ಹುಣಸೂರು: ಸುಮಾರು ಹನ್ನೆರಡು ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ದೊಡ್ಡಹೆಜೂjರು ಕೆರೆ ಹಾಗೂ ತಾಲೂಕಿನ ಜೀವನದಿ ಲಕ್ಷ್ಮಣತೀರ್ಥ ನದಿಗೆ ಶಾಸಕ ಎಚ್.ವಿಶ್ವನಾಥ್ ಹಾಗೂ ಗಣ್ಯರು ಬಾಗಿನ ಅರ್ಪಿಸಿದರು.
ನಂತರ ವಿಶ್ವನಾಥ್ ಮಾತನಾಡಿ, ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ತುಂಬಿರುವುದು ಹಾಗೂ ಲಕ್ಷ್ಮಣತೀರ್ಥ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ, ಈ ನಿಟ್ಟಿನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸದೆ, ಎಲ್ಲ ಕೆರೆಗೆ ನೀರು ತುಂಬಿಸುವುದಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಹನಗೋಡು ಅಣೆಕಟ್ಟೆ ಹಾಗೂ ನಾಲೆಗಳ ಆಧುನೀಕರಣದ ಬಗ್ಗೆ ಆಗಿರುವ ಪ್ರಗತಿ ಬಗ್ಗೆ ಹಾರಂಗಿ ಎಇಇ ಅವರಿಂದ ಮಾಹಿತಿ ಬಯಸಿದಾಗ ಈಗಾಗಲೆ ಆಧುನೀಕರಣಕ್ಕೆ 152 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಎಇಇ ಕುಶುಕುಮಾರ್ ತಿಳಿಸಿದರು.
ಪರಿಹಾರಕ್ಕೆ ಸೂಚನೆ: ಲಕ್ಷ್ಮಣತೀರ್ಥ ನದಿ ಹಿನ್ನೀರು ಹಾಗೂ ಪ್ರವಾಹದಿಂದ ಹನಗೋಡು ಭಾಗದಲ್ಲಿ ಬೆಳೆಗಳಿಗೆ ಹಾನಿ ಹಾಗೂ ಮೃತಪಟ್ಟಿರುವ ಜಾನುವಾರುಗಳ ಮಾಲಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಲಕ್ಷ್ಮಣತೀರ್ಥ ನದಿ ಸ್ವತ್ಛತೆಗೆ ಆದ್ಯತೆ: ನಗರದ ಮಧ್ಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕೆ ಈಗ ಮಂಜೂರಾಗಿರುವ 31 ಕೋಟಿ ರೂ. ಅನುದಾನ ಸಾಲದು, ಈ ಬಗ್ಗೆ ಗ್ರೀನ್ ಕಾವೇರಿ ಸಂಸ್ಥೆ, ತಾಂತ್ರಿಕ ತಜ್ಞರಿಂದ ಮಾಹಿತಿ ಪಡೆದು ಹಾಗೂ ಎಲ್ಲರೊಂದಿಗೆ ಚರ್ಚಿಸಿ ನೀಲನಕ್ಷೆ ತಯಾರಿಸಿ, ನದಿ ಶುದ್ಧೀಕರಣಕ್ಕೆ ಕ್ರಮ ವಹಿಸಲಾಗುವುದೆಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಇಒ ಸಿಆ. ಕೃಷ್ಣಕುಮಾರ್, ತಾಪಂ ಸದಸ್ಯೆ ಮಂಜುಳಾರಾಜೇಗೌಡ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಮಾಜಿ ಸದಸ್ಯ ಹನಗೋಡು ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಬಿ. ಮಾದೇಗೌಡ, ಕಾರ್ಯದರ್ಶಿ ಆರ್.ಸ್ವಾಮಿ, ನಗರ ಅಧ್ಯಕ್ಷ ರವೀಶ್, ರೈತ ಸಂಘದ ಅಧ್ಯಕ್ಷ ಬೆಟ್ಟೇಗೌಡ, ಎಪಿಎಂಸಿ ಸದಸ್ಯ ಸುಭಾಷ್, ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜು, ಮುಖಂಡರಾದ ದಾ.ರಾ.ಮಹೇಶ್, ಹರವೆಶಿವಣ್ಣ, ವೆಂಕಟಪ್ಪ, ಗಿರಿಧರ್, ಹಿಂಡಗುಡ್ಲುರಾಜೇಗೌಡ ಎಂಜಿನಿಯರ್ ಇದ್ದರು.