ ವಾಹನಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಖಾಸಗಿ(ವೈಟ್‌ ಬೋರ್ಡ್‌) ನೋಂದಣಿ
ಮಾಡಿಸಿ ಲೈಫ್‌ ಟೈಂ ಟ್ಯಾಕ್ಸ್‌ನಿಂದ ಮುಕ್ತಿ ಪಡೆದಿದ್ದಲ್ಲದೇ ವಾಹನವನ್ನು ಬಾಡಿಗೆಗೆ ಬಳಸಿ ಲಾಭ ಮಾಡಿಕೊಳ್ಳಲಾಗುತ್ತಿದೆ.

ಆದರೆ ವಾಣಿಜ್ಯ ಬಳಕೆಗೆಂದು (ಹಳದಿ ಬೋರ್ಡ್‌) ವಾಹನ ನೋಂದಣಿ ಮಾಡಿಸಿದವರು ಪ್ರತಿ ಮೂರು ತಿಂಗಳಿಗೊಮ್ಮೆ ಸಾವಿರಾರು ರೂ.ಸಾರಿಗೆ ತೆರಿಗೆ, ವಾಹನ ವಿಮಾ ಪಾವತಿಸುತ್ತಾರೆ. ಇದರಿಂದ ಸರ್ಕಾರಕ್ಕೆ ಲಾಭವಾಗುತ್ತದೆ. ಆದರೆ ವಾಣಿಜ್ಯ ವಾಹನ ಮಾಲೀಕರ ಬಾಡಿಗೆ ದುಡಿಮೆಯನ್ನು ವೈಟ್‌ಬೋರ್ಡ್‌ ಪರವಾನಗಿ ವಾಹನ ಮಾಲಿಕರು ಕಬಳಿಸುತ್ತಿರುವುದು ಸಂಕಷ್ಟ ತಂದೊಡ್ಡಿದೆ.

ವಾಣಿಜ್ಯ ವಾಹನಗಳ ಮಾಲೀಕರು ಬ್ಯಾಂಕ್‌ ಸಾಲದ ತಿಂಗಳ ಕಂತು, ವಾಹನದ ವಿಮೆ, ಪರವಾನಗಿಗಾಗಿ ಸಾವಿರಾರು ರೂ. ವಾರ್ಷಿಕ ಪ್ರೀಮಿಯಂ, ಚಾಲಕರ ಸಂಬಳ, ವಾಹನ ನಿರ್ವಹಣೆ ಹೀಗೆ ಹತ್ತಾರು ತರಹದ ಆರ್ಥಿಕ ತೊಂದರೆ ಎದುರಿಸುವಂತಾಗಿದೆ.

ವಾಣಿಜ್ಯ ವಾಹನಗಳ ಮಾಲೀಕರು ಸಂಬಂಧಿತ ಸಾರಿಗೆ ಪ್ರಾಧಿಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಬಿಗಿ ಕಾನೂನು ಕ್ರಮ ಕೈಗೊಂಡಿಲ್ಲ. ಇದೇ ರೀತಿ ಮುಂದುವರಿದರೆ ನಾವೆಲ್ಲ ಅರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೇವೆ. ಬ್ಯಾಂಕ್‌ಗಳು ಸಾಲ
ವಸೂಲಿಗಾಗಿ ವಾಹನವನ್ನೇ ಸೀಜ್‌ ಮಾಡುತ್ತಾರೆ. ನಮ್ಮ ಜೀವನ ಮತ್ತಷ್ಟು ಬಿಗಡಾಯಿಸಲಿದೆ ಎಂದು ವಾಣಿಜ್ಯ ವಾಹನ ಮಾಲೀಕರು ಕಳವಳ ವ್ಯಕ್ತಪಡಿಸುತ್ತಾರೆ.

Advertisement

ಖಾಸಗಿ ವಾಹನ ಪರವಾನಗಿ ಪಡೆದು ವಾಣಿಜ್ಯ ಬಳಕೆ ಮಾಡುತ್ತಿರುವ ವಾಹನಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
*ಸತ್ಯಪ್ಪ ಮಾಳಗೊಂಡ, ಶಿಗ್ಗಾವಿ ಪಿ.ಐ.

ವಾಣಿಜ್ಯ ಉದ್ದೇಶಕ್ಕಾಗಿ ಎಲ್ಲ ಸೌಲಭ್ಯದ ದುಬಾರಿ ಬೆಲೆಯ ಕಾರ್‌ನ್ನು ಬ್ಯಾಂಕ್‌ಗಳ ಸಾಲ ಸೌಲಭ್ಯದಡಿ ಖರೀದಿಸಿ ಬಾಡಿಗೆಗೆ ಎದುರು ನೋಡುತ್ತಿದ್ದೇನೆ. ಖಾಸಗಿ ವಾಹನ ಮಾಲೀಕರು ನಮಗಿಂತ ಕಡಿಮೆ ಬೆಲೆಗೆ ಅವರ ಕಾರ್‌ ಗಳನ್ನು ಬಾಡಿಗೆ ನೀಡುವುದರಿಂದ ಈ ಉದ್ಯೋಗ ನಂಬಿದ ನಮಗೆ ಬಾಡಿಗೆ ಸಿಗುತ್ತಿಲ್ಲ. ಬೇರೆ ಕಡೆ ಸಾಲ ಮಾಡಿ ಕಂತು ಭರಿಸುವಂತಾಗಿದೆ.
*ಮಲ್ಲಪ್ಪ ಮಂಚಿನಕೊಪ್ಪ, ವಾಣಿಜ್ಯ ವಾಹನ ಮಾಲೀಕ.

ಸಾರಿಗೆ ಇಲಾಖೆ ಆಯುಕ್ತರಿಗೆ ಮೂರ್‍ನಾಲ್ಕು ತಿಂಗಳ ಹಿಂದೆಯೇ ವಾಹನ ಮಾಲೀಕರ ಸಂಘದ ಮೂಲಕ ಖಾಸಗಿ ಬಾಡಿಗೆ ವಾಹನಗಳ ಮೇಲೆ ಕ್ರಮ ವಹಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದರೂ ವಾಹನ ತಪಾಸಣೆ ನಡೆಸಿ ಕ್ರಮ ವಹಿಸಲ್ಲ. ಉದ್ಯೋಗದಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
*ರವಿ ಗಾಣಿಗೇರ ಸವಣೂರು, ವಾಣಿಜ್ಯ
ವಾಹನ ಸಂಘದ ಸದಸ್ಯ.

ಪರವಾನಗಿ ಇಲ್ಲದೇ ಓಡಿಸುವ ವಾಹನ ಮಾಲೀಕರು ಕಡಿಮೆ ಬಾಡಿಗೆ ಹೇಳಿ ಹೆಚ್ಚೆಚ್ಚು ದುಡಿಮೆ ಮಾಡಿಕೊಳ್ಳುವಂತಾಗಿದೆ. ಸಾರಿಗೆ ಇಲಾಖೆ ನೀತಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ. ಅನಧಿಕೃತ ವಾಹನ ಮಾಲೀಕರ ಮೇಲೆ ಬಿಗಿ ಕಾನೂನು ಜಾರಿಗೊಳಿಸಬೇಕು.
*ಪುಟ್ಟರಾಜ ಸಂಶಿ, ವಾಹನ ಚಾಲಕ.

■ ದೇವರಾಜ ಸುಣಗಾರ

Advertisement

Udayavani is now on Telegram. Click here to join our channel and stay updated with the latest news.

Next