Advertisement

ನ. 30 –ಡಿ. 3: ‘ಆಳ್ವಾಸ್‌ ಕೃಷಿಸಿರಿ’

09:20 AM Oct 14, 2017 | Team Udayavani |

ಮೂಡಬಿದಿರೆ: ‘ಆಳ್ವಾಸ್‌ ನುಡಿಸಿರಿ’ಯ ಅಂಗವಾಗಿ ನ. 30ರಿಂದ ಮೊದಲ್ಗೊಂಡು ಡಿ. 3ರವರೆಗೆ ವಿದ್ಯಾಗಿರಿಯಲ್ಲಿ 3ನೇ ವರ್ಷದ ಕೃಷಿ ಸಮ್ಮೇಳನ ‘ಆಳ್ವಾಸ್‌ ಕೃಷಿಸಿರಿ’ ನಡೆಯಲಿದೆ ಎಂದು ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾಹಿತ್ಯ, ಸಂಸ್ಕೃತಿಗಳೊಡನೆ ಜೀವನಕ್ಕೆ ಮೂಲಾಧಾರವಾಗಿರುವ ಕೃಷಿಯೂ ಚಿಂತನ-ಮಂಥನಕ್ಕೆ ಒಳಗಾಗಬೇಕು; ಕೃಷಿ ಸಂಬಂಧಿ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆ, ಪ್ರದರ್ಶನ, ಗೋಷ್ಠಿಗಳ ಮೂಲಕ ಜನಮನಕ್ಕೆ ತಲುಪಿಸಬೇಕು ಎಂಬುದು ‘ಆಳ್ವಾಸ್‌ ಕೃಷಿಸಿರಿ’ಯ ಉದ್ದೇಶ. ಎರಡು ಎಕ್ರೆ ಪ್ರದೇಶಗಳಲ್ಲಿ ಸಂಪನ್ನಗೊಳ್ಳಲಿರುವ ಕೃಷಿ ಸಿರಿಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಸಂಘ, ಕೃಷಿಕ ಸಮಾಜ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗ ನೀಡಿವೆ.

Advertisement

ಕೃಷಿ ಸಿರಿಯಲ್ಲೇನಿದೆ?
ಬೆಂಗಳೂರಿನ ಸುಧಾರಿತ ಹಾಗೂ ಊರಿನ ಸಾಂಪ್ರದಾಯಿಕ ಕೃಷಿ ದರ್ಶನ, ಬೆಂಗಳೂರಿನ ಮತ್ಸ್ಯ ಮೇಳ, ಶ್ವಾನ, ಬೆಕ್ಕು, ಶಿವಮೊಗ್ಗ ದಿಂದ ಪಕ್ಷಿ, ಜಾನುವಾರು ಪ್ರದರ್ಶನ, ಶ್ವಾನ, ಬೆಕ್ಕುಗಳ ಬ್ಯೂಟಿ ಶೋ, ಆಲೆಪ್ಪಿಯಿಂದ ಬರುವ ಸಮುದ್ರದ ಚಿಪ್ಪುಗಳು, ಹೈದರಾಬಾದ್‌ನಿಂದ ಬೊನ್ಸಾಯಿ ಕೃಷಿ, 44 ವಿಧದ ಬಿದಿರಿನ ಗಿಡಗಳು, 40 ಬಗೆಯ ಬಿದಿರುಗಳು, ಪುಷ್ಪಗಳ, ಹಣ್ಣು ಕೃಷಿ ಸಾಹಿತ್ಯ-ಸಲಕರಣೆಗಳ, ಕೃಷಿ ಸಂಬಂಧಿ ಗೋಷ್ಠಿಗಳು, ರಾಜ್ಯ ಮಟ್ಟದ ಉತ್ತಮ ಕೃಷಿಕರಿಗೆ ಸಮ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೃಷಿಸಿರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಹೊತ್ತಿಗೆ ಅರಳಿ, ಫಲ ಬಿಡುವಂತಾಗಲು ತರಕಾರಿ ಮತ್ತು ಇತರ ಕೃಷಿ ಕಾರ್ಯ ನಡೆಯುತ್ತಲಿದೆ.

300ಕ್ಕೂ ಅಧಿಕ ಮಳಿಗೆ
ಕಳೆದ ಬಾರಿ 280 ಮಳಿಗೆಗಳಿದ್ದು ಈ ಬಾರಿ 300ಕ್ಕೂ ಅಧಿಕ ಮಳಿಗೆಗಳನ್ನು ಜೋಡಿಸಲಾಗುವುದು. ಮಳಿಗೆಯವರಿಗೆ ಉಚಿತ ಊಟ ವಸತಿ ಕಲ್ಪಿಸಲಾಗಿದೆ. ಸಂಬಂಧಿ ಮಾಹಿತಿ, ವಸ್ತು, ಪುಸ್ತಕ ಪ್ರದರ್ಶನ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲ. ಪ್ರದರ್ಶನ ಮಳಿಗೆಗಳು ಮತ್ತು ಮಾರಾಟ ಮಳಿಗೆಗಳ ಕುರಿತು ‘ಆಳ್ವಾಸ್‌ ನುಡಿಸಿರಿ, ಆಳ್ವಾಸ್‌ ಕೃಷಿಸಿರಿ ವಿಭಾಗ, ಆಳ್ವಾಸ್‌ ಆಡಳಿತ ಕಚೇರಿ, ಮೂಡಬಿದಿರೆ – 574227’ ಇಲ್ಲಿಂದ ನೋಂದಣಿ ಪತ್ರ ಪಡೆದು ಭರ್ತಿ ಮಾಡಿ ನ. 15ರ ಒಳಗಾಗಿ ತಲುಪಿಸಬೇಕಾಗಿದೆ ಎಂದು ತಿಳಿಸಿದರು.

ಎಸ್‌ಕೆಡಿಆರ್‌ಡಿಪಿ ಕಾರ್ಕಳ ತಾಲೂಕು ಯೋಜನಾಧಿಕಾರಿ ಕೃಷ್ಣ ಟಿ., ಮೂಡಬಿದಿರೆ ವಲಯ ರೈತ ಸಂಘದ ಅಧ್ಯಕ್ಷ ಎಚ್‌. ಧನಕೀರ್ತಿ ಬಲಿಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್‌ ಸಾಮ್ರಾಜ್ಯ, ದರೆಗುಡ್ಡೆಯ ಪ್ರಗತಿಪರ ಕೃಷಿಕ ಸುಭಾಶ್ಚಂದ್ರ ಚೌಟ, ಕೃಷಿ ವಿಚಾರ ವಿನಿಮಯ ಕೇಂದ್ರದ ಕಾರ್ಯದರ್ಶಿ ಜಿನೇಂದ್ರ ಜೈನ್‌ ಮತ್ತು ಸುಜಾತಾ ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next