ಅಡಿಲೇಡ್: ಆಸ್ಟ್ರೇಲಿಯದಲ್ಲಿ ಮತ್ತೆ ನೊವಾಕ್ ಜೊಕೋವಿಕ್ ಆಟ ಶುರುವಾಗಿದೆ. ಅವರು ಮಂಗಳವಾರ “ಅಡಿಲೇಡ್ ಇಂಟರ್‌ನ್ಯಾಶನಲ್’ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನ ಪಂದ್ಯವಾಡಿ ಗೆದ್ದು ಬಂದರು.
ಕಳೆದ ವರ್ಷ ಕೋವಿಡ್ ಲಸಿಕೆ ತೆಗೆದು ಕೊಳ್ಳಲಿಲ್ಲ ಎಂಬ ಕಾರಣಕ್ಕೆ ಜೊಕೋಗೆ ಆಸ್ಟ್ರೇಲಿಯಕ್ಕೆ ಆಗಮಿಸದಂತೆ ನಿಷೇಧ ಹೇರಲಾಗಿತ್ತು. ಹೀಗಾಗಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಆಡಲಾಗದೆ ವಾಪಸಾಗಿದ್ದರು. ಅವರ ಈ ನಿಷೇಧ ಕಳೆದ ನವೆಂಬರ್‌ನಲ್ಲಿ ತೆರವುಗೊಂಡಿತ್ತು. ಹೀಗಾಗಿ ಈ ಬಾರಿ ವರ್ಷಾರಂಭದ ಗ್ರ್ಯಾನ್‌ಸ್ಲಾಮ್ ಆಡಲು ಸರ್ಬಿಯನ್ ಟೆನಿಸಿಗನಿಗೆ ಯಾವುದೇ ಅಡ್ಡಿ ಇರದು.
ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೋವಿಕ್ ಫ್ರಾನ್ಸ್‌ನ ಕಾನ್‌ಸ್ಟಂಟ್ ಲೆಸ್ಟೀನ್ ವಿರುದ್ಧ 6-3, 6-2 ಅಂತರದ ಗೆಲುವು ಸಾಧಿಸಿದರು.
“ಮತ್ತೆ ಆಸ್ಟ್ರೇಲಿಯದಲ್ಲಿ ಆಡುತ್ತಿರುವು ದಕ್ಕೆ ಖುಷಿಯಾಗುತ್ತಿದೆ. ನನ್ನನ್ನು ಸ್ವಾಗತಿಸಿ ನನ್ನ ಆಟ ನೋಡಲು ಬಂದ ಎಲ್ಲರಿಗೂ ಧನ್ಯವಾದಗಳು. ಟೆನಿಸ್‌ನಲ್ಲಿ ನಾನು ಅತ್ಯಂತ ಹೆಚ್ಚಿನ ಯಶಸ್ಸು ಸಾಧಿಸಿದ ದೇಶವಿದ್ದರೆ ಅದು ಆಸ್ಟ್ರೇಲಿಯ.
2008ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಗೆಲುವನ್ನು ಇಲ್ಲಿಯೇ ಸಾಧಿಸಿದ್ದೆ. ಕಳೆದ ವರ್ಷದ ಪರಿಸ್ಥಿತಿ ಎಲ್ಲರ ಪಾಲಿಗೂ ಪ್ರತಿಕೂಲವಾಗಿತ್ತು. ಮತ್ತೆ ನಿಮ್ಮೆದುರು ಆಡುತ್ತಿರುವುದನ್ನು ಆನಂದಿಸುತ್ತಿ
ದ್ದೇನೆ’ ಎಂಬುದಾಗಿ ಜೊಕೋವಿಕ್ ಹೇಳಿದರು.
ಜೊಕೋವಿಕ್ ಮುಂದಿನ ಸುತ್ತಿನಲ್ಲಿ ಮತ್ತೋರ್ವ ಫ್ರಾನ್ಸ್ ಆಟಗಾರ ಕ್ವೆಂಟಿನ್ ಹ್ಯಾಲಿಸ್ ಅವರನ್ನು ಎದುರಿಸಲಿದ್ದಾರೆ.