ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 6ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳವು ನ. 24ರಂದು ಜರಗಲಿದೆ.
ಕಳೆದ 17 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈಯುತ್ತಿರುವ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಕಳೆದ ಐದು ವರ್ಷಗಳಂತೆ ಈ ಬಾರಿಯೂ ಕಂಬಳಾಭಿಮಾನಿಗಳ ಸಹಕಾರದಿಂದ ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ನಡೆಸಲು ಮುಂದಾಗಿದೆ. ವೇ| ಮೂ| ರಾಘವೇಂದ್ರ ಭಟ್ ಕೊಡಂಬೆಟ್ಟು ಅವರ ಮಾರ್ಗದರ್ಶನದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಕಂಬಳ ಪೋಷಕರ ಸಹಕಾರದಿಂದ ಈ ಬಾರಿಯ ಕಂಬಳ ಋತುವಿನ ಪ್ರಥಮ ಮತ್ತು ಬಂಟ್ವಾಳ ತಾಲೂಕಿನ ಏಕೈಕ ಕಂಬಳ ನಡೆಯುತ್ತಿದೆ.
ಬೆಳಗ್ಗೆ 8.30ಕ್ಕೆ ಕಂಬಳಕ್ಕೆ ಚಾಲನೆ ದೊರಕಲಿದ್ದು, ಕಜೆಕಾರಿನ ಪ್ರಗತಿಪರ ಕೃಷಿಕ ಕೆ. ಸುಂದರ ಪೂಜಾರಿ ಕೊರಂಜಿಕೋಡಿ ಅವರು ಕಂಬಳದ ಉದ್ಘಾಟನೆ ನೆರವೇರಿಸಲಿದ್ದು, ಹಿರಿಯ ಕಂಬಳ ಓಟಗಾರ ಜಯಶೆಟ್ಟಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು.
ಇದಕ್ಕೂ ಮುನ್ನ ಮೈರ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಸಹ ಪರಿವಾರ ದೈವಗಳಿಗೆ ವಿಶೇಷ ಪೂಜೆ ನಡೆದ ಬಳಿಕ ಓಟದ ಕೋಣಗಳನ್ನು ಕಂಬಳಗದ್ದೆಗೆ ಅದ್ದೂರಿಯ ಮೆರವಣಿಗೆಯಲ್ಲಿ ತರಲಾಗುವುದು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ನಾಯಕ ವಿಜಯೇಂದ್ರ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮತ್ತಿತರರು ಭಾಗವಹಿಸಲಿದ್ದಾರೆ.
ಕಂಬಳ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಪೂಜಾರಿಯವರ ಮಾರ್ಗದರ್ಶನದಲ್ಲಿ ಸಮಿತಿಯು ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದೆ. ಕರ್ನಾಟಕ ಸರಕಾರ ರೂಪಿಸಿದ ನಿಯಮವನ್ನು ಕಂಬಳಕೂಟದಲ್ಲಿ ಕಡ್ಡಾಯವಾಗಿ ಪಾಲಿಸಲಾಗುವುದು ಎಂದುಸಂಘಟಕರು ತಿಳಿಸಿದ್ದಾರೆ.