ಬೆಂಗಳೂರು: ಬರೋಬ್ಬರಿ 100 ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್ ಮತ್ತೆ ಅಂದರ್ ಆಗಿದ್ದಾನೆ.
ಹೆಣ್ಣೂರು ಠಾಣೆ ಪೊಲೀಸರು ಹೆಣ್ಣೂರಿನ ಪ್ರಕೃತಿ ಲೇಔಟ್ ನಿವಾಸಿ ಕಾರ್ತೀಕ್ ಅಲಿಯಾಸ್ ಎಸ್ಕೇಪ್ ಕಾರ್ತೀಕ್(33) ನನ್ನು ಬಂಧಿಸಿದ್ದಾರೆ.
ಆತನಿಂದ 12.51 ಲಕ್ಷ ರು. ಮೌಲ್ಯದ 278 ಗ್ರಾಂ ಚಿನ್ನಾಭರಣಜಪ್ತಿ ಮಾಡಲಾಗಿದೆ. ಎಸ್ಕೇಪ್ ಕಾರ್ತೀಕ್ ಯಾವುದಾ ದರೂ ಮನೆಯನ್ನು ಟಾರ್ಗೆಟ್ ಮಾಡಿದರೆ ಆ ಮನೆಯ ಬಾಲ್ಕನಿ, ಕಿಟಕಿ ಮೂಲಕ ನುಗ್ಗಿ ಕೆ.ಜಿ. ಗಟ್ಟಲೇ ಚಿನ್ನಾಭರಣ, ನಗದು ಹಣ ಎಗರಿಸಿ ಎಸ್ಕೇಪ್ ಆಗಿಬಿಡುತ್ತಿದ್ದ. ಸಂಜೆ ವೇಳೆ ನಗರದಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ಕತ್ತಲಾಗ್ತಿದ್ದಂತೆ ವಾಚ್ ಮಾಡಲು ಇಬ್ಬರು ಹುಡುಗರನ್ನ ಕರೆದುಕೊಂಡು ಹೋಗಿ ರಾಡ್ ನಿಂದ ಮನೆ ಬೀಗ ಹೊಡೆದು ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ. ಒಮ್ಮೆ ಕಳವು ಮಾಡಲು ಕರೆದೊಯ್ದ ಹುಡುಗರನ್ನ ಮತ್ತೆ ಬಳಸಿಕೊಳ್ಳುತ್ತಿರಲಿಲ್ಲ. ತನ್ನ ಮಾಹಿತಿ ಸೋರಿಕೆಮಾಡಬಹುದು ಎಂಬ ಕಾರಣಕ್ಕೆ ಕಳ್ಳತನ ಮಾಡಲು ಹುಡುಗರನ್ನು ಆಗಾಗ ಬದಲಾಯಿಸುತ್ತಿದ್ದ. 2005ರಲ್ಲಿ ಕಳ್ಳತನ ಆರಂಭಿಸದ ಈತ ಇದುವರೆಗೆ ಬರೋಬ್ಬರಿ 100 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಆದರೂ ಇನ್ನೂ ಹಳೆ ಚಾಳಿ ಮುಂದುವರಿಸುತ್ತಲೇ ಇದ್ದಾನೆ.
ಎಸ್ಕೇಪ್ ಕಾರ್ತೀಕ ಹೆಸರು ಬಂದಿದ್ದು ಏಕೆ?: 2007ರಲ್ಲಿ ಎಸ್ಕೇಪ್ ಕಾರ್ತಿಕ್ ಸಿಸಿಬಿ ಪೊಲೀಸರಿಗೆ ಲಾಕ್ ಆಗಿದ್ದ ಈತ ಜೈಲಿನಲ್ಲಿ ಇರುವಾಗಲೇ ಇಸ್ಕಾನ್ ಊಟ ಪೂರೈಸುತ್ತಿದ್ದ ವ್ಯಾನಿನ ಛಾಸೀಸ್ ಹಿಡಿದು ಮೊದಲ ಬಾರಿ ಎಸ್ಕೇಪ್ ಆಗಿದ್ದ. 2010ರಲ್ಲಿ ಜೀವನ್ ಭೀಮಾ ನಗರ ಪೊಲೀಸರಿಗೆ ಮನೆಗಳ್ಳತನ ಪ್ರಕರದಲ್ಲಿ ಬಂಧನವಾಗಿದ್ದು, ಪೊಲೀಸರ ವಿಚಾರಣೆ ವೇಳೆ ಬಾತರೂಮ್‌ನಿಂದ ಎಸ್ಕೇಪ್ ಆಗಿದ್ದ. ಇದರಿಂದ ಈತನಿಗೆ ಎಸ್ಕೇಪ್ ಕಾರ್ತಿಕ್ ಎಂಬ ಹೆಸರು ಬಂದಿದೆ.