Advertisement

ಹಿರಿಯಾಜೆ: ನೀರಿನ ಪರ್ಯಾಯ ವ್ಯವಸ್ಥೆಗೆ ಸೂಚನೆ

02:42 PM Nov 30, 2018 | Team Udayavani |

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾ.ಪಂ.ನ ಸವಣಾಲು ಗ್ರಾಮದ ಹಿರಿಯಾಜೆ ಕಾಲನಿ ಜನತೆಗೆ ಕುಡಿಯಲು ಯೋಗ್ಯವಲ್ಲದ ನೀರನ್ನು ಕೊಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಯಲ್ಲಿ ಸ್ಥಳಕ್ಕೆ ಬೆಳ್ತಂಗಡಿ ಸಮಾಜ ಕಲ್ಯಾಣದ ಇಲಾಖೆಯ ಸ. ನಿರ್ದೇಶಕರು ಭೇಟಿ ನೀಡಿ, ವಾರದೊಳಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಉದಯವಾಣಿ ಸುದಿನ ನ. 28ರಂದು ‘ಕುಡಿಯಲು ಯೋಗ್ಯವಲ್ಲದ ನೀರನ್ನೇ ಕುಡಿಯಬೇಕಾದ ಸ್ಥಿತಿ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.

Advertisement

ವರದಿಗೆ ಸ್ಪಂದನೆ ಎಂಬಂತೆ ಅಧಿಕಾರಿ ಸಮಾಜ ಕಲ್ಯಾಣದ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಎಂ. ಪಾಟೀಲ್‌ ಅವರು ನೀರು ಪೂರೈಕೆಯ ಕುರಿತು ಮಾಹಿತಿ ಪಡೆದರು. ಹಿರಿಯಾಜೆ ಕಾಲನಿಯಲ್ಲಿ ಪರಿಶಿಷ್ಟ ಜಾತಿಯ 5 ಹಾಗೂ ಪಂಗಡದ ಒಂದು ಕುಟುಂಬ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಅಧಿಕಾರಿಗಳ ಭೇಟಿಯ ಸಂದರ್ಭ ಸಾರ್ವಜನಿಕರು ನೀರಿನ ತೊಂದರೆ, ಆರೋಗ್ಯ ಹದಗೆಟ್ಟ ಕುರಿತು ತಿಳಿಸಿದರು.

ಪ್ರಸ್ತುತ ಹಳ್ಳವೊಂದಕ್ಕೆ ರಿಂಗ್‌ ಅಳವಡಿಸಿ ಅದರಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಮುಂದೆ ಸ್ಥಳೀಯರಿಗೆ ಕುಡಿಯುವುದಕ್ಕಾಗಿ ಖಾಸಗಿ ಬಾವಿಯೊಂದಕ್ಕೆ ಗ್ರಾ.ಪಂ.ನ ಪಂಪು ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು. ಜತೆಗೆ ಈಗಾಗಲೇ ಕೊಳವೆ ಬಾವಿಗಾಗಿ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಮಹಾದೇವ ವಿವರಿಸಿದರು.

ಪ್ರಸ್ತುತ ನೀರಿನ ಸ್ಥಿತಿಯನ್ನು ಪರಿಶೀಲಿಸಿದಾಗ ಅದು ಯೋಗ್ಯವಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಶೀಘ್ರ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದ್ದೇವೆ. ಜತೆಗೆ ನಮ್ಮ ಇಲಾಖೆಯಿಂದಲೂ ಮೇಲಧಿಕಾರಿಗಳು, ಶಾಸಕರಿಗೆ ಬರೆಯಲಾಗುತ್ತದೆ ಎಂದು ಎಚ್‌.ಎಂ. ಪಾಟೀಲ್‌ ಅವರು ಉದಯವಾಣಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ನಳಿನಿ, ಪ್ರಭಾರ ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿ ಹೇಮಲತಾ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next