ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸಂಸತ್‌ನಲ್ಲಿ ಮಸೂದೆ ಹೊರಡಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನ. 25ರಂದು ಸಂಜೆ 4 ಗಂಟೆಗೆ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಹಿಂಪ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ್ಯೋತಿಯ ಅಂಬೇಡ್ಕರ್ ವೃತ್ತದಿಂದ ಕೇಂದ್ರ ಮೈದಾನದ ವರೆಗೆ ಮಧ್ಯಾಹ್ನ 3.30ಕ್ಕೆ ಬೃಹತ್ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಶ್ರೀರಾಮ ಭಕ್ತರು ಆಗಮಿಸುವರು ಎಂದರು.
ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಆರಂಭಗೊಂಡ ಆಂದೋಲನ ಸಾಧು-ಸಂತರ ಆಶೀರ್ವಾದದಿಂದ ಯಶಸ್ವಿಯಾಗುತ್ತಿದೆ. ರಾಮಭಕ್ತರು ಪಾಲ್ಗೊಂಡಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಾಗಿದೆ. ಎಲ್ಲ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಮೂಲಕ ನಿವಾರಿಸಬೇಕು ಎಂದು ಆಗ್ರಹಿಸಿದರು.
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಸಹ ಕಾರ್ಯದರ್ಶಿ ಪ್ರದೀಪ್, ಬಜರಂಗದಳ ಸಹಸಂಚಾಲಕ ಪುನೀತ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಡಿ. 2: ಉಡುಪಿಯಲ್ಲಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಮಸೂದೆ ಮಂಡಿಸುವಂತೆ ಆಗ್ರಹಿಸಿ ಪ್ರತೀ ಜಿಲ್ಲೆಯಲ್ಲೂ ವಿಹಿಂಪ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆಗಳನ್ನು ಆಯೋಜಿಸಲಾಗಿದೆ. ಅದರಂತೆ ನ. 18ರಂದು ಕಾಸರಗೋಡಿನಲ್ಲಿ, ನ. 30ರಂದು ಕೊಡಗಿನಲ್ಲಿ ಹಾಗೂ ಡಿ. 2ರಂದು ಉಡುಪಿ ಯಲ್ಲಿ ಬೃಹತ್ ಜನಾಗ್ರಹ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಪ್ರೊ| ಎಂ.ಬಿ. ಪುರಾಣಿಕ್ ತಿಳಿಸಿದರು.