ಹುಬ್ಬಳ್ಳಿ: ಲಿಡ್ಕರ್ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ಶನಿವಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಾರವಾರ ರಸ್ತೆಯ ಕೆಂಪಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅವರು, 5 ಕೋಟಿ ರೂ. ವೆಚ್ಚದಲ್ಲಿ ಸುಂದರ ಪ್ರವಾಸಿ ತಾಣವಾಗಿ ಕೆರೆ ರೂಪುಗೊಳಿಸಲಾಗುತ್ತಿದೆ. ಮಳೆಗಾಲ ಆರಂಭವಾದರೆ ಕಾಮಗಾರಿಗಳು ವಿಳಂಬವಾಗುತ್ತವೆ. ಹೀಗಾಗಿ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಯೋಧ್ಯಾನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಮುಕ್ತಾಯ ಹಂತದಲ್ಲಿರುವ ಡಾ| ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಪರಿಶೀಲಿಸಿದ ಬಳಿಕ ಭವನದ ಆವರಣದಲ್ಲಿ ಅಂಬೇಡ್ಕರ ಅವರ ಪುತ್ಥಳಿ ಸ್ಥಾಪಿಸಬೇಕು. ಭವನದ ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನೇಕಾರ ನಗರ ಬಳಿಯ ವಾಣಿ ಪ್ಲಾಟ್ ಜನರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಅಗತ್ಯ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಶ್ರೀರಾಮ ಕಾಲೋನಿಯ ಎಚ್‌ಡಿ-1 ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿದರು. ಉದ್ಯಾನವನ, ಕಲ್ಯಾಣ ಕಾರ್ಯಗಳಿಗಾಗಿ ಸಮುದಾಯ ಭವನ ಮತ್ತು ಅಂಗನವಾಗಿ ಕೇಂದ್ರ ನವೀಕರಣ ಮಾಡಬೇಕು. ಸೋನಿಯಾ ಗಾಂಧಿ ನಗರದಲ್ಲಿನ ನೀರಿನ ಟ್ಯಾಂಕ್‌ನಿಂದ ಸರಿಯಾಗಿ ನೀರಿನ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಟಗರ ಓಣಿ, ಗೌಸಿಯಾ ಟೌನ್ ಗಾರ್ಡನ್, ರಣದಮ್ಮ ಕಾಲೋನಿ, ಮಂಟೂರು ರಸ್ತೆ ಸೇರಿದಂತೆ ಇನ್ನಿತರೆಡೆ ಪರಿಶೀಲನೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸುಧಾ ಮಣಿಕುಂಟ್ಲ, ಪಾಲಿಕೆ ಅಧೀಕ್ಷಕ ಎಂಜಿನಿಯರ್ ಮಹೇಶ, ಕಾರ್ಯನಿರ್ವಾಹಕ ಅಭಿಯಂತ ಮಹೇಶ ಅರಳಿಹೊಂಡ, ವಲಯಾಧಿಕಾರಿ ಬಸವರಾಜ ಲಮಾಣಿ, ಗಣೇಶ ನಾಯ್ಕ ಇನ್ನಿತರರಿದ್ದರು.