Advertisement

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

11:46 PM Oct 01, 2023 | Team Udayavani |

ಮಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು “ಬೆಂಗಳೂರು ಕಂಬಳ-ನಮ್ಮ ಕಂಬಳ’ ಶಿರ್ಷಿಕೆಯಡಿ ಕಂಬಳ ನಡೆಯಲಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ನಡೆದ ಸಭೆಯ ಅನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಂಬಳಕ್ಕೆ 7 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಕಂಬಳ ವೀಕ್ಷಿಸಲು ಗ್ಯಾಲರಿ, 150ಕ್ಕೂ ಅಧಿಕ ಕರಾವಳಿಯ ವೈವಿಧ್ಯತೆಯನ್ನು ಸಾರುವ ಆಹಾರ, ತಿಂಡಿ ತಿನಿಸುಗಳು, ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಅ. 2ರಿಂದ 145 ಮೀಟರ್‌ ಉದ್ದದ ಜೋಡುಕರೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

125ಕ್ಕೂ ಅಧಿಕ
ಜತೆ ಕೋಣಗಳು
ನ. 23ರಂದು ಮಂಗಳೂರಿನಿಂದ 125ಕ್ಕೂ ಅಧಿಕ ಜತೆ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದ್ದು ಹಾಸನದಲ್ಲಿ ಭವ್ಯ ಸ್ವಾಗತ ನೀಡಲಿವೆ. ಅಲ್ಲಿ 2 ಗಂಟೆಗಳ ಕಾಲ ತಂಗಲು ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನಲ್ಲಿ ಒಂದು ದಿನ ವಿಶ್ರಾಂತಿ ಸಿಗಲಿದೆ. ಕಂಬಳಕ್ಕೆ ತೆರಳುವ ಕೋಣಗಳಿಗೆ, ಪರಿಚಾರಕರಿಗೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ರೂಪಿಸಲಾಗಿದೆ.

ಕೋಣಗಳ ಯಜಮಾನರ ಆಗ್ರಹದಂತೆ ಕೋಣಗಳ ಕ್ಷಮತೆ, ಆರೋಗ್ಯ ಕಾಪಾಡುವ ದೃಷ್ಟಿಯಿಂದ 6 ಟ್ಯಾಂಕರ್‌ ನೀರನ್ನು ದ.ಕ. ಜಿಲ್ಲೆಯಿಂದಲೇ ಕೊಂಡೊಯ್ಯಲಾಗುವುದು. ಕಂಬಳಕ್ಕೆ ಅಂದಾಜು 5ರಿಂದ 6 ಕೋ. ರೂ. ವೆಚ್ಚ ತಗಲಲಿದ್ದು ವಿಜೇತ ಪ್ರಥಮ ಕೋಣಗಳಿಗೆ 2 ಪವನ್‌ ಬಂಗಾರ, ದ್ವಿತೀಯ ಕೋಣಗಳಿಗೆ 1 ಪವನ್‌ ಬಂಗಾರ, ಭಾಗವಹಿಸಿದ ಪ್ರತಿ ಕೋಣಗಳಿಗೂ ಬಂಗಾರದ ಪದಕ ನೀಡಲಾಗುವುದು ಎಂದು ಅಶೋಕ್‌ ರೈ ತಿಳಿಸಿದರು.

ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ , ಕಂಬಳ ಶಿಸ್ತು ಸಮಿತಿಯ ಮುಖ್ಯಸ್ಥ ಪಿ.ಆರ್‌. ಶೆಟ್ಟಿ, ಮಾಜಿ ಅಧ್ಯಕ್ಷ ಎರ್ಮಾಳ್‌ ರೋಹಿತ್‌ ಹೆಗ್ಡೆ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌, ತೀರ್ಪುಗಾರರಾದ ವಿಜಯ ಕುಮಾರ್‌ ಕಂಗಿನಮನೆ, ಕಂಬಳ ಸಮಿತಿ ಕೋಶಾಧಿಕಾರಿ ಚಂದ್ರಹಾಸ್‌ ಸನಿಲ್‌, ಬೆಂಗಳೂರು ಕಂಬಳ ಸಮಿತಿಯ ಮುರಳೀಧರ್‌ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next