Advertisement

3 ಸಾವಿರ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್: ಸಚಿವ ಎಸ್.ಟಿ. ಸೋಮಶೇಖರ್

05:40 PM Feb 04, 2022 | Team Udayavani |

ಪಿರಿಯಾಪಟ್ಟಣ: ಸಹಕಾರ ಇಲಾಖೆಯಲ್ಲಿ ಯುವಕರಿಗೆ ಒತ್ತು ನೀಡಲಾಗುತ್ತಿದೆ. 5 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಲಾಗಿದ್ದು ಈಗಾಗಲೇ 3 ಸಾವಿರ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

Advertisement

ಮೈಸೂರು ಡಿಸಿಸಿ ಬ್ಯಾಂಕ್ ಶಾಖೆಯ ಕಟ್ಟಡ ನಿರ್ಮಾಣ ಹಾಗೂ ನಂದಿನಿ ಮಿಲ್ಕ್ ಗ್ಯಾಲಕ್ಸಿ ಹಾಗೂ ನಂದಿನಿ ಕೆಫೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಈ ಭಾಗದಲ್ಲಿ ಪಶು ಆಹಾರ ಉತ್ಪಾದನಾ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಕೆಎಂಎಫ್ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ ಎಂದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಡಿಸಿಸಿ ಬ್ಯಾಂಕ್, ರೈತರಿಗೆ ಸೂಕ್ತ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದೆ. ಮೈಸೂರು ಡಿಸಿಸಿ ಬ್ಯಾಂಕ್ ನಷ್ಟದಲ್ಲಿತ್ತು. ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರೈತರ ಕಷ್ಟಸುಖಗಳಿಗೆ ಸ್ಪಂದಿಸಬೇಕೆಂಬ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಮೈಸೂರು ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂಬರ್ ಒನ್ ಸ್ಥಾನಕ್ಕೇರುವಂತಾಗಿದೆ ಎಂದರು.

ಮೈಸೂರು ಡಿಸಿಸಿ ಬ್ಯಾಂಕ್ ನಿಗದಿತ ಗುರಿಯಲ್ಲಿ 80% ಸಾಲ ನೀಡಿದೆ. ಮಾರ್ಚ್ ಗೆ ನೂರರಷ್ಟು ಗುರಿ ತಲುಪಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ದೇಶ-ವಿದೇಶಗಳ ನಾನಾ ಭಾಗಗಳಿಗೆ ನಂದಿನಿ ತುಪ್ಪ ಪೂರೈಕೆಯಾಗುತ್ತದೆ. ನಂದಿನಿ ಹಾಲು ಕೂಡ ಅನ್ಯ ರಾಜ್ಯಗಳಿಗೆ ಹೋಗುತ್ತದೆ. ಹೀಗಾಗಿ ನಂದಿನಿ ಬ್ರ್ಯಾಂಡ್ ಗೆ ಕಳಂಕ ತರುವವರು, ನಕಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳುವಂತೆ ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಮಹದೇವಪ್ಪ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ, ಮೈಮೂಲ್ ಅಧ್ಯಕ್ಷ ಪ್ರಸನ್ನ ಸೇರಿದಂತೆ ನಾನಾ ಮುಖಂಡರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next